ಒಂದೇ ದಿನ ಎರಡು ಬಾರಿ ಮುದ್ದೇಬಿಹಾಳಕ್ಕೆ

ಒಂದೇ ದಿನ ಎರಡು ಬಾರಿ ಮುದ್ದೇಬಿಹಾಳಕ್ಕೆ

  • Post author:
  • Post category:Blog
  • Post comments:0 Comments

ಇಂದು ಮೊದಲು ನಿರ್ಧಾರವಾದಂತೆ ಬದಾಮಿ, ಇಳಕಲ್ ಹಾಗೂ ಮುದ್ದೇಬಿಹಾಳದಲ್ಲಿ ಯಾತ್ರೆಯ ಕಾರ್ಯಕ್ರಮ ಇತ್ತು.
ಆದರೆ ಅನಿವಾರ್ಯ ಕಾರಣಗಳಿಂದ ಬದಾಮಿ ಕಾರ್ಯಕ್ರಮ ಮುಂದೂಡಬೇಕಾಯಿತು. ಹಾಗಂತ ನಾನು ಕಾಲಿ
ಕುಳಿತುಕೊಳ್ಳಲಿಲ್ಲ. ವಿಶ್ರಾಂತಿ ತೆಗೆದುಕೊಳ್ಳಬೇಕು ಅನ್ನಿಸಲಿಲ್ಲ. ಮುದ್ದೇಬಿಹಾಳದಲ್ಲಿ ನಮ್ಮ ಪಕ್ಷದ ಮಂಗಳಾದೇವಿ
ಬಿರಾದಾರ್ ಅವರ ಮನೆಯಲ್ಲಿ ಗೃಹಪ್ರವೇಶದ ನಿಮಿತ್ತವಾಗಿ 25 ಜೋಡಿಗಳಿಗೆ ಸಾಮೂಹಿಕ ವಿವಾಹ ಆಯೋಜಿಸಿದ್ದರು.
ಹೊಸ ಜೋಡಿಗಳಿಗೆ ಆಶಿರ್ವಾದ ಮಾಡಿದಂತಾಯಿತು ಎಂದು ಅಲ್ಲಿಗೆ ಹೋದೆ. ಅಲ್ಲಿಂದ ಇಳಕಲ್ ಗೆ ಆಗಮಿಸಿ, ನಂತರ
ಮತ್ತೆ ಯಾತ್ರೆ ಕಾರ್ಯಕ್ರಮಕ್ಕಾಗಿ ಮುದ್ದೇಬಿಹಾಳಕ್ಕೆ ತೆರಳಿದೆ.

ಈ ವಯಸ್ಸಿನಲ್ಲಿ ರಾಜ್ಯ ಪ್ರವಾಸ ಕೈಗೊಂಡಿರುವ ನಿಮ್ಮ ಸಾಹಸ ಮೆಚ್ಚಬೇಕು ಎಂದು ಸಿಕ್ಕವರೆಲ್ಲ ಹೇಳುತ್ತಾರೆ.
ಪರಿವರ್ತನಾ ಯಾತ್ರೆ ಮೂಲಕ ರಾಜ್ಯದ 224 ಕ್ಷೇತ್ರ ಪ್ರವಾಸ ಕೈಗೊಂಡಿರುವುದನ್ನು ನೋಡಿದವರಿಗೆ ಹಾಗೆ
ಅನ್ನಿಸುತ್ತಿರಬಹುದು. ಆದರೆ ಪ್ರವಾಸ ಮಾಡುವ ನನಗೆ ಹಾಗೇನೂ ಅನ್ನಿಸುತ್ತಿಲ್ಲ. ಪ್ರಯಾಸದ ಆಯಾಸ ನನ್ನ ಬಳಿ
ಸುಳಿದಿಲ್ಲ.

ನಾನಷ್ಟು ಗಟ್ಟಿಯಿದ್ದೇನೆ ಎಂದು ಹೇಳುತ್ತಿಲ್ಲ. ಬದಲಾಗಿ ಯಾತ್ರೆಯ ಆಯೋಜನೆಯಲ್ಲಿ ತೊಡಗಿರುವ ಪ್ರತಿಯೊಬ್ಬರೂ
ಯಾತ್ರೆಯನ್ನು ಹಾಗೂ ಉಳಿದ ವ್ಯವಸ್ಥೆಗಳನ್ನು ಅಷ್ಟು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ. ದಿನವಿಡೀ ಯಾತ್ರೆಯ
ಓಡಾಟವನ್ನೆಲ್ಲ ಮುಗಿಸಿದ ನಂತರ ಆಹ್ಲಾದಕರ ಪರಿಸರದಲ್ಲಿ ಊಟ, ವಸತಿ ವ್ಯವಸ್ಥೆ ಆಗಿರುತ್ತದೆ. ಶುಚಿ, ರುಚಿಯಾದ
ಆಹಾರ, ಮುದ ನೀಡುವ ಪರಿಸರ ದಿನದ ಆಯಾಸವನ್ನೆಲ್ಲ ಮರೆಸಿಬಿಡುತ್ತದೆ. ನಿನ್ನೆ ಬಾಗಲಕೋಟದಲ್ಲಿ ವೀರಣ್ಣ ಚರಂತಿ
ಮಠ ಅವರ ವೈದ್ಯಕೀಯ ಕಾಲೇಜಿನ ಅತಿಥಿ ಗೃಹದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದ್ದರು. ಎತ್ತರದ ಪ್ರದೇಶದಲ್ಲಿದ್ದ
ವಸತಿಗೃಹದ ಪರಿಸರ ಬೆಳಗ್ಗೆ ವಾಕಿಂಗ್ ಮಾಡಲು ಕೂಡ ಅತ್ಯಂತ ಪ್ರಶಸ್ತ ಸ್ಥಳವಾಗಿತ್ತು. ಈ ರೀತಿಯ ಸ್ಥಳಗಳು
ನನ್ನಲ್ಲೊಂದು ಹೊಸ ಹುರುಪು ತುಂಬಿಬಿಡುತ್ತವೆ.

ಅದು ಸುಂದರ ಪರಿಸರ ಹಾಗೂ ಶುದ್ಧ ಗಾಳಿಗಿರುವ ತಾಕತ್ತು. ಯಾತ್ರೆಯ ಕಾರಣದಿಂದಾಗಿ ಇಂತಹ ಶುದ್ಧ, ಸುಂದರ
ಪರಿಸರದಲ್ಲಿ ಓಡಾಡುವ ಅವಕಾಶ ದೊರೆತಿದೆ. ಕಲುಷಿತ ಬೆಂಗಳೂರಿನಲ್ಲೇ ಹೆಚ್ಚು ಓಡಾಡುವ ನನಗೆ ಇದು
ಬದಲಾವಣೆಯ ಅನುಭವ ನೀಡುತ್ತಿದೆ.

Leave a Reply