ಉತ್ತರ ಕನ್ನಡದಿಂದ ಉತ್ತರ ಕರ್ನಾಟಕದತ್ತ…

ಯಾತ್ರೆಗೆ ದಿನಕಳೆದಂತೆ ಜನಸ್ಪಂದನೆ ಹೆಚ್ಚುತ್ತಿದೆ. ಯಾತ್ರೆಗೆ ಜನ ಸೇರುತ್ತಿಲ್ಲ ಎಂದು ಟೀಕೆ ಮಾಡಿದವರಿಗೆ ಜನರೇ ಉತ್ತರ ನೀಡುತ್ತಿದ್ದಾರೆ. ಬಹುಶಃ ಜನರು ಬರುತ್ತಿರುವುದನ್ನು ನೋಡಿಯೊ ಏನೋ, ಜನ ಬರುತ್ತಿಲ್ಲ ಎಂದು ಟೀಕೆ ಮಾಡುವವರೂ ಸುಮ್ಮನಾಗಿದ್ದಾರೆ.

ನವೆಂಬರ್‍ 14ರಂದು ಉತ್ತರ ಕನ್ನಡ ಜಿಲ್ಲೆಯ ಕುಮಟ, ಅಂಕೋಲಾ, ಶಿರಸಿಯಲ್ಲಿ ಬಹಿರಂಗ ಸಭೆಗಳು ನಡೆದವು. ಉತ್ತರ ಕನ್ನಡ ಜಿಲ್ಲೆ ಅತ್ಯಂತ ಸುಂದರ ಹಾಗೂ ಸ್ವಚ್ಛ ಪರಿಸರ ಹೊಂದಿದೆ. ನೈಸರ್ಗಿಕ ಸಂಪನ್ಮೂಲಗಳು, ಪ್ರವಾಸಿ ತಾಣಗಳು ಹೇರಳವಾಗಿವೆ. ಆದರೆ ಜಿಲ್ಲೆಯ ಅಭಿವೃದ್ಧಿ ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ.

ಅದಾದ ನಂತರ ನವೆಂಬರ್‍ 15ರಂದು ಯಾತ್ರೆಗೆ ಒಂದು ದಿನದ ವಿರಾಮ. ವಿರಾಮದ ಸಮಯದಲ್ಲಿ ಮಲಗಿ ವಿರಮಿಸುವಷ್ಟು ಸಮಯವಂತೂ ಇರಲಿಲ್ಲ. ಕೆಲವು ಕೆಲಸಗಳಿದ್ದುದರಿಂದ ಬೆಂಗಳೂರಿಗೆ ಆಗಮಿಸಿದ್ದೆ. ನವೆಂಬರ್‍ 16ರಂದು ಬೆಳಿಗ್ಗೆ ಎದ್ದು ಮುಂಡಗೋಡ, ಹಳಿಯಾಳದಲ್ಲಿ ಸಭೆ ನಡೆಸಿ, ರಾತ್ರಿ ಹೊತ್ತಿಗೆ ಯಾತ್ರೆ ಖಾನಾಪುರ ತಲುಪಿತು. ಎಲ್ಲೆಡೆಯೂ ಯಾತ್ರೆಗೆ ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿರುವುದು ನನಗೆ ಹೊಸ ಶಕ್ತಿ ದೊರೆತಂತಾಗಿದೆ.

ಹಳಿಯಾಳ ಉತ್ತರ ಕನ್ನಡ ಜಿಲ್ಲೆಯ ಗಡಿ. ಅಲ್ಲಿಂದ ಮುಂದೆ ಯಾತ್ರೆ ಬೆಳಗಾವಿ ಜಿಲ್ಲೆಗೆ ಪ್ರವೇಶಿಸಿತು. ಉತ್ತರ ಕನ್ನಡದಿಂದ ಉತ್ತರ ಕರ್ನಾಟಕದತ್ತ ಹೊರಟಿದೆ.

ಖಾನಾಪುರದಲ್ಲಿ ಕಾರ್ಯಕ್ರಮ ಮುಗಿಸಿ ಹೊರಟಾಗ ಖಾನಾಪುರ ಮತ್ತು ಪಾರಸವಾಡ ನಡುವೆ ಶ್ರೀನಿಕೇತನ ಶಾಲೆಯ ಮಕ್ಕಳು ಅನಿರೀಕ್ಷಿತವಾಗಿ ಹೂವಿನ ಮಳೆಯ ಸ್ವಾಗತ ಕೋರಿದ್ದನ್ನು ಮರೆಯುವಂತಿಲ್ಲ. ಮಕ್ಕಳು ಹಾಗೂ ಶಾಲೆಯ ಸಿಬ್ಬಂದಿ ಪ್ರೀತಿಯಿಂದ ರಸ್ತೆಯನ್ನೇ ಹೂವಿನಿಂದ ಅಲಂಕರಿಸಿಬಿಟ್ಟಿದ್ದರು. ಅವರಿಗೆ ಧನ್ಯವಾದ ಹೇಳಲು ಶಬ್ದಗಳು ಸಾಲದು.