Speech copy of B.S. Yeddyurappa in Parliament 11-08-2015

ಸನ್ಮಾನ್ಯ ಅಧ್ಯಕ್ಷರೆ,
ಕರ್ನಾಟಕ ರಾಜ್ಯದಲ್ಲಿ ತೀವ್ರತರವಾದ ಮಳೆಯ ಅಭಾವದಿಂದ ಕೃಷ್ಣ ಕಣಿವೆ, ಭದ್ರಾ, ತುಂಗಭದ್ರ, ಘಟಪ್ರಭ, ಮಲಪ್ರಭ, ನಾರಾಯಣಪುರ ಜಲಾಶಯಗಳಲ್ಲಿ ಆಗಸ್ಟ್ ಮೊದಲ ವಾರದವರೆಗೆ, ಕಳೆದ ವರ್ಷ ಇದ್ದ ನೀರಿನ ಮಟ್ಟಕ್ಕಿಂತ, ಈಗ ನೀರು ಕಡಿಮೆ ಇದೆ.
123 ಟಿ.ಎಂ.ಸಿ ಸಾಮರ್ಥ್ಯದ ಆಲಮಟ್ಟಿ ಅಣೆಕಟ್ಟಿನಲ್ಲಿ ಕಳೆದ ವರ್ಷ ಈ ಸಮಯದಲ್ಲಿ 102 ಟಿ.ಎಂ.ಸಿ ನೀರಿತ್ತು, ಈ ವರ್ಷ ಕೇವಲ 58 ಟಿ.ಎಂ.ಸಿ ಮಾತ್ರ ನೀರಿದೆ. ಕಳೆದ ವರ್ಷ ರಾಜ್ಯದ ಎಲ್ಲಾ ಅಣೆಕಟ್ಟುಗಳಲ್ಲಿ 297 ಟಿ.ಎಂ.ಸಿ ನೀರು ಸಂಗ್ರಹವಾಗಿತ್ತು, ಈ ವರ್ಷ ಈವರೆಗೆ 201 ಟಿ.ಎಂ.ಸಿ ನೀರು ಮಾತ್ರ ಸಂಗ್ರಹವಾಗಿದೆ.
115  ಟಿ.ಎಂ.ಸಿ ನೀರಿನ ಸಂಗ್ರಹ ಸಾಮರ್ಥ್ಯವಿರುವ ಕಾವೇರಿ ಕಣಿವೆಯ ಹೇಮಾವತಿ, ಕೆ.ಆರ್.ಎಸ್, ಕಬಿನಿ ಮತ್ತು ಹಾರಂಗಿ ಜಲಾಶಯಗಳಲ್ಲಿ ಕಳೆದ ವರ್ಷ ಈ ಅವಧಿಯಲ್ಲಿ 93 ಟಿ.ಎಂ.ಸಿ ನೀರು ಸಂಗ್ರಹವಾಗಿತ್ತು; ಆದರೆ ಈ ವರ್ಷ ಕೇವಲ 84 ಟಿ.ಎಂ.ಸಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಈ ಸಮಯದಲ್ಲಿ ಹಾರಂಗಿ, ಹೇಮಾವತಿ, ಕಬಿನಿ ಅಣೆಕಟ್ಟುಗಳು ಬಹುಪಾಲು ತುಂಬಿದ್ದವು. ಕೆ.ಆರ್.ಎಸ್. ಮುಕ್ಕಾಲು ಭಾಗ ಭರ್ತಿಯಾಗಿತ್ತು, ಆಗ ತಮಿಳುನಾಡಿಗೆ 43 ಟಿ.ಎಂ.ಸಿ ನೀರು ಹರಿಸಲಾಗಿತ್ತು, ಈ ವರ್ಷ ಜಲಾಶಯಗಳಲ್ಲಿ ನೀರಿಲ್ಲದಿದ್ದರೂ ತಮಿಳುನಾಡಿಗೆ 39 ಟಿ.ಎಂ.ಸಿ ನೀರು ಹರಿಸಲಾಗಿದೆ.
