ಮುಖ್ಯಮಂತ್ರಿಗಳ ಪತ್ರಿಕಾ ಹೇಳಿಕೆ 31.07.2011

ಸ್ನೇಹಿತರೆ,

೧.    ಈಗಾಗಲೇ ನಿಮಗೆ ತಿಳಿದಂತೆ ಇಂದು ಮುಖ್ಯಮಂತ್ರಿ ಪದವಿಗೆ ನಾನು ರಾಜೀನಾಮೆ ಸಲ್ಲಿಸಿದ್ದೇನೆ.

೨.    ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆಯಲ್ಲಿ ಸಾಮಾನ್ಯ ರೈತನ ಮಗನಾಗಿ ಜನಿಸಿದ ನಾನು ಶಿಕಾರಿಪುರವನ್ನು ರಾಜಕೀಯ ಕಾರ್ಯಕ್ಷೇತ್ರವನ್ನಾಗಿ ಆರಿಸಿಕೊಂಡು ಪುರಸಭಾ ಸದಸ್ಯನಾಗಿ, ಅಧ್ಯಕ್ಷನಾಗಿ, ಶಾಸಕನಾಗಿ, ವಿಧಾನ ಸಭೆಯಲ್ಲಿ ವಿರೋಧ ಪಕ್ಷದ ನಾಯಕನಾಗಿ, ಉಪಮುಖ್ಯಮಂತ್ರಿಯಾಗಿ ಮತ್ತು ಮುಖ್ಯಮಂತ್ರಿಯಾಗಿ ನಾಲ್ಕು ದಶಕಗಳ ಸುದೀರ್ಘ ಸಾರ್ವಜನಿಕ ಜೀವನದಲ್ಲಿ ಜನಹಿತವನ್ನೇ ಪರಮ ಕರ್ತವ್ಯವೆಂದು ಭಾವಿಸಿ ಕೆಲಸ ಮಾಡಿದ್ದೇನೆ.

೩.    ಸತತ ಹೋರಾಟ, ಜನಪರ ಕಾಳಜಿ ಮತ್ತು ಸೇವಾ ಮನೋಭಾವದಿಂದ ದುಡಿದ ಫಲವಾಗಿ ರಾಜ್ಯದ ಜನತೆ ಮತ್ತು ನನ್ನ ಪಕ್ಷ ನನಗೆ ಅಧಿಕಾರವಿತ್ತು ಆಶೀರ್ವದಿಸಿದೆ.

೪.    ಪಕ್ಷದ ಶಿಸ್ತಿನ ಸಿಪಾಯಿಯಾಗಿ, ಪಕ್ಷದ ಹಿತದೃಷ್ಠಿಯಿಂದ, ವರಿಷ್ಠರ ಆದೇಶಕ್ಕೆ ತಲೆಬಾಗಿ ಮುಖ್ಯಮಂತ್ರಿ ಪದವಿಯನ್ನು ತ್ಯಜಿಸಿದ್ದೇನೆ.

೫.    ಮೂರು ವರ್ಷ ಎರಡು ತಿಂಗಳ ಕಾಲ ಮುಖ್ಯಮಂತ್ರಿಯಾಗಿ ಜನರ ಸೇವೆ ಮಾಡುವ ಸೌಭಾಗ್ಯ ನನ್ನದಾಗಿತ್ತು. ಈ ಅವಧಿಯಲ್ಲಿ ರಾಜ್ಯದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವುದರ ಜೊತೆಗೆ ಸಮಾಜದ ಎಲ್ಲಾ ವರ್ಗಗಳಲ್ಲಿ ಭದ್ರತೆಯ ಭಾವನೆ ಮೂಡಿಸಿ ಅಭಿವೃದ್ಧಿ ಪ್ರಕ್ರಿಯೆಗೆ ಹೆಚ್ಚಿನ ವೇಗ ತಂದುಕೊಟ್ಟ ತೃಪ್ತಿ ನನಗಿದೆ.

೬.    ನನ್ನ ಮುಖ್ಯಮಂತ್ರಿತ್ವದ ಅವಧಿಯಲ್ಲಿ ಸಹಕಾರವಿತ್ತ ರಾಜ್ಯದ ಜನತೆ ವಿಶೇಷವಾಗಿ ನನ್ನ ಸ್ವಕ್ಷೇತ್ರ ಶಿಕಾರಿಪುರದ ಮತದಾರ ಬಂಧುಗಳು, ಪಕ್ಷದ ಕಾರ್ಯಕರ್ತರು ಹಾಗೂ ಪಕ್ಷದ ರಾಜ್ಯ ಮತ್ತು ರಾಷ್ಟ್ರೀಯ ನಾಯಕರು, ಸಚಿವ ಸಹೋದ್ಯೋಗಿಗಳು, ಶಾಸಕರು ಹಾಗೂ ಸಂಸದರು ಸೇರಿ ಎಲ್ಲಾ ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವೃಂದಕ್ಕೆ ತುಂಬು ಹೃದಯದ ಕೃತಜ್ಞತೆ ಸಲ್ಲಿಸುತ್ತೇನೆ.

