ಈ ವಯಸ್ಸಿನಲ್ಲೂ ಯಾತ್ರೆ ಕಷ್ಟವೆನಿಸುತ್ತಿಲ್ಲ

ಈ ವಯಸ್ಸಿನಲ್ಲೂ ಯಾತ್ರೆ ಕಷ್ಟವೆನಿಸುತ್ತಿಲ್ಲ

  • Post author:
  • Post category:Blog
  • Post comments:0 Comments

ನಾಲ್ಕು ದಿನದ (ನವೆಂಬರ್ 23ರಿಂದ 27ರವರೆಗೆ) ವಿರಾಮದ ನಂತರ ಯಾತ್ರೆ ಇಂದು ಪುನಾರಂಭಗೊಂಡಿತು. ಆರಂಭದಲ್ಲಿ ಯಾತ್ರೆಗೆ ಜನವೇ ಇಲ್ಲ ಎಂದು ಟೀಕೆ ಮಾಡಿದವರ ಬಾಯಿ ಕಟ್ಟಿಹೋಗಿದೆ. ಅದಕ್ಕೆ ಜನ ಪರಿವರ್ತನಾ ಯಾತ್ರೆಗೆ ತೋರುತ್ತಿರುವ ಪ್ರೀತಿಯೇ ಕಾರಣ. ನಿನ್ನೆ ಬೆಂಗಳೂರಿನಿಂದ ನೇರವಾಗಿ ಅಥಣಿಗೆ ಆಗಮಿಸಿದೆ. ಅಥಣಿಯಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದರು. ಕಾರ್ಯಕ್ರಮ ಮುಗಿಸಿ, ಅಲ್ಲೇ ಸವದಿ ಅವರ ಮನೆಯಲ್ಲಿ ಊಟ ಮಾಡಿ, ತೇರದಾಳ ಕ್ಷೇತ್ರದ ಮಹಾಲಿಂಗಪುರಕ್ಕೆ ತೆರಳಿದೆ. ಅಲ್ಲಿ ಯಾವ ಪ್ರಮಾಣದಲ್ಲಿ ಜನ ಸೇರಿದ್ದರು ಅಂದರೆ, ಮೆರವಣಿಗೆಯಲ್ಲಿ ಸಭೆ ನಡೆಯುವ ಸ್ಥಳ ಸೇರಲು ಒಂದೂವರೆ ತಾಸು ಬೇಕಾಯಿತು. ದ್ವಿಪಥದ ತುಂಬ ಬೈಕುಗಳೇ ತುಂಬಿ ಹೋಗಿದ್ದವು. ಅದರ ನಂತರ ರಾತ್ರಿ ಜಮಖಂಡಿಯಲ್ಲಿ ಕಾರ್ಯಕ್ರಮವಿತ್ತು. ರಾತ್ರಿ 9 ಕಳೆದರೂ ತಾಲೂಕು ಮೈದಾನದಲ್ಲಿ ಜನ ಕಿಕ್ಕಿರಿದು ತುಂಬಿದ್ದರು. ಕೊನೆಯ ಭಾಷಣದ ವರೆಗೂ ಹಾಗೇ ಕುಳಿತಿದ್ದರು. ಪ್ರತಿಯೊಬ್ಬರ ಭಾಷಣಕ್ಕೂ ಅಷ್ಟೇ ಉತ್ಸಾಹದಿಂದ ಪ್ರತಿಕ್ರಿಯಿಸುತ್ತಿದ್ದರು. ಜನರ ಉತ್ಸಾಹ ನಮ್ಮೆಲ್ಲ ನಾಯಕರ ಉತ್ಸಾಹವನ್ನು ಇಮ್ಮಡಿಗೊಳಿಸಿತ್ತು.

ಅಲ್ಲಿಂದ ಕಬ್ಬಿನ ಗದ್ದೆಯ ನಡುವೆ ಇರುವ ತೋಟದ ಮನೆ ಒಂದರಲ್ಲಿ ಗೋವಿಂದ ಕಾರಜೋಳ ಅವರು ಊಟಕ್ಕೆ ವ್ಯವಸ್ಥೆ ಮಾಡಿದ್ದರು. ಅಲ್ಲಿ ನಾಯಕರೊಂದಿಗೆ ಸೇರಿ ಊಟ ಮಾಡಿ, ಮರುರುಗೇಶ್ ನಿರಾಣಿ ಮನೆಯಲ್ಲಿ ಉಳಿಯಲು ಆಗಮಿಸಿದೆ, ಯಾತ್ರೆಯಿಂದಾಗಿ ನಾವೆಲ್ಲ ನಾಯಕರು ಒಂದೆಡೆ ಸೇರಿ, ಕುಳಿತು, ಕಲೆತು ಊಟ ಮಾಡಲು, ಮಾತನಾಡಲು ಅವಕಾಶವಾಗಿದೆ. ಬೆಂಗಳೂರಿನಲ್ಲಿದ್ದರೆ ಸದಾ ಎಲ್ಲರಿಗೂ ಅವರದ್ದೇ ಒಂದಷ್ಟು ಕೆಲಸ ಇದ್ದೇ ಇರುತ್ತದೆ. ಆದರೆ ಯಾತ್ರೆಗೆ ಆಗಮಿಸಿದ ಸಂದರ್ಭದಲ್ಲಿ ದಿನವಿಡೀ ಜತೆಗೇ ಕಳೆಯುವ ಅವಕಾಶ ದೊರೆಯುತ್ತದೆ. ಇದು ನಮ್ಮೊಳಗೆ ಒಂದು ಭಾಂದವ್ಯ ಸೃಷ್ಟಿಸುತ್ತದೆ. ಅದರ ಜತೆಗೆ ಜನರ ಬೆಂಬಲ ನಮ್ಮೆಲ್ಲರನ್ನು ಹೊಸ ಸಾಹಸಕ್ಕೆ, ಹೊಸ ಗುರಿಯತ್ತ ಸಾಗಲು ಹುರಿದುಂಬಿಸುತ್ತದೆ.

ಈ ವಯಸ್ಸಿನಲ್ಲಿ ಇಷ್ಟು ದೊಡ್ಡ ಯಾತ್ರೆ ಕಷ್ಟ ಅನ್ನಿಸದಿರುವುದು ಇದೇ ಕಾರಣಕ್ಕೆ.

Leave a Reply