ಕರಾವಳಿಯಲ್ಲಿ ಬಿಜೆಪಿ ಹವಾ 

ಎರಡು ದಿನದಿಂದ ಮಂಗಳೂರಿನಿಂದ ಭಟ್ಕಳದ ತನಕ ವಿವಿಧ ಕ್ಷೇತ್ರಗಳಲ್ಲಿ ಓಡಾಡಿದೆ. ನಿನ್ನೆ (12/11) ಕಾಪು, ಕಾರ್ಕಳ ಮತ್ತು ಉಡುಪಿಯಲ್ಲಿ ಪರಿವರ್ತನಾ ಯಾತ್ರೆಯ ಕಾರ್ಯಕ್ರಮ ನಡೆಯಿತು. ಇಂದು ಕುಂದಾಪುರ, ಬೈಂದೂರು ಹಾಗೂ ಭಟ್ಕಳದಲ್ಲಿ ಕಾರ್ಯಕ್ರಮವಿತ್ತು. ಎಲ್ಲ ಕಾರ್ಯಕ್ರಮದಲ್ಲೂ ಜನ ಕಿಕ್ಕಿರಿದು ನೆರೆದಿದ್ದರು. ಜನ  ಅತ್ಯುತ್ತಮ ಸ್ಪಂದನೆ ತೋರಿದ್ದಾರೆ.

ನಿಜ ಹೇಳಬೇಕೆಂದರೆ ನನ್ನ ನಿರೀಕ್ಷೆಗೂ ಮೀರಿದ ಜನಸ್ಪಂದನೆ ಇದಾಗಿದೆ. ಜನ ಯಾತ್ರೆಗೆ ಬರುತ್ತಾರೆಂದು ಗೊತ್ತಿತ್ತು. ಆದರೆ ಈ ಪ್ರಮಾಣದ ನಿರೀಕ್ಷೆಯನ್ನು ನಾನು ನಿಜವಾಗಿಯೂ ಊಹಿಸಿರಲಿಲ್ಲ. ಇದು ಜನ ನಮ್ಮ ಮೇಲಿಟ್ಟಿರುವ ನಂಬಿಕೆ. ಈ ನಂಬಿಕೆ ನಮಗೆ ನೀಡುವ ಜವಾಬ್ದಾರಿ ಏನು ಅನ್ನುವುದು ಕೂಡ ನನ್ನ ಅರಿವಿಗೆ ಬಂದಿದೆ.

ನಿನ್ನೆ ರಾತ್ರಿ ಉಡುಪಿಯಲ್ಲಿ ಕಾರ್ಯಕ್ರಮ ಮುಗಿಸಿ ಅಲ್ಲೇ ಉಳಿದಿದ್ದೆವು. ಬೆಳಿಗ್ಗೆ ಎದ್ದು ಉಡುಪಿ ಕೃಷ್ಣನ ದರ್ಶನ ಮಾಡಿ ದಿನ ಆರಂಭಿಸಿದೆ. ನಮ್ಮ ರಾಜ್ಯದಲ್ಲಿ ಪುಣ್ಯಕ್ಷೇತ್ರಗಳಿಗೆ ಬರವಿಲ್ಲ. ಆ ಊರಿನಲ್ಲಿದ್ದಾಗ ಬೆಳಿಗ್ಗೆ ಎದ್ದು ಆ ದೇವರ ದರ್ಶನ ಪಡೆದರೆ, ಮನಸ್ಸಿಗೇನೊ ನೆಮ್ಮದಿ.

ಸಂಜೆ ಭಟ್ಕಳದಲ್ಲಿ ಕೊನೆಯ ಕಾರ್ಯಕ್ರಮವಿತ್ತು. ಭಟ್ಕಳದ ಬಗ್ಗೆ ನಾನು ಹೇಳಬೇಕಿಲ್ಲ. ಅಲ್ಲೂ ಜನ ಭರ್ಜರಿಯಾಗೇ ಸೇರಿದ್ದು ವಿಶೇಷವಾಗಿತ್ತು. ಭಟ್ಕಳ ಅಂದಾಕ್ಷಣ ನಿಮಗೆಲ್ಲ ಕೋಮುಗಲಭೆ ಅಥವಾ ಬೇರೆ ಸಂಗತಿಗಳು ನೆನಪಾದರೆ, ನನಗೆ ಡಾ. ಯು. ಚಿತ್ತರಂಜನ್ ನೆನಪಾಗುತ್ತಾರೆ. ವೃತ್ತಿಯಲ್ಲಿ ವೈದ್ಯರಾಗಿದ್ದುಕೊಂಡು, ಶಾಸಕರೂ ಆಗಿ ಅವರು ಸಾಕಷ್ಟು ಕೆಲಸ ಮಾಡಿದ್ದರು. ಭಟ್ಕಳದಂತಹ ಊರಲ್ಲಿ ಬಿಜೆಪಿ ಗೆಲ್ಲಲು ಅವರ ಕೊಡುಗೆ ಸಾಕಷ್ಟಿತ್ತು. 1996ರಲ್ಲಿ ಅವರನ್ನು ಮನೆಯಲ್ಲಿಯೇ ಗುಂಡಿಕ್ಕಿ ಕೊಲ್ಲಲಾಯಿತು. 20ವರ್ಷಗಳು ಕಳೆದರೂ ಅವರನ್ನು ಕೊಲೆ ಮಾಡಿದವರನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲವಲ್ಲ ಎಂಬ ಕೊರಗು ಇಂದಿಗೂ ಇದೆ.

ಕೆಲವೊಮ್ಮೆ ಎಲ್ಲವೂ ನಮ್ಮ ನಿಯಂತ್ರಣದಲ್ಲಿ ಇರುವುದಿಲ್ಲ. ಇಂದಿಗೂ ನಮ್ಮ ನೆನಪಿನಲ್ಲುಳಿಯುವ ಕೆಲಸ ಮಾಡಿರುವುದು ಅವರ ಸಾಧನೆ. ಭಟ್ಕಳದ ಸಮೀಪವೇ ಇರುವ ಇನ್ನೊಂದು ಧಾರ್ಮಿಕ ಕ್ಷೇತ್ರವಾದ ಮುರುಡೇಶ್ವರದಲ್ಲಿ ವಾಸ. ಮುರುಡೇಶ್ವರದ ಮೂರು ಕಡೆಯೂ ಸಮುದ್ರ. ಸಮುದ್ರದಿಂದ ಹಿತವಾದ ಗಾಳಿ ಬೀಸುತ್ತಿದೆ. ರಾಜ್ಯವನ್ನು ಬದಲಿಸುವ ಗಾಳಿಯೂ ಎಲ್ಲೆಡೆ ಹೀಗೆ ಬೀಸಲಿ.