ಒಬ್ಬ ಯಡಿಯೂರಪ್ಪ ಬಂದ ತಕ್ಷಣ ಇದೆಂಥಾ ಸಂಚಲನ

ಒಬ್ಬ ಯಡಿಯೂರಪ್ಪ ಬಂದ ತಕ್ಷಣ ಇದೆಂಥಾ ಸಂಚಲನ

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಿಜೆಪಿಗೆ ಮರು ಸೇರ್ಪಡೆ ಆಗುವ ತೀರ್ಮಾನ ಕೈಗೊಳ್ಳುತ್ತಿದ್ದಂತೆಯೇ ಕರ್ನಾಟಕದ ರಾಜಕೀಯ ಚಿತ್ರ ದೊಡ್ಡ ಮಟ್ಟದಲ್ಲಿ ಬದಲಾವಣೆ ಆಗುವಂತೆ ಕಾಣುತ್ತಿದೆ. ಮೂರು ಪ್ರಮುಖ ರಾಜಕೀಯ ಪಕ್ಷಗಳ ಪಡಸಾಲೆಯಲ್ಲಿದ್ದ ರಾಜಕೀಯ ಲೆಕ್ಕಾಚಾರ ಬದಲಾಗಿರುವುದು ಇದಕ್ಕೊಂದು ನಿದರ್ಶನ. ಅಂದಹಾಗೆ ಯಡಿಯೂರಪ್ಪ ಕೆಜೆಪಿಯಲ್ಲಿ ಉಳಿದಿರುವ ತನಕ ಕಾಂಗ್ರೆಸ್ ಸೇಫ್ ಎಂಬ ಅಭಿಪ್ರಾಯ ಆ ಪಕ್ಷದಲ್ಲಿತ್ತು. ಪ್ರಬಲ ಲಿಂಗಾಯತ ಮತಬ್ಯಾಂಕ್‌ನ್ನು ಯಡಿಯೂರಪ್ಪ ಗಣನೀಯ ಪ್ರಮಾಣದಲ್ಲಿ ಸೆಳೆಯಬಲ್ಲರು ಎಂಬುದು ಇಂತಹ ಅಭಿಪ್ರಾಯಕ್ಕೆ ಮುಖ್ಯ ಕಾರಣವಾಗಿತ್ತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯಡಿಯೂರಪ್ಪ ಕೂಡಾ ಇದನ್ನು ಸಾಬೀತು ಮಾಡಿದ್ದರು. ವಿಧಾನಸಭಾ ಚುನಾವಣೆಯಲ್ಲಿ ಚಲಾವಣೆಯಾದ ಮತಗಳ ಪೈಕಿ ಶೇಕಡಾ ಹತ್ತರಷ್ಟು ಪ್ರಮಾಣದ ಮತಗಳನ್ನು ಅವರ ಪಕ್ಷ ಪಡೆದಿದ್ದು ಇದಕ್ಕೆ ನಿದರ್ಶನ. ಈ ಪ್ರಮಾಣದ ಮತಗಳನ್ನು ಕಳೆದುಕೊಂಡ ಬಿಜೆಪಿ ಸಹಜವಾಗಿಯೇ ಕುಗ್ಗಿ ಹೋಗಿತ್ತು. ಈ ಅಂಶವೇ ಬಹುತೇಕ ಕ್ಷೇತ್ರಗಳಲ್ಲಿ ಲಿಂಗಾಯತ ಹಾಗೂ ದಲಿತ ವರ್ಗದ ಎಡಗೈ ಸಮುದಾಯದ ಮತಗಳು ಗಣನೀಯ ಪ್ರಮಾಣದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ದಕ್ಕಲು ಕಾರಣವಾಗಿದ್ದವು.

