ಪೈಪೋಟಿ ಇರಲಿ, ದ್ವೇಷ ಬೇಡ

ಪೈಪೋಟಿ ಇರಲಿ, ದ್ವೇಷ ಬೇಡ

  • Post author:
  • Post category:Blog
  • Post comments:0 Comments

ಪರಿವರ್ತನಾ ಯಾತ್ರೆ ರಾಜ್ಯದ ಕಾಲುಭಾಗವನ್ನು ಕ್ರಮಿಸಿದೆ. ಇನ್ನೂ ಕ್ರಮಿಸಬೇಕಾದ ದಾರಿ ಸಾಕಷ್ಟಿದೆ. ಆದರೆ ಜನ
ಬೆಂಬಲ ಈ ದಾರಿಯನ್ನು ಸುಗಮವಾಗಿಸಿದೆ. ಇಂದು ಬಸವನಬಾಗೇವಾಡಿ, ದೇವರಹಿಪ್ಪರಗಿಯಲ್ಲಿ ಕಾರ್ಯಕ್ರಮ ಮುಗಿಸಿ
ಯಾತ್ರೆ ವಿಜಯಪುರ ತಲುಪಿದೆ. ಮೂರೂ ಕಡೆಗಳಲ್ಲಿಯೂ ಭಾರೀ ಜನ ಸೇರಿದ್ದರು. ಈ ಮಾತನ್ನು ನಾನು ಪದೇ ಪದೇ
ಹೇಳುತ್ತಿದ್ದೇನೆ ಎಂದು ನಿಮಗೆ ಅನ್ನಿಸಬಹುದು. ಆದರೆ ಜನ ಸೇರಿದ್ದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲೇ ಬೇಕು.
ಯಾತ್ರೆಯ ಸಾರ್ಥಕ್ಯ ನನ್ನಲ್ಲಿ, ನಮ್ಮೆಲ್ಲ ನಾಯಕರಲ್ಲಿ ಹೊಸ ಹುರುಪು ಮೂಡಿಸಿದೆ. ಹಾಗೆಯೇ ಬೇರೆ ಪಕ್ಷಗಳ ನಾಯಕರ
ಮುಖದಲ್ಲಿ ಆತಂಕದ ಛಾಯೆ ಮೂಡಿಸುವ ತಾಕತ್ತು ಕೂಡ ಈ ಯಶಸ್ಸಿಗಿದೆ. ನಾವು ಮೊದಲು ಯೋಜಿಸಿದಂತೆ
ಅರ್ಧದಿಂದ ಒಂದು ಕಿಲೋ ಮೀಟರ್ ಮೆರವಣಿಗೆ ನಡೆಸುವುದು ಎಂದಾಗಿತ್ತು. ಆದರೆ ಕಾರ್ಯಕರ್ತರ ಉತ್ಸಾಹ
ಎಷ್ಟಿದೆಯೆಂದರೆ ಬರುವ ದಾರಿಯಲ್ಲಿ 10-15 ಕಿಲೋ ಮೀಟರ್ ದೂರದಲ್ಲೇ ಬೈಕುಗಳ ಸಮೇತ ಕಾಯುತ್ತಿರುತ್ತಾರೆ.
ತಮ್ಮ ನಾಯಕನನ್ನು ಅಲ್ಲಿಂದಲೇ ಮೆರವಣಿಗೆಯಲ್ಲಿ ಕರೆದುಕೊಂಡುಬರುವ ಅಮಿತೋತ್ಸಾಹ ಅವರದ್ದು. ಅವರ ಪ್ರೀತಿ,
ಅಭಿಮಾನಕ್ಕೆ ಹೇಗೆ ಧನ್ಯವಾದ ಹೇಳಬೇಕೊ ತಿಳೀಯುತ್ತಿಲ್ಲ.

ಈವತ್ತು ಒಂದೆರಡು ಕಡೆ ಸಣ್ಣ ಪ್ರಮಾಣದ ಘೋಷಣೆ ಕೂಗಿದ, ತಿಕ್ಕಾಟದ ಘಟನೆಗಳು ನಡೆದವು. ರಾಜಕೀಯದಲ್ಲಿ ಅದು
ಸಾಮಾನ್ಯ ಎಂಬುದೂ ಸತ್ಯ. ಯಾವುದೇ ಕ್ಷೇತ್ರವಿರಲಿ ಪೈಪೋಟಿ ಇದ್ದಿದ್ದೆ. ಸಚಿನ್, ಇರಲಿ, ಮಹೇಂದ್ರ ಸಿಂಗ್
ಧೋನಿಯಿರಲಿ, ಅವರ ಜಾಗಕ್ಕೆ ಇನ್ನೊಬ್ಬ ಪೈಪೋಟಿ ನೀಡುತ್ತಲೇ ಇರುತ್ತಾನೆ. ನಿಮ್ಮ ಕಾರ್ಯಕ್ಷಮತೆ ಕೊಂಚ
ಕಡಿಮೆಯಾದರೂ ಆತ ಅವಕಾಶ ಗಿಟ್ಟಿಸಲು ಕಾಯುತ್ತಿರುತ್ತಾನೆ. ಇದಕ್ಕೆ ರಾಜಕೀಯ ಕ್ಷೇತ್ರವೂ ಹೊರತಲ್ಲ. ಅದು
ನೈಸರ್ಗಿಕ ಕೂಡ. ಒಂದು ಕ್ಷೇತ್ರದಲ್ಲಿ ಇಬ್ಬರು ಅಥವಾ ಮೂವರು ಅಭ್ಯರ್ಥಿಗಳು, ಟಿಕೆಟ್ ಆಕಾಂಕ್ಷಿಗಳು ಇರುವುದು
ಸಹಜ. ಅಂತಹ ಪೈಪೋಟಿ ಒಳ್ಳೆಯದೇ. ಆದರೆ ಅದಕ್ಕಾಗಿ ದ್ವೇಷ ಬೆಳೆಸಿಕೊಳ್ಳಬಾರದು. ಸ್ವಪಕ್ಷದವರೇ ಆಗಲಿ,
ವಿಪಕ್ಷದವರೇ ಆಗಲಿ, ದ್ವೇಷ ಯಾವತ್ತೂ ಕಾಣಿಸಿಕೊಳ್ಳಲು ಅವಕಾಶ ನೀಡಬಾರದು.

ಒಂದು ರೀತಿಯಲ್ಲಿ ಪೈಪೋಟಿ ನಮ್ಮ ಕಾರ್ಯಕ್ಷಮತೆ ಹೆಚ್ಚಲೂ ಕಾರಣವಾಗಬಲ್ಲದು ಎಂಬುದನ್ನು ನೆನಪಿಟ್ಟುಕೊಂಡು
ನಾವು ಮುಂದುವರಿಯಬೇಕು.

Leave a Reply