ಒಳ್ಳೆಯ ಕಾಲ ಎದುರು ನೋಡುತ್ತಿದೆ: ಬಿಎಸ್‌ವೈ

ಸೊರಬ: `ನಾನೀಗ ಕೇವಲ ಶಿಕಾರಿಪುರದ ಸಾಮಾನ್ಯ ಶಾಸಕನಾಗಿದ್ದೇನೆ. ಬರುವ ದಿನಗಳಲ್ಲಿ ಬದಲಾವಣೆ ತರುವ ಕಾಲ ಬಂದೇ ಬರುತ್ತದೆ` ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು. ಸೋಮವಾರ ಸಮೀಪದ ಬಂಕಸಾಣದಲ್ಲಿ ಹೊಳೆಲಿಂಗೇಶ್ವರ ಸ್ವಾಮಿ ಮಂಟಪದ ಗೋಪುರ ಕಳಸದ ಪ್ರತಿಷ್ಠಾಪನೆ ನೆರವೇರಿಸಿದ ನಂತರ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.

`ರಾಜಕೀಯ ಪ್ರೇರಿತ ವ್ಯವಸ್ಥಿತ ಪಿತೂರಿ ಹಾಗೂ ಸೇಡಿನ ಹಿನ್ನೆಲೆಯಲ್ಲಿ ಜೈಲು ವಾಸ ಕಳೆದುಬಂದು ಅಗ್ನಿಪರೀಕ್ಷೆ ಎದುರಿಸಿದ್ದೇನೆ. ಆ ವೇಳೆ ಡೈರಿಯಲ್ಲಿ ನನ್ನ ರಾಜಕೀಯ ಜೀವನದ 40 ವರ್ಷಗಳ ಅನುಭವ ಬರೆದಿಟ್ಟಿದ್ದೇನೆ. ಕಳೆದ 4 ತಿಂಗಳಿಂದ ಮೌನವಾಗಿದ್ದ ನಾನು ಇದೇ ಮೊದಲ ಬಾರಿಗೆ ಮಾತು ಆರಂಭಿಸಿದ್ದೇನೆ. ಮುಂದಿನ ದಿನಗಳಲ್ಲಿ ಪಕ್ಷದ ಸಂಘಟನೆಗಾಗಿ ರಾಜ್ಯದಾದ್ಯಂತ ಪ್ರವಾಸ ಹಮ್ಮಿಕೊಳ್ಳಲಿದ್ದು, ಇದಕ್ಕೆ ಯಾರ ಅಪ್ಪಣೆಯ ಅಗತ್ಯ ನನಗಿಲ್ಲ. ಒಳ್ಳೆಯ ಕಾಲ ನನಗಾಗಿ ಎದುರು ನೋಡುತ್ತಿದೆ` ಎಂದು ವಿಶ್ವಾಸ ವ್ಯಕ್ತಪಡಿಸಿದರು. ಫೆಬ್ರುವರಿಯಲ್ಲಿ ಶಿಕಾರಿಪುರದಲ್ಲಿ ಮಹಿಳಾ ಸಮಾವೇಶ ಹಮ್ಮಿಕೊಳ್ಳಲಿದ್ದು, 25 ಸಾವಿರಕ್ಕೂ ಅಧಿಕ ಮಹಿಳೆಯರಿಗೆ ಉಡುಗೊರೆ ನೀಡುವ ಚಿಂತನೆ ನಡೆಸಿದ್ದೇನೆ ಎಂದರು.

ಶಾಸಕ ಹಾಲಪ್ಪ ಅವರನ್ನು ಉದ್ದೇಶಿಸಿ ಮಾತನಾಡಿದ ಅವರು, `ತಾಲ್ಲೂಕನ್ನು ಮಾದರಿಯಾಗಿಸುವ ಸಾಮರ್ಥ್ಯ ಹೊಂದಿರುವ ನೀವು ಇನ್ನೊಮ್ಮೆ `ತಪ್ಪು` ಮಾಡಬೇಡಿ. ನಿಮ್ಮ ಅಭಿವೃದ್ಧಿ ಕಾರ್ಯ ಶ್ರೀರಕ್ಷೆಯಾಗಿದ್ದು ಸದ್ಬಳಕೆ ಮಾಡಿಕೊಳ್ಳಿ` ಎಂದು ಕಿವಿಮಾತು ಹೇಳಿದರು. ಶಾಸಕ ಎಚ್. ಹಾಲಪ್ಪ ಮಾತನಾಡಿ, ಬರುವ ಚುನಾವಣೆಯಲ್ಲಿಯೂ ಬಿಜೆಪಿ ಬಹುಮತ ಪಡೆದು ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಆಗಲಿದ್ದಾರೆ. ಮುಂದಿನ 15 ವರ್ಷಗಳ ನಂತರ ಬಿ.ವೈ. ರಾಘವೇಂದ್ರ ಆ ಸ್ಥಾನ ಅಲಂಕರಿಸಲಿದ್ದಾರೆ ಎಂದರು.

http://www.prajavani.net/web/include/story.php?news=55785&section=2&menuid=10

Leave a Reply