ಆದರೆ ಯಡಿಯೂರಪ್ಪ ಅವರ ಮರು ಆಗಮನದೊಂದಿಗೆ ಈ ವರ್ಗಗಳಲ್ಲಿದ್ದ ಗೊಂದಲ ನಿವಾರಣೆಯಾಗಿದೆ. ಇದು ಕಾಂಗ್ರೆಸ್ ಪಾಲಿಗೆ ದೊಡ್ಡ ಆಘಾತ ಮಾತ್ರವಲ್ಲ, ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಆ ಪಕ್ಷ ಹಾಕಿಕೊಂಡಿದ್ದ ಇಡೀ ಪ್ಲಾನನ್ನೇ ಬುಡಮೇಲು ಮಾಡುವಂತಹ ಬೆಳವಣಿಗೆ. ಇದಕ್ಕೆ ಪೂರಕವಾಗಿ ಕಾಂಗ್ರೆಸ್ ಪಕ್ಷಕ್ಕೆ ಎದುರಾಗಲಿರುವ ಮತ್ತೊಂದು ಗಂಡಾಂತರವೆಂದರೆ ದಲಿತ ವರ್ಗದ ಬಲಗೈ ಸಮುದಾಯದ ಮನಃಸ್ಥಿತಿ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ದಲಿತ ಸಮುದಾಯದ ಬೆಂಬಲ, ಅದೂ ಬಲ, ಎಡ ಎಂಬ ವ್ಯತ್ಯಾಸವಿಲ್ಲದೆ ಇಡೀ ಸಮುದಾಯ ದೊಡ್ಡ ಮಟ್ಟದಲ್ಲಿ ಬೆಂಬಲ ನೀಡಿತ್ತು. ಆದರೆ ಕಳೆದ ಎಂಟು ತಿಂಗಳ ಅವಧಿಯಲ್ಲಿ ಆ ಸಮುದಾಯಕ್ಕೆ ಸೇರಿದ ನಾಯಕ, ರಾಜ್ಯ ಕಾಂಗ್ರೆಸ್‌ಗೆ ಚುರುಕು ನೀಡಿದ್ದ ಡಾ.ಪರಮೇಶ್ವರ್ ಅವರಿಗೆ ಸರ್ಕಾರದಲ್ಲಿ ಸೂಕ್ತ ಸ್ಥಾನಮಾನ ನೀಡಿಲ್ಲ. ಈ ಅಂಶ ಸಹಜವಾಗಿಯೇ ಬಲಗೈ ಸಮುದಾಯವನ್ನು ಕೆರಳಿಸಿದರೆ, ಕಾಂಗ್ರೆಸ್ ಪಾಲಿಗೆ ದಲಿತರು ಯಾವತ್ತೂ ಮತಬ್ಯಾಂಕೇ ಹೊರತು ಇನ್ನೇನೂ ಅಲ್ಲ ಎಂದು ಎಡಗೈ ಸಮುದಾಯ ಚುಚ್ಚಿ ಹೇಳಲು ದಾರಿ ಮಾಡಿಕೊಟ್ಟಿದೆ.

ಮೊನ್ನೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಪರಿಶಿಷ್ಟ ಜಾತಿ, ಪಂಗಡದ ಸಮ್ಮೇಳನದ ಸಂದರ್ಭದಲ್ಲಿ ಪರಮೇಶ್ವರ್ ಆಡಿದ ಮಾತುಗಳು ಕೇವಲ ಅವರ ಮಾತುಗಳು ಅಂತ ನಿರ್ಲಕ್ಷಿಸಲು ಸಾಧ್ಯವಿಲ್ಲ. ಈ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡಲು ಬ್ರಿಟಿಷರ ಗುಂಡಿಗೆ ಮೊದಲು ಎದೆಯೊಡ್ಡಿದ್ದು ದಲಿತರು ಎಂಬ ಅವರ ಮಾತು ಮಾರ್ಮಿಕವಾಗಿತ್ತು. ಅಷ್ಟೇ ಅಲ್ಲ, ಇಂತಹ ತ್ಯಾಗದ ಹಿನ್ನೆಲೆ ಇರುವ ದಲಿತರನ್ನು ನಿರ್ಲಕ್ಷಿಸಿದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಆಪತ್ತು ಗ್ಯಾರಂಟಿ ಎಂಬ ಸಂದೇಶವನ್ನು ಪರೋಕ್ಷವಾಗಿ ರವಾನೆ ಮಾಡುವಲ್ಲಿ ಸಫಲವಾಯಿತು.

