ಇಂದು ಬೆಳಗಾವಿ ಗ್ರಾಮೀಣ, ಬೆಳಗಾವಿ ನಗರ ಹಾಗೂ ಯಮಕನಮರಡಿಯಲ್ಲಿ ಯಾತ್ರೆಯ ಕಾರ್ಯಕ್ರಮಗಳಿದ್ದವು. ಬೆಳಗಾವಿ ಗ್ರಾಮೀಣ ಹಾಗೂ ಬೆಳಗಾವಿ ನಗರದಲ್ಲಿ ಸಾರ್ವಜನಿಕರಿಂದ ಭಾರೀ ಪ್ರತಿಕ್ರಿಯೆ ದೊರೆಯಿತು. ಯಮಕನಮರಡಿ ಸತೀಶ್ ಜಾರಕಿಹೊಳಿ ಅವರ ಕೋಟೆ. ಅಲ್ಲಿಯೂ ಜನ ತಡರಾತ್ರಿಯೂ ದೊಡ್ಡ ಸಂಖ್ಯೆಯಲ್ಲಿ ಸೇರಿದ್ದು ಜನ ಈ ಬಾರಿ ದೊಡ್ಡ ಪರಿವರ್ತನೆ ಬಯಸಿದ್ದಾರೆ ಎಂಬುದಕ್ಕೆ ಸಾಕ್ಷಿಯಂತೆ ಕಂಡಿತು. ಇಂದು ಯಾತ್ರೆಗೆ ವಿಶೇಷ ಅತಿಥಿಯಾಗಿ ಛತ್ತೀಸ್‍ಗಡ ಮುಖ್ಯಮಂತ್ರಿ ರಮಣ ಸಿಂಗ್ ಆಗಮಿಸಿದ್ದರು. ಅವರು ಮೂರು ಬಾರಿ ಮುಖ್ಯಮಂತ್ರಿಯಾಗಿ ಆಯ್ಕೆಯಾದವರು. ವಿಶೇಷವೆಂದರೆ ಛತ್ತೀಸ್‍ಗಡದಲ್ಲಿ ನಕ್ಸಲೀಯರ ಪ್ರಭಾವ ತುಂಬ ಇದೆ. ಅಂತಹ ರಾಜ್ಯದಲ್ಲಿ ಬಿಜೆಪಿ ಗೆಲ್ಲಿಸಿದ್ದು, ಸತತವಾಗಿ 15 ವರ್ಷಗಳಿಂದ ಗೆಲ್ಲಿಸುತ್ತಲೇ ಇರುವುದು, ಸಣ್ಣ ಸಾಧನೆಯಲ್ಲ. ಅವರು ನೀಡುತ್ತಿರುವ ಆಡಳಿತವೇ ಅದಕ್ಕೆ ಕಾರಣ.
ನಾನು ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದಾಗ ವಿದ್ಯುತ್ ಕೊರತೆ ಗಂಭೀರ ಪ್ರಮಾಣದಲ್ಲಿತ್ತು. ಆದರೆ ಛತ್ತೀಸ್‍ಗಡದಲ್ಲಿ ವಿದ್ಯುತ್ ಹೆಚ್ಚಿದೆ. ಅಲ್ಲದೇ ಅಲ್ಲಿ ಕಲ್ಲಿದ್ದಲು ಲಭ್ಯವಿದೆ. ಆ ಕಾರಣಕ್ಕೆ ಛತ್ತೀಸ್‍ಗಡದಲ್ಲಿ ವಿದ್ಯುತ್ ಉತ್ಪಾದನಾ ಘಟಕ ಆರಂಭಿಸುವ ಒಪ್ಪಂದ ಮಾಡಿಕೊಂಡಿದ್ದೆ. ರಾಜ್ಯಕ್ಕೆ ಅದರಿಂದ ತುಂಬಾ ಉಪಯೋಗವಾಗುತ್ತಿತ್ತು. ರಮಣ ಸಿಂಗ್ ಅವರು ಕೂಡ ಅದಕ್ಕೆ ತುಂಬ ಆಸಕ್ತಿಯಿಂದ ಸಹಕಾರ ನೀಡಿದ್ದರು. ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಒಪ್ಪಂದ ರದ್ದುಮಾಡಿತು.
ಇಂದಿಗೂ ರಾಜ್ಯದಲ್ಲಿ ವಿದ್ಯುತ್ ಕೊರತೆ ನೀಗಿಲ್ಲ. ರಾಜ್ಯಕ್ಕೆ ಒಳ್ಳೆಯದಾಗುವ ಕೆಲಸದಲ್ಲಿ ರಾಜಕೀಯ ಮಾಡಿದರೆ, ಅದರಿಂದ ಹಾನಿಯಾಗುವುದು ರಾಜ್ಯದ ಜನಕ್ಕೆ ಎನ್ನುವುದನ್ನು ನಾವು ಮರೆಯಬಾರದು. ಈ ಯಾತ್ರೆಯ ನೆಪದಲ್ಲಿ ಛತ್ತೀಸ್‍ಗಡ ಮುಖ್ಯಮಂತ್ರಿ ರಮಣ ಸಿಂಗ್ ನಮ್ಮ ರಾಜ್ಯಕ್ಕೆ ಬರುವಂತಾಯಿತು. ಅವರೊಂದಿಗೆ ಉಭಯಕುಶಲೋಪರಿ ಮಾತನಾಡಲು ಸಾಧ್ಯವಾಯಿತು. ಜೊತೆಗೆ ಒಂದೆರಡು ಸಭೆಗಳೂ ಇದ್ದುದರಿಂದ, ಇವತ್ತು ಬಿಡುವಿಲ್ಲದ ದಿನವಾಗಿದ್ದರಿಂದ, ದಿನ ಕಳೆದು ಹೋದದ್ದೇ ತಿಳಿಯಲಿಲ್ಲ .