೭.    ನನ್ನೊಡನೆ ಸಹಕರಿಸಿದ ಎಲ್ಲರೂ ಮುಂದೆಯೂ ನೂತನ ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟಕ್ಕೆ ಎಲ್ಲಾ ರೀತಿಯಲ್ಲಿ ಸಹಕಾರ ಮತ್ತು ಬೆಂಬಲ ನೀಡುವಿರಾಗಿ ಆಶಿಸುತ್ತೇನೆ.

೮.    ೨೦೦೮ರ ಮೇ ೩೦ರಂದು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರದ ಚುಕ್ಕಾಣ ಹಿಡಿದ ಸಂದರ್ಭದಲ್ಲಿ ವಚನವಿತ್ತಿದ್ದಂತೆ ಸಮಗ್ರ ಕರ್ನಾಟಕವನ್ನು ಸಮೃದ್ಧ ಕರ್ನಾಟಕವನ್ನಾಗಿ ಕಟ್ಟಿಬೆಳೆಸುವ ನಿಟ್ಟಿನಲ್ಲಿ ಅಹರ್ನಿಶಿ ಶ್ರಮಿಸಿದ ಸಂತೃಪ್ತಿ ನನ್ನದಾಗಿದೆ. ನೂತನ ಮುಖ್ಯಮಂತ್ರಿಗಳೂ ಸಹ ಇದೇ ಮಾರ್ಗದಲ್ಲಿ ಕ್ರಮಿಸಿ ಈವರೆಗಿನ ಅಭಿವೃದ್ಧಿ ಮತ್ತು ಸಾಧನೆಗಳ ಜೊತೆಗೆ ಹೊಸ ಅಭಿವೃದ್ಧಿ ಅಧ್ಯಾಯವನ್ನು ಸೇರ್ಪಡೆ ಮಾಡುತ್ತಾರೆ ಎಂಬ ಭರವಸೆ ನನಗಿದೆ.

೯.    ನಮ್ಮ ಸರ್ಕಾರ ಜಾರಿಗೆ ತಂದ ಪ್ರತ್ಯೇಕ ಕೃಷಿ ಬಜೆಟ್, ಶೇ.೧ರ ಬಡ್ಡಿ ದರದಲ್ಲಿ ಕೃಷಿ ಸಾಲ, ಸಾವಯವ ಕೃಷಿಗೆ ಪ್ರೋತ್ಸಾಹ, ಬಡವರ ಮನೆ ಹೆಣ್ಣುಮಕ್ಕಳ ಸಬಲೀಕರಣಕ್ಕಾಗಿ ರೂಪಿಸಿರುವ ಭಾಗ್ಯಲಕ್ಷ್ಮಿ, ಹಿರಿಯರ ಬದುಕಿಗೆ ಸಾಮಾಜಿಕ ಭದ್ರತೆ ತಂದುಕೊಟ್ಟಿರುವ ಸಂಧ್ಯಾ ಸುರಕ್ಷಾ, ಕಲಿವ ಮಕ್ಕಳಿಗೆ ಉಚಿತ ಬೈಸಿಕಲ್, ಅಭೂತಪೂರ್ವ ಯಶಸ್ಸು ಕಂಡ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಇತ್ಯಾದಿ ಅಭಿವೃದ್ಧಿ ಮತ್ತು ಜನ ಕಲ್ಯಾಣ ಕಾರ್ಯಕ್ರಮಗಳು ಜನಮನ್ನಣೆಗೆ ಪಾತ್ರವಾಗಿವೆ.

೧೦.    ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಿಂದಾಗಿ ರಾಜ್ಯದಲ್ಲಿ ೫ ಲಕ್ಷ ಕೋಟಿ ರೂ.ಗಳಿಗೂ ಹೆಚ್ಚು ಬಂಡವಾಳ ಹೂಡಿಕೆಯಾಗುತ್ತಿದ್ದು, ೭ ಲಕ್ಷಕ್ಕೂ ಹೆಚ್ಚು ಯುವಕರಿಗೆ ಉದ್ಯೋಗಾವಕಾಶಗಳು ದೊರೆಯಲಿವೆ. ಇದೇ ಮಾದರಿಯಲ್ಲಿ ಕೃಷಿ ಕ್ಷೇತ್ರಕ್ಕೆ ಬಂಡವಾಳ ಆಕರ್ಷಿಸಲು ಜಾಗತಿಕ ಕೃಷಿ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಆಯೋಜಿಸಲು ಸಿದ್ಧತೆಗಳು ನಡೆದಿವೆ. ಬಹುದಿನದ ಕನಸಾದ ಬೆಂಗಳೂರು ಮೆಟ್ರೊ ರೈಲು ಸಂಚಾರದ ಕನಸು ನನಸಾಗುತ್ತಿದೆ. ಬೆಳಗಾವಿಯಲ್ಲಿ ಸುವರ್ಣ ವಿಧಾನ ಸೌಧದ ನಿರ್ಮಾಣ ಅಂತಿಮ ಹಂತದಲ್ಲಿದ್ದು, ವಿಧಾನ ಮಂಡಲದ ಮುಂದಿನ ಅಧಿವೇಶನವನ್ನು ಅಲ್ಲಿಯೇ ನಡೆಸಲು ತೀರ್ಮಾನಿಸಲಾಗಿದೆ.