2015 -16ನೇ ಸಾಲಿನಲ್ಲಿ ಮುಂಗಾರು-ಹಿಂಗಾರು ಹಾಗೂ ಬೇಸಿಗೆ ಹಂಗಾಮಿನಲ್ಲಿ ರಾಜ್ಯದಲ್ಲಿ ಕೃಷಿ ಬೆಳೆಗಳ ಬಿತ್ತನೆ ಮಾಡಲು- ನೀರಾವರಿ ಆಶ್ರಿತ ಬಿತ್ತನೆಯ ಮೂಲಕ 31.71ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ- ಮಳೆ ಆಶ್ರಿತ/ ಬಿತ್ತನೆಯ  ಮೂಲಕ 71.66 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಅಂದರೆ ಒಟ್ಟು 111.37 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಇಟ್ಟುಕೊಂಡಿದ್ದರೆ ಈವರೆಗೆ ನೀರಾವರಿ ಆಶ್ರಿತ ಬಿತ್ತನೆಯ ಮೂಲಕ 9.07 ಲಕ್ಷ ಹೆಕ್ಟರ್ ಹಾಗೂ ಮಳೆ ಆಶ್ರಯದ ಮೂಲಕ ಕೇವಲ 30.05  ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆ ಆಗಿದ್ದು-ಕಳೆದ 1 ತಿಂಗಳಿಂದ ಮಳೆಯ ಅಭಾವದಿಂದ 100ಕ್ಕೆ 80 ಭಾಗ ಮಳೆ ಆಶ್ರಿತ ಒಣ ಬೇಸಾಯದ ಬಿತ್ತನೆ ಮಾಡಿದ ಬೆಳೆ ಸಂಪೂರ್ಣವಾಗಿ ನಾಶವಾಗಿದ್ದು ರೈತ ಹಾಕಿದ ಬಿತ್ತನೆ ಬೀಜ, ರಸ ಗೊಬ್ಬರವನ್ನು ಕಳೆದುಕೊಂಡು ಬೀದಿ ಪಾಲಾಗಿದ್ದಾನೆ.
ರಾಜ್ಯದ ಹಲವು ಭಾಗಗಳಲ್ಲಿ ಜಾನುವರಗಳಿಗೆ ಕುಡಿಯುವ ನೀರು, ಮೇವು ಸಿಗದಂತ ವಾತಾವರಣ ಸೃಷ್ಟಿಯಾಗಿದೆ, 130 ಕ್ಕೂ ಹೆಚ್ಚು ತಾಲ್ಲೂಕ್ಕುಗಳಲ್ಲಿ ಬರ ಆವರಿಸಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರ ತಕ್ಷಣವೇ ರೈತರು ಸಹಕಾರ ಸಂಘಗಳಿಂದ ಪಡೆದ ಸಾಲ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಿಂದ ಪಡೆದ ರೈತರ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡಬೇಕು ಹಾಗೂ ಸಮರೋಪಾದಿಯಲ್ಲಿ ಪರಿಹರ ಕ್ರಮಗಳನ್ನು ಕೈಗೊಳ್ಳಬೇಕು.
ಕರ್ನಾಟಕ ರಾಜ್ಯದಲ್ಲಿ ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ, ಇದೇ ರೀತಿ ಬರಗಾಲದ ಸ್ಥಿತಿ ಇದ್ದಾಗ, ರೈತರ ಸಾಲ ಮನ್ನ ಹಾಗೂ ರೈತರು ರಾಷ್ಟ್ರೀಕೃತ ಬ್ಯಾಂಕುಗಳಿಂದ ಪಡೆದ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡಿಸಿದ್ದೆ, ಅದು ಈಗ ಪುನಾರಾವರ್ತನೆಯಾಗಬೇಕಿದೆ.
