ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಕುರಿತ ಪ್ರಗತಿ ಪರಿಶೀಲನಾ ಸಭೆ

ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಕುರಿತ ಪ್ರಗತಿ ಪರಿಶೀಲನಾ ಸಭೆ

10 ಡಿಸೆಂಬರ್ 2019
ಕೇಂದ್ರ ಭೂ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಖಾತೆ ಮತ್ತು ಎಂಎಸ್ಎಂಇ ಸಚಿವ ನಿತಿನ್ ಗಡ್ಕರಿ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯದ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಕುರಿತ ಪ್ರಗತಿ ಪರಿಶೀಲನಾ ಸಭೆಯ. ರಾಜ್ಯದಲ್ಲಿ ಮುಂದಿನ 5 ವರ್ಷಗಳಲ್ಲಿ ಒಟ್ಟಾರೆ 1 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ಹೆದ್ದಾರಿ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಕೇಂದ್ರ ಸಚಿವರು ತಿಳಿಸಿದರು.

ಮುಖ್ಯಾಂಶಗಳು:

1. ಪ್ರಸಕ್ತ ವರ್ಷದ ವಾರ್ಷಿಕ ಯೋಜನೆಯಡಿ ರೂ.2150 ಕೋಟಿ ನಿಗದಿಪಡಿಸಿರುವುದಕ್ಕಾಗಿ ಕೇಂದ್ರ ಸಚಿವರನ್ನು ಅಭಿನಂದಿಸಿದ ಮುಖ್ಯಮಂತ್ರಿಗಳು, ಪ್ರಸಕ್ತ ವರ್ಷದ sanction ceiling limit ಅನ್ನು 3919 ಕೋಟಿ ರೂ.ಗಳಿಗೆ ನಿಗದಿಪಡಿಸುವಂತೆ ಮನವಿ ಮಾಡಿದರು. ಇದಕ್ಕೆ ಕೇಂದ್ರ ಸಚಿವರು ಸಮ್ಮತಿಸಿದರು.

2. ಬೆಂಗಳೂರು ಉಪನಗರ ವರ್ತುಲ ರಸ್ತೆ (STRR) ಈಗಾಗಲೇ ಕಾರ್ಯಾರಂಭವಾಗಿದ್ದು, ಇದಕ್ಕೆ ತಗಲುವ ಭೂಸ್ವಾಧೀನ ಪ್ರಕ್ರಿಯೆಯ ವೆಚ್ಚವನ್ನು ಕೇಂದ್ರ ಸರ್ಕಾರ ಭರಿಸಲಿದೆ. ಉಳಿದ ಹಂತಗಳಿಗೆ ಭೂಸ್ವಾಧೀನ ಪ್ರಕ್ರಿಯೆಯ ವೆಚ್ಚದ ಶೇ. 25ನ್ನು ರಾಜ್ಯ ಸರ್ಕಾರ ಭರಿಸಲು ಸೂಚಿಸಲಾಗಿದೆ. ಲಭ್ಯವಿರುವ ಸರ್ಕಾರಿ ಭೂಮಿಯನ್ನು ಹಸ್ತಾಂತರಿಸುವಂತೆ ರಾಜ್ಯ ಸರ್ಕಾರಕ್ಕೆ ತಿಳಿಸಲಾಗಿದೆ.

3. ಮರಳು, ಕಲ್ಲಿಗೆ ಸಂಬಂಧಿಸಿದ ರಾಯಲ್ಟಿ ವಿನಾಯಿತಿ ಹಾಗೂ ಸ್ಟೀಲ್ ಮತ್ತು ಸಿಮೆಂಟ್ ಕುರಿತ ಜಿಎಸ್ ಟಿ ವಿನಾಯಿತಿಯನ್ನು ಕೂಡ ರಾಜ್ಯ ಸರ್ಕಾರದ ಪಾಲು ಎಂದು ಪರಿಗಣಿಸಲಾಗುವುದು.

4. ಈ ಎಲ್ಲ ಅಂಶಗಳನ್ನು ಒಳಗೊಂಡಂತೆ ಒಪ್ಪಂದ ಮಾಡಿಕೊಳ್ಳುವಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸುಮಾರು 6000 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಲು ಸಾಧ್ಯವಾಗಲಿದೆ.

5. ರಾಜ್ಯದಲ್ಲಿ 50 ಸಾವಿರ ಕೋಟಿ ರೂ. ವೆಚ್ಚದಲ್ಲಿ 2300 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಪಡಿಸುವ ಯೋಜನೆಯ ಡಿ.ಪಿ.ಆರ್. ಸಿದ್ಧವಾಗುತ್ತಿದೆ. ಶೇ. 80 ರಷ್ಟು ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡು, ಪರಿಸರ ಸಚಿವಾಲಯದ ಅನುಮತಿ ಪಡೆದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಕೇಂದ್ರ ಸಚಿವ ಗಡ್ಕರಿ ಅವರು ಸಭೆಯಲ್ಲಿ ತಿಳಿಸಿದ್ದಾರೆ.

6. ಸೋಲಾಪುರ- ಕರ್ನೂಲು ಹೆದ್ದಾರಿಗೆ ಭೂಸ್ವಾಧೀನ ಪ್ರಕ್ರಿಯೆ ಪ್ರಾರಂಭವಾಗಿದೆ. ಪುಣೆ- ಬೆಂಗಳೂರು ಹೆದ್ದಾರಿಯನ್ನು 6 ಪಥದ ರಸ್ತೆಯಾಗಿ ಅಭಿವೃದ್ಧಿ ಪಡಿಸಲು ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಿದೆ. ಈ ಹೆದ್ದಾರಿಯನ್ನು ಎಕ್ಸ್ ಪ್ರೆಸ್ ಹೈವೇ ಆಗಿ ಪರಿವರ್ತಿಸಲು ಉದ್ದೇಶಿಸಲಾಗಿದೆ. ಇದನ್ನು ಮುಂಬೈ-ಬೆಂಗಳೂರು ಎಕ್ಸ್ ಪ್ರೆಸ್ ಹೈವೇ ಎಂದು ಪರಿಗಣಿಸಲಾಗುವುದು.

Leave a Reply