ಅಂದಹಾಗೆ ಪರಮೇಶ್ವರ್ ಅವರನ್ನು ಉಪಮುಖ್ಯಮಂತ್ರಿ ಹುದ್ದೆಯ ಮೇಲೆ ಕೂರಿಸಬೇಕು ಎಂಬ ಕೂಗು ಅಲ್ಲಿ ಮೇಲೆದ್ದಾಗ ಸಿಎಂ ಸಿದ್ರಾಮಯ್ಯ ಅವರದು ಯಥಾಪ್ರಕಾರ ಅದೇ ನಿರ್ಲಕ್ಷ್ಯದ ಮಾತು. ಹೈಕಮಾಂಡ್ ಹೇಳಿದರೆ ಮಾಡೋಣ ಬಿಡ್ರೀ ಅನ್ನುವ ಧಾಟಿಯ ಮಾತು. ಅರ್ಥಾತ್, ಪರಮೇಶ್ವರ್ ಅವರು ಉಪಮುಖ್ಯಮಂತ್ರಿ ಹುದ್ದೆಯಲ್ಲಿ ಕೂರುವುದಕ್ಕೆ ನನ್ನದೇನೂ ಅಭ್ಯಂತರವಿಲ್ಲ. ಅಂತಹ ಅಭ್ಯಂತರ ಅಂತೇನಾದರೂ ಇದ್ದರೆ ಅದು ಕಾಂಗ್ರೆಸ್ ಹೈಕಮಾಂಡ್‌ನಿಂದಲೇ ಎಂಬರ್ಥ ಬರುವಂತೆ ಅವರು ಮಾತನಾಡಿದರು. ಸಹಜವಾಗಿಯೇ ಈ ಸಂದೇಶ ಕರ್ನಾಟಕದ ದಲಿತ ಸಮುದಾಯಕ್ಕೆ ದೊಡ್ಡ ಮಟ್ಟದಲ್ಲಿ ರವಾನೆಯಾಗುತ್ತದೆ. ಅದರ ಪರಿಣಾಮವನ್ನು ಮುಂಬರುವ ಸಂಸತ್ ಚುನಾವಣೆಯಲ್ಲಿ ಅದು ಎದುರಿಸಬೇಕಾಗುತ್ತದೆ. ಅಧಿಕಾರಕ್ಕೆ ಬಂದ ಶುರುವಿನಲ್ಲಿ, ಹೊಸ ಹೊಸ ಘೋಷಣೆಗಳ ಅಬ್ಬರದಲ್ಲಿ ಕಾಂಗ್ರೆಸ್ ಪಾಳೆಯದಲ್ಲಿ ಒಂದು ರೀತಿಯ ಉತ್ಸಾಹ ಗರಿಗೆದರಿತ್ತು. ಏನಿಲ್ಲವೆಂದರೂ ಮಿನಿಮಮ್ ಇಪ್ಪತ್ತು ಸೀಟುಗಳನ್ನು ಲೋಕಸಭಾ ಚುನಾವಣೆಯಲ್ಲಿ ಗಳಿಸುವುದು ಗ್ಯಾರಂಟಿ ಎಂಬ ಅಭಿಪ್ರಾಯ ಕಾಣಿಸಿತ್ತು.

ಆದರೆ ಈಗ ಅಂತಹ ಅಭಿಪ್ರಾಯಗಳು ಮಂಜುಗಡ್ಡೆಯ ರೀತಿಯಲ್ಲಿ ಕರಗುತ್ತಿವೆ. ಇಪ್ಪತ್ತು ಸೀಟುಗಳನ್ನು ಗೆಲ್ಲುವುದು ಹಾಗಿರಲಿ. ಮೊದಲು ಹತ್ತು ಸೀಟು ಗೆಲ್ಲುವುದೂ ಕಷ್ಟ ಎಂಬಂತೆ ಕಾಂಗ್ರೆಸ್ ನಾಯಕರೇ ಮಾತನಾಡುತ್ತಿದ್ದಾರೆ. ಇಂತಹ ಅಭಿಪ್ರಾಯಗಳಲ್ಲಿ ಹುರುಳಿಲ್ಲ ಅಂತೇನಿಲ್ಲ. ಯಾಕೆಂದರೆ ಕಾಂಗ್ರೆಸ್ ಪಕ್ಷಕ್ಕೆ ಮೊದಲನೆಯದಾಗಿ ರಾಷ್ಟ್ರಮಟ್ಟದಲ್ಲಿ ಇಮೇಜ್ ಎಂಬುದೇ ಉಳಿದಿಲ್ಲ. ಆ ಪಕ್ಷ ಇಡೀ ದೇಶದಲ್ಲಿ ನೂರು ಸೀಟು ಗೆಲ್ಲುವ ಸಾಮರ್ಥ್ಯ ಹೊಂದಿದೆ ಎಂಬ ವಿಶ್ವಾಸ ಆ ಪಕ್ಷದ ನಾಯಕರಲ್ಲೇ ಇಲ್ಲ. ಹೀಗಾಗಿಯೇ ಅದೀಗ ತೃತೀಯ ಶಕ್ತಿಯ ಮೇಲೆ, ಆಮ್ ಆದ್ಮಿಯಂತಹ ಪಕ್ಷಗಳ ಮೇಲೆ ತನ್ನ ಇಡೀ ಭಾರವನ್ನು ಹೇರಲು ಸಜ್ಜಾಗಿದೆ.
