ಒಂದೆರಡು ದಿನಗಳಲ್ಲಿ ಸಾಲ ಮನ್ನಾ ಭರವಸೆ ಈಡೇರಿಕೆ: ಬಿ.ಎಸ್. ಯಡಿಯೂರಪ್ಪ

ರಾಜ್ಯದ ರೈತರು ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಸಹಕಾರಿ ಬ್ಯಾಂಕ್‍ಗಳಲ್ಲಿ ಪಡೆದ ಒಂದು ಲಕ್ಷ ರೂ ವರೆಗಿನ ಬೆಳೆ ಸಾಲ ಹಾಗೂ ಒಂದು ಲಕ್ಷ ರೂ ವರೆಗಿನ ನೇಕಾರರ ಸಾಲವನ್ನು ಮನ್ನಾ ಮಾಡುವ ಕುರಿತಂತೆ ಚುನಾವಣಾ ಪೂರ್ವದಲ್ಲಿ ಭಾರತೀಯ ಜನತಾ ಪಕ್ಷವು ರಾಜ್ಯದ ಜನತೆಗೆ ನೀಡಿದ್ದ ಭರವಸೆಯನ್ನು ಒಂದೆರಡು ದಿನಗಳಲ್ಲಿ ಈಡೇರಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದೊಡನೆಯೇ ತಮ್ಮ ಏಕ-ಸದಸ್ಯ ಸಚಿವ ಸಂಪುಟದಲ್ಲಿ ಸಾಲ ಮನ್ನಾ ಕುರಿತಂತೆ ರಾಜ್ಯದ ಮುಖ್ಯ ಕಾರ್ಯದರ್ಶಿಯವರಿಗೆ ಕ್ರಮ ವಹಿಸಲು ಸೂಚಿಸಿದಾಗ ಇಂದು ಸಂಜೆ ಅಥವಾ ನಾಳೆ ಬೆಳಿಗ್ಗೆಯೊಡನೆ ಅಂಕಿ-ಅಂಶಗಳನ್ನು ಸಾದರಪಡಿಸುವುದಾಗಿ ಹೇಳಿದ್ದಾರೆ. ಮಾಹಿತಿ ಲಭ್ಯವಾದೊಡನೆಯೇ ಈ ನಿಟ್ಟಿನಲ್ಲಿ ಅಗತ್ಯ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

ಬಹುಮತ ಸಾಬೀತುಪಡಿಸಿದ ನಂತರ ಸಂಪುಟ ವಿಸ್ತರಣೆ
ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತಂತೆ ಮಾಧ್ಯಮದವರು ಪ್ರಶ್ನಿಸಿದಾಗ, ಸದನದಲ್ಲಿ ಬಹುಮತ ಸಾಬೀತುಪಡಿಸಿದ ನಂತರವೇ ಸಂಪುಟ ವಿಸ್ತರಣೆ ಎಂದು ಯಡಿಯೂರಪ್ಪ ಅವರು ಸ್ಪಷ್ಟಪಡಿಸಿದರು. ಅಲ್ಲದೆ, ಪ್ರಧಾನ ಮಂತ್ರಿ ನರೇಂದ್ರ ಮೋದಿ, ಭಾರತೀಯ ಜನತಾ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಾಗೂ ಭಾರತೀಯ ಜನತಾ ಪಕ್ಷ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಯವರನ್ನು ಆತ್ಮೀಯವಾಗಿ ಆಮಂತ್ರಿಸಿ ಮೂರ್ನಾಲ್ಕು ಲಕ್ಷ ಜನಸ್ತೋಮದ ಸಮ್ಮುಖದಲ್ಲಿ ಸಂಪುಟ ವಿಸ್ತರಣೆಯ ಸಮಾರಂಭವನ್ನು ಅದ್ಧೂರಿಯಾಗಿ ಆಯೋಜಿಸಲು ಯೋಜಿಸಿದ್ದೇವೆ ಎಂದು ಅವರು ವಿವರಿಸಿದರು.