೧೧.    ಐವತ್ತು (೫೦) ವರ್ಷಕ್ಕೆ ಮೀರಿದ ಅವಿವಾಹಿತ ಹೆಣ್ಣು ಮಕ್ಕಳಿಗೆ ಮಾಸಿಕ ೧೦೦೦ ರೂ.ಗಳ ಪಿಂಚಣಿ ನೀಡುವ ಆದೇಶವನ್ನು ನಿನ್ನೆಯಷ್ಟೇ ಹೊರಡಿಸಲಾಗಿದೆ. ವಿವಿಧ ಫಲಾನುಭವಿ ಆಧಾರಿತ ಯೋಜನೆಗಳಡಿ ಸುಮಾರು ಎರಡು ಕೋಟಿ ಮಂದಿಗೆ ನೇರ ಪ್ರಯೋಜನ ದೊರೆತಿದೆ. ಜನ ಮೆಚ್ಚುವ ರೀತಿಯಲ್ಲಿ ಕೆಲಸ ಮಾಡಿದ ತೃಪ್ತಿ ಮತ್ತು ಅಧಿಕಾರವನ್ನು ಸಾರ್ವಜನಿಕ ಹಿತರಕ್ಷಣೆಗೆ ಬಳಸಿಕೊಂಡ ಹೆಮ್ಮೆ ನನಗಿದೆ.

೧೨.    ಕರ್ನಾಟಕ ನೈಸರ್ಗಿಕವಾಗಿ ಅತ್ಯಂತ ಸಮೃದ್ಧವಾದ ನಾಡು. ಈ ನಾಡಿನ ನೈಸರ್ಗಿಕ ಸಂಪತ್ತಿನ ರಕ್ಷಣೆಗಾಗಿ ಪ್ರಾಮಾಣಕವಾಗಿ ಶ್ರಮಿಸಿದ ತೃಪ್ತಿ ನನಗಿದೆ. ಅಧಿಕಾರಕ್ಕೆ ಬಂದ ಮೊದಲ ಮೂರು ತಿಂಗಳಲ್ಲೇ ನೂತನ ಖನಿಜ ನೀತಿ ಜಾರಿಗೆ ತಂದು ದೇಶದಲ್ಲೇ ಮೊದಲ ಬಾರಿಗೆ ಕಬ್ಬಿಣದ ಅದಿರು ರಫ್ತನ್ನು ನಿಷೇಧಿಸಿದ ಹೆಗ್ಗಳಿಕೆ ನಮ್ಮ ಸರ್ಕಾರದ್ದಾಗಿದೆ.

೧೩.    ಕಚ್ಚಾ ಅದಿರು ರಫ್ತು ನಿಷೇಧಿಸಿ ಮೌಲ್ಯವರ್ಧನೆ ಮೂಲಕ ಅಂತಿಮ ಉತ್ಪನ್ನಗಳನ್ನು ಉತ್ಪಾದಿಸುವ ಕಾರ್ಖಾನೆಗಳನ್ನು ಸ್ಥಾಪಿಸುವವರಿಗೆ ಮಾತ್ರ ಗಣಗಾರಿಕೆಗೆ ಅನುಮತಿ ನೀಡುವ ನಮ್ಮ ಸರ್ಕಾರದ ಖನಿಜ ನೀತಿಯನ್ನು ರಾಜ್ಯದ ಹೈಕೋರ್ಟ್ ಮತ್ತು ರಾಷ್ಟ್ರದ ಸುಪ್ರೀಂ ಕೋರ್ಟ್ ಕೂಡಾ ಎತ್ತಿ ಹಿಡಿದಿವೆ.

೧೪.    ಆದರೆ, ರಾಜ್ಯದ ನೈಸರ್ಗಿಕ ಸಂಪತ್ತನ್ನು ಸಂರಕ್ಷಿಸಲು ಶ್ರಮಿಸಿದ ನನ್ನನ್ನೇ ಇದೀಗ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲಾಗಿದೆ. ಇದನ್ನು ರಾಜ್ಯದ ಪ್ರಾಜ್ಞ ಜನತೆಯ ವಿವೇಚನೆಗೆ ಬಿಡುತ್ತೇನೆ.

