ಹುತಾತ್ಮ ಅರಣ್ಯ ಸಿಬ್ಬಂದಿ ಪರಿಹಾರ 30 ಲಕ್ಷಕ್ಕೆ ಹೆಚ್ಚಳ

11 ಸೆಪ್ಟೆಂಬರ್ 2019

ಕರ್ತವ್ಯದಲ್ಲಿದ್ದಾಗ ಹುತಾತ್ಮರಾಗುವ ಅರಣ್ಯ ಇಲಾಖೆ ಸಿಬ್ಬಂದಿ ಕುಟುಂಬಗಳಿಗೆ ನೀಡಲಾಗುತ್ತಿರುವ ಪರಿಹಾರ ಮೊತ್ತವನ್ನು 20ರಿಂದ 30 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಿಳಿಸಿದರು. ಇಂದು ನಗರದ ಅರಣ್ಯ ಭವನದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಹುತಾತ್ಮ ಅರಣ್ಯ ಸಿಬ್ಬಂದಿಗೆ ಗೌರವ ಸಲ್ಲಿಸಿದ ನಂತರ ಮಾತನಾಡುತ್ತಿದ್ದರು.

ರಾಜ್ಯದಲ್ಲಿ ಒಟ್ಟು ಭೌಗೋಳಿಕ ವಿಸ್ತೀರ್ಣದ ಶೇ. 22ರಷ್ಟು ಅರಣ್ಯ ಪ್ರದೇಶ ಇರುವುದು ನೆಮ್ಮದಿ ನೀಡುವ ವಿಚಾರ. ಇದಕ್ಕಾಗಿ ಹಗಲಿರುಳು ಶ್ರಮಿಸುವ ಅರಣ್ಯ ಸಿಬ್ಬಂದಿಯ ಕಾಯಕ ಶ್ಲಾಘನೀಯ ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಅರಣ್ಯ ಇಲಾಖೆ ಸಿಬ್ಬಂದಿ ಕರ್ತವ್ಯದಲ್ಲಿರುವಾಗ ಮೃತಪಟ್ಟರೆ ನೀಡುವ ಪರಿಹಾರ ಮೊತ್ತವನ್ನು ಪೊಲೀಸ್ ಇಲಾಖೆಗೆ ಸರಿ ಸಮನಾಗಿ ಹೆಚ್ಚಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು. ಅಲ್ಲದೆ, ಹುತಾತ್ಮರ ಕುಟುಂಬಗಳ ಕ್ಷೇಮಾಭಿವೃದ್ಧಿಗೂ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು. ದಿನಗೂಲಿ ನೌಕರರ ಸಮಸ್ಯೆ ಕುರಿತು ಸಹ ಚರ್ಚಿಸಿ ಶೀಘ್ರವೇ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದರು.

ಅರಣ್ಯ ಸಂಪತ್ತು ಮತ್ತು ವನ್ಯಜೀವಿಗಳ ಸಂರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿ ಸರ್ವೋಚ್ಛ ತ್ಯಾಗವನ್ನು ಮಾಡಿದಂತಹ ಸಮರ್ಪಣಾ ಮನೋಭಾವದ ಹಲವಾರು ಅರಣ್ಯ ಅಧಿಕಾರಿಗಳ ಹೆಸರುಗಳು ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಇಂದಿಗೂ ಹಚ್ಚಹಸಿರಾಗಿ ರಾರಾಜಿಸುತ್ತಿವೆ. ಇವರ ಅಸಾಧಾರಣ ಪ್ರಯತ್ನಗಳು, ಧೈರ್ಯಶೀಲ ಕಾರ್ಯಗಳು ಅಪಾಯಕ್ಕೆ ಒಳಗಾದ, ನೈಸರ್ಗಿಕ ಸಂಪನ್ಮೂಲಗಳನ್ನು ಮತ್ತು ವನ್ಯಜೀವಿಗಳನ್ನು ಸಂರಕ್ಷಿಸಿ ಕಾಪಾಡಲು ಮುಂದಿನ ಪೀಳಿಗೆಗೆ ಸ್ಪೂರ್ತಿಯಾಗಿದೆ ಎಂದು ಮುಖ್ಯಮಂತ್ರಿ ಗಳು ಬಣ್ಣಿಸಿದರು. ಅರಣ್ಯ ಸಂಪತ್ತಿನ ರಕ್ಷಣೆ ಮಾಡುವಾಗ ದುರಾದೃಷ್ಟವಶಾತ್ ಕಳ್ಳಕಾಕರ, ವನ್ಯಪ್ರಾಣಿಗಳ ಹಾಗೂ ಇತರೆ ದುಷ್ಟಶಕ್ತಿಗಳ ದಾಳಿಗೆ ಸಿಲುಕಿ ಈವರೆಗೆ 47 ಅರಣ್ಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಹುತಾತ್ಮರಾಗಿದ್ದಾರೆ.

ಕರ್ತವ್ಯ ನಿರ್ವಹಿಸುವಾಗ ಕಾಡಾನೆಯ ದಾಳಿಯಿಂದ ಮೃತಪಟ್ಟ ಕಾವೇರಿ ವನ್ಯಜೀವಿ ವಿಭಾಗದ ಕ್ಷೇಮಾಭಿವೃದ್ಧಿ ನೌಕರ ಎಲ್.ಎನ್. ಅಣ್ಣೇಗೌಡ ಇವರಿಗೆ ಶ್ರದ್ಧಾಂಜಲಿ ಅರ್ಪಿಸಿದರು. ಅರಣ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ. ಸಂದೀಪ್ ದವೆ , ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪುನ ಟಿ ಶ್ರೀಧರ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.