ಪರಿಸ್ಥಿತಿ ಹೀಗಿರುವಾಗ ಕರ್ನಾಟಕದಲ್ಲಿ ಇಪ್ಪತ್ತು ಸೀಟು ಗೆದ್ದು ತೋರಿಸುತ್ತೇವೆ ಎಂದು ಸಿದ್ಧರಾಮಯ್ಯ ಹೇಳಿದರೆ ನಂಬಲು ಒಂದು ಕಾರಣವಾದರೂ ಬೇಕಲ್ಲ. ಯಾರೇನಾದರೂ ಹೇಳಲಿ, ಯಡಿಯೂರಪ್ಪ ಅವರ ವಿರುದ್ಧ ಏನೇ ಆರೋಪಗಳಿರಲಿ, ಅವರು ಬಿಜೆಪಿ ಸೇರುತ್ತಿದ್ದಂತೆಯೇ ಆ ಪಕ್ಷದ ಗ್ರಾಫು ಮೇಲಕ್ಕೆ ಏರಿದೆ. ಒಂದು ವೇಳೆ ಯಡಿಯೂರಪ್ಪ ಅವರು ಬಿಜೆಪಿಗೆ ಸೇರದಿದ್ದರೆ ಆ ಪಕ್ಷ ಆರು ಸೀಟು ಗೆಲ್ಲಬಹುದು ಎಂಬ ಲೆಕ್ಕಾಚಾರವಿತ್ತು. ಆದರೆ ಈಗ ಅದು ಹನ್ನೆರಡರಿಂದ ಹದಿನೈದು ಸೀಟು ಗೆಲ್ಲಬಹುದು ಎಂಬ ಮಟ್ಟಕ್ಕೇರಿದೆ.

ಅಂದ ಹಾಗೆ ನರೇಂದ್ರ ಮೋದಿ ಅವರನ್ನು ಪ್ರಧಾನಿ ಹುದ್ದೆಯ ಮೇಲೆ ಕೂರಿಸಲು ಹವಣಿಸುತ್ತಿರುವುದು ಕೈಗಾರಿಕೋದ್ಯಮಿಗಳಾಗಿರುವುದರಿಂದ ಎಲೆಕ್ಷನ್ ಫಂಡಿನ ವಿಚಾರದಲ್ಲೂ ಆ ಪಕ್ಷಕ್ಕೆ ಸಮಸ್ಯೆ ಉಂಟಾಗುವುದಿಲ್ಲ.
ಕುತೂಹಲದ ಸಂಗತಿ ಎಂದರೆ ಯಡಿಯೂರಪ್ಪ ಬಿಜೆಪಿಗೆ ಸೇರುವ ನಿರ್ಧಾರ ಕೈಗೊಳ್ಳುತ್ತಿದ್ದಂತೆಯೇ ದೇವು-ಕುಮ್ಮಿ ನೇತೃತ್ವದ ಜೆಡಿಎಸ್ ಪಡಸಾಲೆಯಲ್ಲೂ ಹೊಸ ವಿಶ್ವಾಸ ಮೂಡಿರುವುದು. ಬೆಂಗಳೂರು ಗ್ರಾಮಾಂತರ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರದ ಉಪಚುನಾವಣೆಗಳ ಸಂದರ್ಭದಲ್ಲಿ ಬಿಜೆಪಿ ಜತೆ ಕೈ ಜೋಡಿಸಿದ ಜೆಡಿಎಸ್ ಸಹಜವಾಗಿಯೇ ಹೊಡೆತ ತಿಂದಿತ್ತು. ಯಾಕೆಂದರೆ ಬಿಜೆಪಿಯ ಮತಗಳು ಕಾಂಗ್ರೆಸ್ ಕಡೆ ಪಲ್ಲಟಗೊಂಡಿದ್ದವೇ ವಿನಃ ಜೆಡಿಎಸ್ ಕಡೆ ಪಲ್ಲಟಗೊಂಡಿರಲಿಲ್ಲ. ಹೀಗಾಗಿ ಯಡಿಯೂರಪ್ಪ ಅವರೇನಾದರೂ ಕೆಜೆಪಿಯಲ್ಲೇ ಉಳಿದುಕೊಂಡಿದ್ದರೆ ಯಥಾಪ್ರಕಾರ ಅದರ ಲಾಭ ಕಾಂಗ್ರೆಸ್‌ಗೆ ಸಿಗುತ್ತಿತ್ತು. ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಶಕ್ತಿ ಕುಗ್ಗುತ್ತಿತ್ತು.