೧೫.    ಕಳೆದ ನಲವತ್ತು ವರ್ಷಗಳಲ್ಲಿ ರಾಜ್ಯದಾದ್ಯಂತ ಸಂಚರಿಸಿ ಪಕ್ಷವನ್ನು ಸಂಘಟಿಸಿದ್ದೇನೆ. ಸಂಘಟನೆಯ ಸಹಕಾರದಿಂದ ದಕ್ಷಿಣ ಭಾರತದ ಪ್ರಪ್ರಥಮ ಬಾ.ಜ.ಪ. ಸರ್ಕಾರವನ್ನು ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದೇನೆ. ಕಳೆದ ಮೂರು ವರ್ಷಗಳಲ್ಲಿ ಪ್ರತಿನಿತ್ಯ ಪ್ರತಿಪಕ್ಷಗಳು ನಡೆಸಿದ ವಿವೇಚನಾ ರಹಿತ ದಾಳಿಯನ್ನು ಎದುರಿಸಿ ಎದೆಗುಂದದೆ ಮುನ್ನಡೆದಿದ್ದೇನೆ.

೧೬.    ಪಕ್ಷದ ಶಿಸ್ತಿನ ಸಿಪಾಯಿಯಾಗಿ, ಪಕ್ಷದ ಹಿತರಕ್ಷಣೆಗಾಗಿ ಯಾವ ತ್ಯಾಗವೂ ದೊಡ್ಡದಲ್ಲ ಎಂದು ಆರಂಭದಿಂದಲೂ ನಂಬಿಬಂದವನು ನಾನು. ಆದ್ದರಿಂದ, ವರಿಷ್ಠರ ಆದೇಶ ಮನ್ನಿಸಿ ಮುಕ್ತ ಮನಸ್ಸಿನಿಂದ ಮುಖ್ಯಮಂತ್ರಿ ಪದವಿ ತೊರೆದಿದ್ದೇನೆ.

೧೭.    ಮುಖ್ಯಮಂತ್ರಿಯಾಗಿ ಮತ್ತು ಅದಕೂ ಮುನ್ನ ರಾಜ್ಯದಲ್ಲಿ ಸಂಚರಿಸಿದಾಗ ಅಪಾರ ಸಂಖ್ಯೆಯಲ್ಲಿ ನೆರೆದು ನಿರೀಕ್ಷೆಯ ಕಣ್ಣುಗಳಲ್ಲಿ ನನ್ನಲ್ಲಿ ಸೇವಾ ಸಂಕಲ್ಪ ಮೂಡಲು ಪ್ರಭಾವಿಸಿದ ಸೋದರ-ಸೋದರಿಯರ ಚಿತ್ತಾರ ನನ್ನ ಸ್ಮತಿ ಪಟಲದಲ್ಲಿ ಶಾಶ್ವತವಾಗಿ ಅಚ್ಚೊತ್ತಿದೆ. ಜನರ ಪ್ರೀತಿ ವಿಶ್ವಾಸಗಳೇ ನನ್ನ ಆತ್ಮ ವಿಶ್ವಾಸ ಮತ್ತು ಸಾಮರ್ಥ್ಯದ ಮೂಲಗಳಾಗಿವೆ. ಆದ್ದರಿಂದ ಅಧಿಕಾರ ಹೋಯಿತೆಂದು ವಿರಮಿಸದೆ ಮುಂದೆಯೂ ಪಕ್ಷದ ಸಂಘಟನೆ ಹಾಗೂ ರಾಜ್ಯದ ಪ್ರಗತಿಗಾಗಿ ನನ್ನ ಕೊನೆಯ ಉಸಿರಿರುವವರೆಗೂ ಪ್ರಾಮಾಣಕವಾಗಿ ಶ್ರಮಿಸುವ ಸಂಕಲ್ಪ ಮಾಡಿದ್ದೇನೆ.

೧೮.    ರಾಜ್ಯದ ಜನತೆಯ ಪ್ರೀತಿ, ವಿಶ್ವಾಸ ಮತ್ತು ಕಾಳಜಿಗೆ ನಾನು ಆಭಾರಿಯಾಗಿದ್ದೇನೆ. ಅವರ ನಂಬಿಕೆ ಮತ್ತು ವಿಶ್ವಾಸವನ್ನು ಹುಸಿಗೊಳಿಸದಂತೆ ಮುಂದೆಯೂ ನಡೆದುಕೊಳ್ಳುತ್ತೇನೆ. ಎಲ್ಲರಿಗೂ ನನ್ನ ಮನದಾಳದ ವಂದನೆಗಳು.

 

Leave a Reply