ತಾವು ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಲು ಕಾರಣರಾದ ರಾಜ್ಯದ ಜನತೆ, ಅದರಲ್ಲೂ ವಿಶೇಷವಾಗಿ ರಾಜ್ಯದ ರೈತರು, ದಲಿತರು, ಹಿಂದುಳಿದ ವರ್ಗದವರ ಬೆಂಬಲಕ್ಕೆ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸಿದ ಯಡಿಯೂರಪ್ಪ ಅವರು ಜನಾದೇಶ ಹಾಗೂ ಜನರ ಬೆಂಬಲ ತಮ್ಮ ಪರವಾಗಿದೆ. ತಮ್ಮ ಪಕ್ಷದ ಪರವಾಗಿದೆ. ಭಾರತೀಯ ಜನತಾ ಪಕ್ಷಕ್ಕೆ ಜನರ ಬೆಂಬಲವಿದ್ದರೂ, ಜನರಿಂದ ತಿರಸ್ಕøತವಾದ ಕಾಂಗ್ರೆಸ್ ಮತ್ತು ಜಾತ್ಯಾತೀತ ಜನತಾದಳ ಪಕ್ಷಗಳು ಚುನಾವಣೋತ್ತರದಲ್ಲಿ ಅಪವಿತ್ರ ಮೈತ್ರಿ ಮಾಡಿಕೊಂಡು ಅಧಿಕಾರವನ್ನು ಕಬಳಿಸಲು ಯತ್ನಿಸಿದೆ ಎಂದು ಆರೋಪಿಸಿದರು.

ಅಂತೆಯೇ, ಅರವತ್ತರ ದಶಕದ ಉತ್ತರಾರ್ಧದಲ್ಲಿ ನಡೆದರಾಷ್ಟ್ರಪತಿಯವರ ಚುನಾವಣಾ ಸಂದರ್ಭದಲ್ಲಿ ಅಧಿಕೃತ ಅಭ್ಯರ್ಥಿ ಇದ್ದರೂ ಪಕ್ಷೇತರ ಅಭ್ಯರ್ಥಿಯಾಗಿದ್ದ ವಿ ವಿ ಗಿರಿ ಅವರಿಗೆ ಆತ್ಮಸಾಕ್ಷಿ ಮತ ನೀಡಿ ಬೆಂಬಲಿಸುವಂತೆ ಕರೆ ನೀಡಿದ್ದ ಅಂದಿನ ಪ್ರಧಾನ ಮಂತ್ರಿ ಇಂದಿರಾಗಾಂಧಿ ಅವರ ದೂರದರ್ಶಕತ್ವದ ಕರೆಯನ್ನು ನೆನಪಿಸಿದ ಯಡಿಯೂರಪ್ಪ ಅವರು ನಾಡಿನ ಜನತೆಯ ತೀರ್ಪಿಗೆ ತಲೆಬಾಗಿ ತಮ್ಮ ಪರವಾಗಿ ಆತ್ಮಸಾಕ್ಷಿ ಮತ ಚಲಾಯಿಸಬೇಕು ಎಂದು ಕಾಂಗ್ರೆಸ್ ಹಾಗೂ ಜಾತ್ಯಾತೀತ ಜನತಾ ದಳದ ಶಾಸಕರಲ್ಲಿ ಕಳಕಳಿಯ ಮನವಿ ಮಾಡಿದರು.

ಬಹುಮತ ಹೇಗೆ ಸಾಬೀತುಪಡಿಸುತ್ತೀರಿ?
ಬಹುಮತ ಹೇಗೆ ಸಾಬೀತುಪಡಿಸುತ್ತೀರಿ? ಎಂಬ ಪ್ರಶ್ನೆಗೆ ವಿಶ್ವಾಸ ಮತದ ಬಗ್ಗೆ ಚರ್ಚೆ ಬೇಡ. ಪ್ರಕರಣವು ಸರ್ವೋಚ್ಛ ನ್ಯಾಯಾಲಯದಲ್ಲಿದೆ. ನಾಳೆಯವರೆಗೂ ಕಾಯಿರಿ ಎಂದು ಹೇಳಿದರು.

ಭಾರತೀಯ ಜನತಾ ಪಕ್ಷದ ಮುಖಂಡರೂ ಹಾಗೂ ಶಾಸಕರಾದ ಸಿ.ಎಂ. ಉದಾಸಿ, ಬಸವರಾಜ ಬೊಮ್ಮಾಯಿ, ಹರತಾಳು ಹಾಲಪ್ಪ, ಪ್ರಭು ಚವ್ಹಾಣ್, ಸಿದ್ದು ಸವದಿ, ಎಸ್.ಆರ್. ವಿಶ್ವನಾಥ್ ಅವರೂ ಒಳಗೊಂಡಂತೆ ಹಲವು ಗಣ್ಯರು ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿಯವರ ಜೊತೆಗಿದ್ದರು.

Leave a Reply