ತೀವ್ರತರವಾದ ಬರಗಾಲದ ಪರಿಸ್ಥಿತಿಯಿಂದ ರೈತ ಬೆಳೆದ ತೆಂಗು, ದ್ರಾಕ್ಷಿ, ದಾಳಿಂಬೆ, ಕಾಫಿ ಬೆಳೆಗಳು ಸಂಪೂರ್ಣ ಹಾಳಾಗಿದ್ದು ಇದರಿಂದ ರೈತ  ಚೇತರಿಸಿಕೊಳ್ಳಲು ಇನ್ನು 4-5  ವರ್ಷ ಬೇಕಾಗುತ್ತದೆ.
ಒಣ ಬೇಸಾಯ/ ಮಳೆ ಆಶ್ರಯದ ರೈತರಿಗೆ ಯಾವ ಕಾರಣಕ್ಕೂ ಬೆಳೆ ವಿಮೆಯಿಂದ ಯಾವುದೇ ರೀತಿಯ ಅನುಕೂಲವಾಗುವುದಿಲ್ಲ.
ಆ ಕಾರಣಕ್ಕಾಗಿ ಒಣಬೇಸಾಯ ಮಾಡಿ, ಬಿತ್ತನೆ ಬೀಜ, ರಸಗೊಬ್ಬರಕ್ಕೆ ಖರ್ಚು ಮಾಡಿರುವ ರೈತನಿಗೆ ಪ್ರತಿ ಹೆಕ್ಟರ್ಗೆ 20 ಸಾವಿರದಂತೆ ಹಾಗೂ ತೆಂಗು; ದ್ರಾಕ್ಷಿ; ದಾಳಿಂಬೆ ಬೆಳೆ ಕಳದುಕೊಂಡಿರುವ ರೈತನಿಗು ಸೂಕ್ತ ಪರಿಹಾರ ಹಾಗೂ ಕಬ್ಬು ಬೆಳೆಗಾರರಿಗೆ ತಕ್ಷಣವೆ ಬಾಕಿ ಪಾವತಿಯಾಗುವಂತೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹ ಪಡಿಸುತ್ತೇನೆ.
ದ್ರಾಕ್ಷಿ, ದಾಳಿಂಬೆ ಬೆಳೆಗಾರರ ಸಂಕಷ್ಟ ಪರಿಹರಿಸಲು ಹಣಕಾಸು ಸಚಿವರಾದ ಶ್ರೀ ಅರುಣ್ ಜೇಟ್ಲಿಯವರು ವಿಶೇಷ ಪ್ಯಾಕೇಜ್ನಡಿ ಕೇಂದ್ರ ಸರ್ಕಾರ ಶೇ.75 % ನೀಡಲು ಸಿದ್ಧವಿದೆ, ಬಾಕಿ 25 % ನೀವು ಸೇರಿಸಿ ಕೊಟ್ಟು, ರೈತರ ಸಂಕಷ್ಟ ಪರಿಹರಿಸಿ ಎಂದು ರಾಜ್ಯ ಸರ್ಕಾರಕ್ಕೆ ತಿಳಿಸಿದ್ದರೂ ಸಹ, ಕರ್ನಾಟಕ ಸರ್ಕಾರ ಈ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಳ್ಳದೆ ಉದಾಸೀನವಾಗಿ ವರ್ತಿಸುತ್ತಿದೆ.
ಈ ಎಲ್ಲಾ ಕಾರಣಕ್ಕಾಗಿ ಕಳೆದ 3-4 ತಿಂಗಳಲ್ಲಿ 25 0 ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ತಕ್ಷಣ ಮಧ್ಯ ಪ್ರವೇಶ ಮಾಡಿ ರೈತನ ಸಂಕಷ್ಟಕ್ಕೆ ಸ್ಪಂದಿಸಿ ನೆರವು ನೀಡಲು ಆಗ್ರಹ ಪಡಿಸುತ್ತೇನೆ.

Leave a Reply