ಶಿವಮೊಗ್ಗದಲ್ಲಿ ಜನತಾ ದರ್ಶನ ನಡೆಸಿದ ಸಿಎಂ

ಶಿವಮೊಗ್ಗದಲ್ಲಿ ಜನತಾ ದರ್ಶನ ನಡೆಸಿದ ಸಿಎಂ

30 ಸೆಪ್ಟೆಂಬರ್ 2019
ಶಿವಮೊಗ್ಗ ಜಿಲ್ಲೆಯ ಎಲ್ಲಾ ಪ್ರಮುಖ ನೀರಾವರಿ ಯೋಜನೆಗಳನ್ನು ಒಂದು ವರ್ಷದ ಒಳಗಾಗಿ ಪೂರ್ಣಗೊಳಿಸಲು ಮುಖ್ಯಮಂತ್ರಿ ಬಿ‌.ಎಸ್. ಯಡಿಯೂರಪ್ಪ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.ಜಿಲ್ಲೆಯ ಶಿಕಾರಿಪುರದಲ್ಲಿ ಜನತಾ ದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು‌.

ಹೊಸೂರು ಉಡುಗಣಿ ತಾಳಗುಂದ ನೀರಾವರಿ ಯೋಜನೆಗೆ ಈಗಾಗಲೇ 607 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಹೊಸಳ್ಳಿ ಏತನೀರಾವರಿ ಕಲ್ಲೂರು ನೀರಾವರಿ ಯೋಜನೆ, ಸೊರಬ ತಾಲೂಕಿನ ಮೂರು ಏತ ನೀರಾವರಿ ಯೋಜನೆಗಳು ಸದ್ಯದಲ್ಲೇ ಆರಂಭವಾಗಲಿದೆ ಎಂದರು. ಪ್ರವಾಹ ಪರಿಹಾರ ಕಾಮಗಾರಿಗಳನ್ನು ತ್ವರಿತಗೊಳಿಸಲು ಕ್ರಮಕೈಗೊಳ್ಳಲಾಗಿದೆ. ಅಕ್ಟೋಬರ್ ನಾಲ್ಕರಿಂದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಹಾರ ಕಾಮಗಾರಿಗಳನ್ನು ಪರಿಶೀಲಿಸುವುದಾಗಿ ಮುಖ್ಯಮಂತ್ರಿ ಅವರು ತಿಳಿಸಿದರು‌.

ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಿಗೆ ಮುಂದಿನ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನೀಡಲಾಗುವುದು ಎಂದು ಹೇಳಿದರು.
ಶಿಕಾರಿಪುರದಲ್ಲಿ ಶಾಹಿ ಗಾರ್ಮೆಂಟ್ ಘಟಕ ಆರಂಭವಾಗಲಿದ್ದು ಇದರಿಂದ ಈ ಭಾಗದ 2000ಕ್ಕೂ ಹೆಚ್ಚು ಹೆಣ್ಣುಮಕ್ಕಳಿಗೆ ಉದ್ಯೋಗಾವಕಾಶ ಸೃಷ್ಟಿಯಾಗಲಿದೆ ಎಂದು ಹೇಳಿದ ಮುಖ್ಯಮಂತ್ರಿ ಅವರು, ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿಯನ್ನು ಹತ್ತು ತಿಂಗಳ ಒಳಗಾಗಿ ಪೂರ್ಣಗೊಳಿಸಲು ಸೂಚಿಸಿದ್ದು, 45 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದರು. ಜೋಗ ಜಲಪಾತದ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಅವರು ಹೇಳಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಲೋಕಸಭಾ ಸದಸ್ಯ ಬಿ. ವೈ. ರಾಘವೇಂದ್ರ, ಶಿವಮೊಗ್ಗ -ಶಿಕಾರಿಪುರ- ರಾಣೆಬೆನ್ನೂರು ರೈಲ್ವೆ ಮಾರ್ಗ ಯೋಜನೆಗೆ ರಾಜ್ಯ ಸರ್ಕಾರದ ಪಾಲು 750 ಕೋಟಿ ರೂ. ಬಿಡುಗಡೆ ಮಾಡಲಾಗುವುದು ಎಂದರು. ಕೋಟೆ ಗಂಗೂರು ಸ್ಯಾಟಲೈಟ್ ರೈಲ್ವೆ ನಿಲ್ದಾಣ ಸ್ಥಾಪನೆಗೆ 60 ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಲಾಗಿದೆ ಎಂದರು.

Leave a Reply