ಆದರೀಗ ಹಾಗಲ್ಲ. ಒಂದು ರಾಷ್ಟ್ರೀಯ ಪಕ್ಷವಾಗಿ ಬಿಜೆಪಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಬೇಕಾಗುತ್ತದೆ. ಹೀಗಾಗಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವೇ ಇರಬಹುದು, ಮಂಡ್ಯ ಲೋಕಸಭಾ ಕ್ಷೇತ್ರವೇ ಇರಬಹುದು, ಹಾಸನ ಲೋಕಸಭಾ ಕ್ಷೇತ್ರ ಇರಬಹುದು. ಒಟ್ಟಿನಲ್ಲಿ ಎಲ್ಲ ಕಡೆ ಅದು ತನ್ನ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕಾಗುತ್ತದೆ. ಒಂದು ಸಲ ಆ ಪಕ್ಷದ ಅಭ್ಯರ್ಥಿಗಳು ಕಣಕ್ಕಿಳಿದರೆ ಬಿಜೆಪಿಯ ಮೂಲ ಮತಬ್ಯಾಂಕ್ ಏನಿದೆ?ಅದು ಬಿಜೆಪಿ ಕ್ಯಾಂಡಿಡೇಟುಗಳ ಪಾಲಾಗುತ್ತದೆ. ಅದು ಹಾನಿ ಮಾಡುವುದು ಕಾಂಗ್ರೆಸ್‌ಗೆ. ಲಾಭ ತಂದು ಕೊಡುವುದು ಜೆಡಿಎಸ್‌ಗೆ ಎಂಬುದು ನಿಸ್ಸಂದೇಹ.

ಅದರಲ್ಲೂ ಪಾರ್ಲಿಮೆಂಟ್ ಚುನಾವಣೆ ಆಗಿರುವುದರಿಂದ ಬಿಜೆಪಿ ತನ್ನ ಮತಗಳನ್ನಲ್ಲದೇ ಕಾಂಗ್ರೆಸ್ ಮತಬ್ಯಾಂಕ್‌ಗೂ ಕನ್ನ ಹಾಕುತ್ತದೆ.ಜೀವನಾವಶ್ಯಕ ವಸ್ತುಗಳ ಬೆಲೆ ಗಗನಕ್ಕೇರಿರುವುದರಿಂದ ಹಿಡಿದು ಬಹುತೇಕ ವಿಷಯಗಳಲ್ಲಿ ಮತದಾರರು ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟದ ವಿರುದ್ಧ ಸಿಡಿದು ಬಿದ್ದಿದ್ದಾರೆ. ಇಂತಹ ಮತಗಳನ್ನು ಬಿಜೆಪಿ ಗಣನೀಯ ಪ್ರಮಾಣದಲ್ಲಿ ಸೆಳೆದರೆ ಮತ್ತು ಅದೇ ಕಾಲಕ್ಕೆ ಜೆಡಿಎಸ್ ತನ್ನ ಪಾರಂಪರಿಕ ಮತಬ್ಯಾಂಕ್‌ನ್ನು ಭದ್ರಪಡಿಸಿಕೊಂಡರೆ ಅದು ಏಳೆಂಟು ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲುವುದು ಅಸಂಭವವೇನೂ ಅಲ್ಲ. ಹೀಗಾಗಿ ಅದು ಬೆಂಗಳೂರು ಗ್ರಾಮಾಂತರ, ಮಂಡ್ಯ, ಹಾಸನ, ಮೈಸೂರು, ಚಿಕ್ಕಬಳ್ಳಾಪುರದಿಂದ ಹಿಡಿದು ಕನಿಷ್ಟ ಏಳೆಂಟು ಕ್ಷೇತ್ರಗಳಲ್ಲಿ ಗೆಲುವನ್ನು ನಿರೀಕ್ಷಿಸುತ್ತಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಿಜೆಪಿಗೆ ಮರು ಸೇರ್ಪಡೆ ಆಗುತ್ತಿರುವ ಅಂಶ ಆ ಪಕ್ಷದ ಪಾಲಿಗೆ ಟಾನಿಕ್ ಆಗಿ ಪರಿಣಮಿಸಿರುವುದು ಈ ರೀತಿ.

