ದಿನದಿನಕ್ಕೂ ನಿಚ್ಚಳವಾಗುತ್ತಿದೆ ಭವಿಷ್ಯ

ಪರಿವರ್ತನಾ ಯಾತ್ರೆ ಜನರ ಜತೆಯಲ್ಲಿ ನನ್ನ ಮನಸ್ಸಿನಲ್ಲೂ ಪರಿವರ್ತನೆ ತರುತ್ತಿದೆ. ಇಂದು ಮುಧೋಳ, ಬೀಳಗಿ ಹಾಗೂ ಬಾಗಲಕೋಟೆಯಲ್ಲಿ ಯಾತ್ರೆಯಿತ್ತು. ನೀವು ಎಲ್ಲಿ ಹೆಚ್ಚು ಜನ ಸೇರಿದ್ದರು ಎಂದು ನನ್ನನ್ನು ಕೇಳಿದರೆ ಉತ್ತರ ಕೊಡಲು ಸಾಧ್ಯವಿಲ್ಲ. ಯಾಕೆಂದರೆ ಒಂದೂರಿನೊಟ್ಟಿಗೆ ಇನ್ನೊಂದೂರು ಸ್ಪರ್ಧೆಗಿಳಿದಂತಿತ್ತು. ಆ ಪ್ರಮಾಣದಲ್ಲಿ ಜನ ಸೇರುತ್ತಿದ್ದರು. ಕಾಟಾಚಾರಕ್ಕೆ ಯಾತ್ರೆಗೆ, ಭಾಷಣ ಕೇಳಲು ಆಗಮಿಸಿದ ಜನ ಅವರಾಗಿರಲಿಲ್ಲ. ಬದಲಾಗಿ ಪ್ರೀತಿ, ಅಭಿಮಾನದಿಂದ ಆಗಮಿಸಿದ್ದರು.

ನಿಮ್ಮ ಪಕ್ಷದ ಕಾರ್ಯಕ್ರಮ ನೀವು ಹೀಗೆ ಹೇಳಲೇ ಬೇಕು ಎಂಬ ಮಾತು ಒಂದು ಕ್ಷಣ ನಿಮ್ಮ ಮನಸ್ಸಿನಲ್ಲಿ ಸುಳಿಯಬಹುದು. ಆದರೆ ಪ್ರಥಿ- ಅಭಿಮಾನವಿಟ್ಟು ಬಂದ ಜನರಿಗೂ, ಆಮಿಷವೊಡ್ಡಿ ಕರೆತಂದ ಜನರಿಗೂ ವ್ಯತ್ಯಾಸವಿರುತ್ತದೆ. ಆಮಿಷಗಳಿಗಾಗಿ ಬಂದ ಜನ ಸಿಕ್ಕಷ್ಟು ಪಡೆದು, ಎದ್ದು ಹೋಗುತ್ತಾರೆ. ಆದರೆ ನಮ್ಮ ನಾಯಕರ ಪ್ರತಿಯೊಂದು ಮಾತಿಗೂ ಸ್ಪಂದಿಸುತ್ತ, ಘೋಷಣೆ ಕೂಗುತ್ತಲಿದ್ದ ಕಾರ್ಯಕರ್ತರ ಕೂಗು ಮುಗಿಲುಮುಟ್ಟುತ್ತಿತ್ತು. ಯಾತ್ರೆಯ ಕಾರ್ಯಕ್ರಮ ನಡೆಯುವ ಪ್ರತಿ ಊರಿಗೆ ಊರನ್ನೆ ಬಿಜೆಪಿ ಮಯ ಮಾಡಿಬಿಡುತ್ತಿದ್ದರು.

ಇದೆಲ್ಲದನ್ನು ಗಮನಿಸಿದಾಗ ನನಗೆ ಭವಿಷ್ಯ ನಿಚ್ಚಳವಾಗುತ್ತಿದೆ. 2018ರ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ ಜಯಭೇರಿ ಬಾರಿಸುವುದು ಖಚಿತ. ಜನರ ಉತ್ಸಾಹವೇ ಅದನ್ನು ತೋರುತ್ತಿದೆ. ಒಬ್ಬ ರಾಜಕಾರಣಿಗೆ ಜನರ ಪ್ರೀತಿಗಿಂತ ಮಿಗಿಲಾದದ್ದು ಏನೂ ಇಲ್ಲ. ಯಾಕೆಂದರೆ ಜನರ ಪ್ರೀತಿ, ಅಭಿಮಾನವೊಂದೇ ರಾಜಕಾರಣಿಯ ನಿಜವಾದ ಆಸ್ತಿ. ಅದನ್ನು ರಾಜ್ಯದ ಜನ ನನಗೆ ಮತ್ತು ಪಕ್ಷಕ್ಕೆ ನೀಡುತ್ತಿದ್ದಾರೆ. ನಾನು ಧನ್ಯ.