ಆಗ್ರೊ ಫುಡ್ ಟೆಕ್ ಎಕ್ಸ್ ಪೋ-2020 ಕರ್ಟನ್ ರೈಸರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಿಎಂ

ಆಗ್ರೊ ಫುಡ್ ಟೆಕ್ ಎಕ್ಸ್ ಪೋ-2020 ಕರ್ಟನ್ ರೈಸರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಿಎಂ

16 ಡಿಸೆಂಬರ್ 2019
ಮುಖ್ಯಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪ ಅವರ, ಆಗ್ರೊ ಫುಡ್ ಟೆಕ್ ಎಕ್ಸ್ ಪೋ-2020 ಕರ್ಟನ್ ರೈಸರ್ ಕಾರ್ಯಕ್ರಮದಲ್ಲಿನ ಭಾಷಣದ ಮುಖ್ಯಾಂಶಗಳು.ಕೃಷಿ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡುವುದು ನಮ್ಮ ಸರ್ಕಾರದ ಆದ್ಯ ಕರ್ತವ್ಯವಾಗಿದೆ.ಕೃಷಿ ಉತ್ಪನ್ನಗಳ ಸಂಗ್ರಹಣೆ ಮತ್ತು ಬಳಕೆ ನಡುವೆ ಆಗುತ್ತಿರುವ ನಷ್ಟದ ಪ್ರಮಾಣ ಶೇ. 40 ರಷ್ಟಿರುವುದು ನಮ್ಮೆಲ್ಲರಲ್ಲೂ ಆತಂಕ ಉಂಟು ಮಾಡಿದೆ.

ಭಾರತದಲ್ಲಿ ಉತ್ಪಾದಿಸಲಾಗುತ್ತಿರುವ ಆಹಾರ ಧಾನ್ಯಗಳ ಪೈಕಿ ಶೇ. 40 ರಷ್ಟು ಪೋಲಾಗುತ್ತಿದೆ. ಉದಾಹರಣೆಗೆ ಭಾರತದಲ್ಲಿ 21 ದಶಲಕ್ಷ ಟನ್‍ನಷ್ಟು ಗೋಧಿ ನಷ್ಟವಾಗುತ್ತಿದೆ.ವಾರ್ಷಿಕ ಸುಮಾರು 50 ಸಾವಿರ ಕೋಟಿ ರೂ. ಮೌಲ್ಯದ ಆಹಾರ ನಮ್ಮ ದೇಶದಲ್ಲಿ ಬಳಸಲಾಗದೆ ನಷ್ಟಕ್ಕೊಳಗಾಗುತ್ತಿದೆ.ಇತ್ತೀಚಿನ ಜಾಗತಿಕ ಹಸಿವು ಸೂಚ್ಯಂಕ ತಿಳಿಸಿರುವಂತೆ, ಭಾರತ ದೇಶ 117 ರಾಷ್ಟ್ರಗಳ ಪೈಕಿ 102 ನೇ ಸ್ಥಾನದಲ್ಲಿದೆ. ಒಂದೆಡೆ ಜನ ಹಸಿವಿನಿಂದ ಬಳಲುತ್ತಿದ್ದರೆ, ಮತ್ತೊಂದೆಡೆ ಕೃಷಿ ಉತ್ಪನ್ನಗಳ, ಅದರಲ್ಲೂ ವಿಶೇಷವಾಗಿ ಆಹಾರಧಾನ್ಯಗಳ ಪೋಲು ಅವ್ಯಾಹತವಾಗಿ ನಡೆದಿದೆ.

ಇಂದು ಕೃಷಿ ವಲಯವನ್ನು ಲಾಭದಾಯಕವಾಗಿಸುವ ಸವಾಲು ನಮ್ಮ ಮುಂದಿದೆ.ಕೃಷಿ ಪದ್ಧತಿಯಲ್ಲಿನ ಬದಲಾವಣೆ, ಕೃಷಿ ಉತ್ಪನ್ನಗಳ ಸಂಸ್ಕರಣೆ ಮೊದಲಾದವುಗಳು ರೈತರ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆ ತರಬಲ್ಲವು.ರೈತ ಬೆಳೆದ ಬೆಳೆಗಳನ್ನು ಆಹಾರ ಸಂಸ್ಕರಣಾ ಘಟಕಗಳು ಖರೀದಿಸಿ, ಇವುಗಳನ್ನು ಸಂಸ್ಕರಿಸಿ, ಹೊಸ ರೂಪ ನೀಡಿ, ಮಾರುಕಟ್ಟೆಯಲ್ಲಿ ಸಿದ್ಧಪಡಿಸಿದ ಆಹಾರೋತ್ಪನ್ನಗಳನ್ನಾಗಿ ಮಾರಾಟ ಮಾಡುವುದು ಸಂಸ್ಕರಣಾ ಕೈಗಾರಿಕೆಗಳ ಪಾತ್ರವಾಗಿದೆ.

ಇಂತಹ ಘಟಕಗಳು ಇಂದು ಬೃಹತ್ ಉದ್ದಿಮೆಗಳಾಗಿ ರಾಷ್ಟ್ರವ್ಯಾಪಿ ಬೆಳೆದು ಹೆಚ್ಚು ಉದ್ಯೋಗಾವಕಾಶವನ್ನು ಕಲ್ಪಿಸಿರುವುದು ಗಮನಾರ್ಹ.
ಭಾರತ ಸರ್ಕಾರವು ಆಹಾರ ಸಂಸ್ಕರಣಾ ಉದ್ದಿಮೆಗಳಲ್ಲಿ ಶೆ. 100 ರಷ್ಟು ವಿದೇಶಿ ಬಂಡವಾಳ ಹೂಡಿಕೆಗೆ ಅನುಮತಿ ನೀಡಿರುವುದು ಈ ಕ್ಷೇತ್ರ ಬೆಳವಣಿಗೆಗೆ ಒತ್ತು ನೀಡಿದಂತಾಗಿದೆ. ಇದರಿಂದ ಈ ಕ್ಷೇತ್ರದಿಂದ 8.7 ಬಿಲಿಯನ್ ಡಾಲರ್ ವಿದೇಶಿ ಬಂಡವಾಳ ಹರಿದು ಬಂದಿರುವುದು ಸಂತೋಷದ ಸಂಗತಿ.

ವಿದೇಶಿ ಬಂಡವಾಳದ ಜೊತೆಗೆ ಹೊಸ ತಂತ್ರಜ್ಞಾನಗಳೂ ಸಹ ಈ ಕ್ಷೇತ್ರದಲ್ಲಿ ನಮ್ಮ ದೇಶಕ್ಕೆ ವರ್ಗಾವಣೆಯಾಗಿದ್ದು, ಈ ಕ್ಷೇತ್ರದ ತ್ವರಿತ ಬೆಳವಣಿಗೆಗೆ ಪೂರಕವಾಗಿದೆ.ನಮ್ಮದು ರೈತಪರ ಸರ್ಕಾರ. ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳುವುದು ನಮ್ಮ ಸರ್ಕಾರದ ಆದ್ಯತೆ. ಆಹಾರ ಸಂಸ್ಕರಣಾ ಘಟಕಗಳನ್ನು ಉತ್ತೇಜಿಸಿದಲ್ಲಿ ಪರೋಕ್ಷವಾಗಿ ರೈತರನ್ನು ಬೆಂಬಲಿಸಿದಂತಾಗುತ್ತದೆ.

ಎಫ್‍ಕೆಸಿಸಿಐ ಸಂಸ್ಥೆಯು ರೈತರನ್ನು ಬೆಂಬಲಿಸುವುದಕ್ಕೆ ಪೂರಕವಾಗಿ ಈ ಮೇಳವನ್ನು ಆಯೋಜಿಸುತ್ತಿರುವುದು ಸ್ವಾಗತಾರ್ಹ.ಹೊಸ ತಂತ್ರಜ್ಞಾನವನ್ನು ನಾವು ಅಳವಡಿಸಿಕೊಂಡು ಇನ್ನೂ ಹೆಚ್ಚಿನ ಪ್ರಗತಿ ಸಾಧಿಸಲು ಈ ಮೇಳದಲ್ಲಿ ಒತ್ತು ನೀಡಬೇಕಿದೆ.ರಾಜ್ಯದ ಪ್ರಮುಖ ಬೆಳೆಗಳಾದ ತೆಂಗು, ಅಡಿಕೆ, ಮಾವು, ಟೊಮೋಟೋ, ಮೆಣಸಿನ ಕಾಯಿ, ದ್ರಾಕ್ಷಿ ಹಾಗೂ ಇತರೆ ತೋಟಗಾರಿಕೆ ಬೆಳೆಗಳನ್ನು ಹೊಸ ತಂತ್ರಜ್ಞಾನದ ನೆರವಿನೊಂದಿಗೆ ಶೇಖರಿಸಿ, ಸಂಸ್ಕರಿಸಿ, ಮೌಲ್ಯವರ್ಧನೆ ಮಾಡಲು ಅನುಕೂಲವಾಗುವ ಉದ್ದಿಮೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾಪಿಸಬೇಕಾಗಿದೆ.

ರಾಜ್ಯದ ವಿವಿಧ ಪ್ರದೇಶಗಳಲ್ಲಿ ಬೆಳೆಯುವ ಬೆಳೆಗಳನ್ನಾಧರಿಸಿ ಅಲ್ಲಿಯೇ ಕ್ಲಸ್ಟರ್‍ಗಳನ್ನು ನಿರ್ಮಿಸಿ, ಆಹಾರ ಉತ್ಪಾದನಾ ಘಟಕಗಳನ್ನು ಅಂತಹ ಸ್ಥಳಗಳಲ್ಲಿಯೇ ಸ್ಥಾಪಿಸಲು ಆಕರ್ಷಕ ರಿಯಾಯಿತಿ ವಿನಾಯಿಗಳನ್ನು ನೀಡಿ ಉತ್ತೇಜಿಸಲು ಸರ್ಕಾರ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಿದೆ.
ಹೊಸ ಆವಿಷ್ಕಾರ, ನವೀನ ತಂತ್ರಜ್ಞಾನಗಳ ಪರಸ್ಪರ ವಿನಿಮಯ, ಬಂಡವಾಳ ಹೂಡಿಕೆದಾರರನ್ನು ಗುರುತಿಸುವ ಕಾರ್ಯಗಳನ್ನು ಕೈಗೊಂಡು, ಪ್ರಮುಖವಾಗಿ ರೈತರಿಗೆ ಉತ್ತೇಜನ ನೀಡುವಲ್ಲಿ ಈ ಮೇಳವು ಪ್ರಮುಖ ಪಾತ್ರ ವಹಿಸಲಿ.

Leave a Reply