ಅತಿವೃಷ್ಟಿ ಪರಿಹಾರಕ್ಕೆ ಮೊದಲ ಆದ್ಯತೆ: ಮುಖ್ಯಮಂತ್ರಿ ಭರವಸೆ

ಅತಿವೃಷ್ಟಿ ಪರಿಹಾರಕ್ಕೆ ಮೊದಲ ಆದ್ಯತೆ: ಮುಖ್ಯಮಂತ್ರಿ ಭರವಸೆ

7 ಸೆಪ್ಟೆಂಬರ್ 2019

ರಾಜ್ಯದಲ್ಲಿ ಅತಿವೃಷ್ಟಿ ಪರಿಹಾರಕ್ಕೆ ಮೊದಲ ಆದ್ಯತೆ ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ತಿಳಿಸಿದರು.

ಮೈಸೂರಿನ ಹೆಗ್ಗಡದೇವನಕೋಟೆಯ ಕಬಿನಿ ಜಲಾಶಯದ ಸಮೀಪ ಬೀಚನಹಳ್ಳಿ ಹೆಲಿಪ್ಯಾಡ್‌ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇಂದ್ರ ಅಧ್ಯಯನ ತಂಡ ಅಗಮಿಸಿ ವಾಸ್ತವ ಪರಿಶೀಲಿಸಿ ತೆರಳಿದೆ. ಶೀಘ್ರವೇ ಕೇಂದ್ರ ಸರ್ಕಾರದಿಂದ ಪರಿಹಾರ ದೊರೆಯುವ ನಿರೀಕ್ಷೆ ಇದೆ ಎಂದರು.

ರಾಜ್ಯ ಭೇಟಿಗೆ ಆಗಮಿಸಿದ್ದ ಪ್ರಧಾನಿಯವರಿಗೆ ರಾಜ್ಯದ ಪರಿಸ್ಥಿತಿ ವಿವರಿಸಲಾಗಿದೆ. ಶೀಘ್ರವೇ ಪರಿಹಾರ ಬಿಡುಗಡೆಯ ನಿರೀಕ್ಷೆಯಲ್ಲಿದ್ದೇವೆ. ರಾಜ್ಯ ಸರ್ಕಾರದಿಂದ ಬೇರೆಲ್ಲಾ ಕೆಲಸಗಳನ್ನು ಬದಿಗೊತ್ತಿ ಅತಿವೃಷ್ಟಿ ಪರಿಹಾರಕ್ಕೆ ಆದ್ಯತೆ ನೀಡಿ ಪರಿಹಾರಕ್ಕೆ ಹಣ ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮೇಕೆದಾಟು ಯೋಜನೆಗೆ ಚಾಲನೆ ನೀಡುವ ಕುರಿತು ಮತ್ತೆ ಪ್ರಯತ್ನ ನಡೆಸಲಾಗುವುದು ಎಂದರು.

ಇದಕ್ಕೂ ಮೊದಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಮೈಸೂರು ಜಿಲ್ಲಾಡಳಿತದ ವತಿಯಿಂದ ಬೀಚನಹಳ್ಳಿ ಹೆಲಿಪ್ಯಾಡ್‌ನಲ್ಲಿ ಬರಮಾಡಿಕೊಳ್ಳಲಾಯಿತು.

ವಸತಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಲೋಕಸಭಾ ಸದಸ್ಯ ವಿ. ಶ್ರೀನಿವಾಸ ಪ್ರಸಾದ್, ಶಾಸಕ ಅನಿಲ್ ಚಿಕ್ಕಮಾದು ಮತ್ತಿತರರು ಹಾಜರಿದ್ದರು

Leave a Reply