ಆದ್ದರಿಂದ ಯಡಿಯೂರಪ್ಪ ಎಪಿಸೋಡು ಮುಖ್ಯವಾಗಿ ತಲೆನೋವು ತಂದಿರುವುದು ಕಾಂಗ್ರೆಸ್ ಪಾಳೆಯಕ್ಕೆ. ಮೊದಲನೆಯದಾಗಿ ಅಲ್ಲಿ ಆಂತರಿಕ ಭಿನ್ನಾಭಿಪ್ರಾಯ ಧಗ್ ಅಂತ ಮೇಲೆದ್ದಿದೆ. ಸಿದ್ಧರಾಮಯ್ಯ ಸರ್ವಾಧಿಕಾರಿಯಾಗುವ ಯತ್ನ ನಡೆಸುತ್ತಿದ್ದಾರೆ ಎಂಬ ವಿಷಯದಲ್ಲಿ ಅವರ ಶತ್ರುಗಳ್ಯಾರಿಗೂ ಅನುಮಾನ ಉಳಿದಿಲ್ಲ. ಇಂತಹ ಅನುಮಾನ ಯಾವ ಮಟ್ಟಕ್ಕೆ ಹೋಗಿದೆ ಎಂದರೆ ಪಾರ್ಲಿಮೆಂಟ್ ಚುನಾವಣೆಯಲ್ಲಿ ಕಾಂಗ್ರೆಸ್ ಹತ್ತು ಸೀಟು ಗೆಲ್ಲಲೂ ವಿಫಲವಾದರೆ ಅದರ ನೈತಿಕ ಹೊಣೆಗಾರಿಕೆಯನ್ನು ಸಿದ್ಧರಾಮಯ್ಯ ಅವರ ನೆತ್ತಿಯ ಮೇಲಿಟ್ಟು ಅವರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸಬೇಕು ಎಂಬ ಲೆಕ್ಕಾಚಾರ ದಿನದಿಂದ ದಿನಕ್ಕೆ ತೀವ್ರವಾಗುತ್ತಿದೆ.
ಅಂದಹಾಗೆ ಮುಂಬರುವ ಲೋಕಸಭಾ ಚುನಾವಣೆಯ ನಂತರ ಕಾಂಗ್ರೆಸ್ ದಿಲ್ಲಿಯಲ್ಲಿ ಅಧಿಕಾರಕ್ಕೆ ಬರುವುದು ಕಷ್ಟ. ಹೀಗಾಗಿ ತಮ್ಮನ್ನು ಅಧಿಕಾರದಿಂದ ಕೆಳಗಿಳಿಸಲು ದಿಲ್ಲಿಯ ಕಾಂಗ್ರೆಸ್ ನಾಯಕರು ಅಂಜುತ್ತಾರೆ ಎಂಬ ಲೆಕ್ಕಾಚಾರ ಸಿದ್ಧರಾಮಯ್ಯ ಅವರ ಬಣದಲ್ಲಿದೆ. ದಿಲ್ಲಿ ಗದ್ದುಗೆಯ ಮೇಲೆ ಕೂತರೆ ತಾನೇ ಪಕ್ಷದ ಹೈಕಮಾಂಡ್ ಬಲಿಷ್ಟವಾಗುವುದು ಮತ್ತು ಸಿದ್ಧರಾಮಯ್ಯ ಅವರನ್ನು ಗದ್ದುಗೆಯಿಂದ ಕೆಳಗಿಳಿಸಲು ಮುಂದಾಗುವುದು? ಆದರೆ ಅದು ಅಧಿಕಾರದ ಗದ್ದುಗೆಯ ಮೇಲೆ ಬಂದು ಕೂರಲು ಚಾನ್ಸೇ ಇಲ್ಲವಲ್ಲ? ಹೀಗಾಗಿ ಸಿದ್ಧರಾಮಯ್ಯ ಅವರನ್ನು ಇಳಿಸುವ ಶಕ್ತಿಯೇ ಹೈಕಮಾಂಡ್ ವರಿಷ್ಟರಿಗಿಲ್ಲ ಎಂದು ಅವರ ಬಣದ ನಾಯಕರು ಭಾವಿಸಿದ್ದಾರೆ.
ಆದರೆ ಒಂದು ವಿಷಯವನ್ನು ಸಿದ್ಧರಾಮಯ್ಯ ಅವರ ಬೆಂಬಲಿಗರೂ ನೆನಪಿನಲ್ಲಿಡಬೇಕು. ಅದೆಂದರೆ ದಿಲ್ಲಿಯಲ್ಲಿ ಮಾಡಲು ಕೈ ತುಂಬ ಕೆಲಸವಿದ್ದರೆ ಹೈಕಮಾಂಡ್‌ನ ಕಂಬಗಳಿಗೆ ಜೋತು ಬಿದ್ದಿರುವ ನಾಯಕರ‍್ಯಾರೂ ಕರ್ನಾಟಕದ ಕಡೆ ಪದೇಪದೇ ತಿರುಗಿ ನೋಡುವುದಿಲ್ಲ. ಆದರೆ ಯಾವಾಗ ದಿಲ್ಲಿಯಲ್ಲಿ ಮಾಡಲು ತಮಗೆ ಕೆಲಸವಿಲ್ಲ ಎಂಬುದು ಸ್ಪಷ್ಟವಾಗುತ್ತದೋ ಆಗ ಬಹುತೇಕ ನಾಯಕರು ಈ ಕಡೆ ತಿರುಗುತ್ತಾರೆ. ಅಷ್ಟೇ ಅಲ್ಲ, ಕರ್ನಾಟಕದ ಪಡಸಾಲೆಯಲ್ಲಿ ಸಿದ್ಧರಾಮಯ್ಯ ಅವರ ವಿರುದ್ಧ ತಿರುಗಿ ಬೀಳುವ ಕೆಪ್ಯಾಸಿಟಿ ಇರುವ ನಾಯಕರ‍್ಯಾರು ಎಂಬುದನ್ನು ಗುರುತಿಸುತ್ತಾರೆ ಮತ್ತು ಅಂತವರಿಗೆ ಕುಮ್ಮಕ್ಕು ಕೊಟ್ಟು ಪದೇಪದೇ ಬಂಡಾಯ ಮೇಲೇಳುವಂತೆ ನೋಡಿಕೊಳ್ಳುತ್ತಾರೆ.

ಎಷ್ಟೇ ಆದರೂ ಸಿದ್ಧರಾಮಯ್ಯ ಸಿಟ್ಟಿಗೇಳುವ ನಾಯಕ ಎಂಬುದು ಪ್ರತಿಯೊಬ್ಬರಿಗೂ ಗೊತ್ತು. ಇಂತಹ ಸಿಟ್ಟಿನಿಂದಾಗಿ ಅವರು ತಮ್ಮ ಪಡೆಯನ್ನು ಸರ್ಕಾರ ಉರುಳಿಸುವ ಸಾಹಸಕ್ಕೇ ಸಜ್ಜು ಮಾಡಬಹುದು. ಆದರೆ ಅಂತಹ ಯತ್ನಕ್ಕೆ ಎಷ್ಟೇ ಗರಿಷ್ಟ ಅಂದರೂ ಇಪ್ಪತ್ತೈದರಿಂದ ಮೂವತ್ತು ಜನ ಬೆಂಬಲ ನೀಡಬಹುದು. ಯಾಕೆಂದರೆ ಇವತ್ತಿನ ರಾಜಕೀಯ ಸನ್ನಿವೇಶದಲ್ಲಿ ಒಂದು ಸರ್ಕಾರವನ್ನು ಕೆಡವಲು, ಆ ಮೂಲಕ ಹೊಸ ಸಾಹಸಕ್ಕೆ ಕೈ ಹಾಕಲು ಶಾಸಕರು ಹೆದರುತ್ತಾರೆ. ಹೀಗಾಗಿ ಒಂದೋ ಸಿದ್ಧರಾಮಯ್ಯ ಅವರ ಜತೆ ಮೂರನೇ ಎರಡು ಭಾಗದಷ್ಟು ಶಾಸಕರು ಕಾಂಗ್ರೆಸ್ ವರಿಷ್ಟರ ವಿರುದ್ಧ ಬಂಡಾಯವೇಳಲು ನಿರ್ಧರಿಸಿದರೆ ಆ ಮಾತು ಬೇರೆ. ಆದರೆ ಅದು ಯಡಿಯೂರಪ್ಪ ಮೋಸ್ಟ್ ಪವರ್‌ಫುಲ್ ಅನ್ನಿಸಿಕೊಂಡ ಕಾಲದಲ್ಲಿ ಬಿಜೆಪಿಯಲ್ಲೇ ನಡೆಯಲಿಲ್ಲ. ಇನ್ನು ಕಾಂಗ್ರೆಸ್‌ನಲ್ಲಿ ನಡೆಯುತ್ತದೆ ಅಂತ ಹೇಳುವುದು ಕಷ್ಟ. ಹೀಗಾಗಿ ಸಿದ್ಧರಾಮಯ್ಯ ಏನೇ ಮಾಡಲು ಹೋದರೂ, ಸರ್ಕಾರ ಉರುಳುವುದಿಲ್ಲ. ಬದಲಿಗೆ ಈಗಾಗಲೇ ಜೆಡಿಎಸ್ ಜತೆ ಸಖ್ಯ ಸಾಧಿಸಿರುವ ದಿಲ್ಲಿಯ ಮತ್ತು ಇಲ್ಲಿಯ ನಾಯಕರು ಸಿದ್ಧು ಗ್ಯಾಂಗ್ ಹೊರಗೆ ಹೋದರೂ ಸರ್ಕಾರ ಉಳಿಸಿಕೊಳ್ಳುತ್ತಾರೆ.

ಒಂದು ಸಲ ಜೆಡಿಎಸ್ ಜತೆ ಸಖ್ಯ ಸಾಧಿಸಿದರೆ ಭವಿಷ್ಯದಲ್ಲಿ ವಕ್ಕಲಿಗ ಸಮುದಾಯದ ವಿಶ್ವಾಸ ಕೂಡಾ ದೊಡ್ಡ ಮಟ್ಟದಲ್ಲಿ ತಮ್ಮ ಜತೆ ಉಳಿಯುತ್ತದೆ. ರಾಮಕೃಷ್ಣ ಹೆಗಡೆ ಈ ಹಿಂದೆ ಲೋಕಶಕ್ತಿಯನ್ನು ತಂದು ಬಿಜೆಪಿ ಜತೆ ಕೈ ಜೋಡಿಸಿದ ಮೇಲೆ ಲಿಂಗಾಯತ ವರ್ಗ ಆ ಪಕ್ಷದ ಜತೆ ನಿಲ್ಲಲಿಲ್ಲವೇ? ಹಾಗೆ ವಕ್ಕಲಿಗ ವರ್ಗವೂ ಕಾಂಗ್ರೆಸ್ ಜತೆ ನಿಲ್ಲುತ್ತದೆ. ಹೀಗಾಗಿ ಸಿದ್ಧರಾಮಯ್ಯ ಅವರ ವಿಷಯದಲ್ಲಿ ಟಫ್ ಆಗಿ ಎಂಬುದು ಹಲ ನಾಯಕರ ಒತ್ತಾಸೆ ಮತ್ತು ಹೈಕಮಾಂಡ್ ಮೇಲೆ ಬೀಳುತ್ತಿರುವ ಒತ್ತಡ. ಯಡಿಯೂರಪ್ಪ ಎಂಬ ನಾಯಕ ಬಿಜೆಪಿಗೆ ಮರು ಸೇರ್ಪಡೆ ಆಗುತ್ತಿದ್ದಂತೆಯೇ ರಾಜ್ಯ ರಾಜಕೀಯದಲ್ಲಿ ಈ ಮಟ್ಟಿನ ಬದಲಾವಣೆ ಆಗಿದೆ. ನಿಜಕ್ಕೂ ಇದು ವಿಶೇಷ ಬೆಳವಣಿಗೆ. ಅಲ್ಲವೇ?

http://ravibelagere.com/news/2014/01/13//hello-952.html

Leave a Reply