ಯಡಿಯೂರಪ್ಪ ಹಠ, ಛಲಕ್ಕೆ ಒಂದು sample

ಹಾಸನ, ಮೇ 4: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸುಪ್ರೀಂಕೋರ್ಟಿನಲ್ಲಿ ಇಂದು ಏನು ಕಾದಿದೆಯೋ ಆ ಸಿದ್ದೇಶ್ವರನೇ ಬಲ್ಲ. ಆದರೆ ಮುನ್ನಾ ದಿನವಾದ ನಿನ್ನೆ ಮಾನ್ಯ ಯಡಿಯೂರಪ್ಪ ಅವರು ಅರಸೀಕೆರೆ ಸಮೀಪದ ಜೇನುಕಲ್ಲು ಬೆಟ್ಟದ ಸಿದ್ದೇಶ್ವರ ಸ್ವಾಮಿಯಲ್ಲಿ ಅಖಂಡ ನಿಷ್ಠೆ ತೋರಿದ ಪರಿ ನೋಡಿದರೆ ಯಾರಿಗೇ ಆಗಲಿ ಆಶ್ಚರ್ಯ ಮೂಡುತ್ತದೆ. 70 ಗಡಿ ದಾಟಿರುವ ಯಡಿಯೂರಪ್ಪ ಅವರಲ್ಲಿ ಹಠ, ಛಲ ಹೇಗೆ ಕೆಲಸ ಮಾಡುತ್ತದೆ ಎಂಬುದಕ್ಕೆ ಜೇನುಕಲ್ಲು ಬೆಟ್ಟದ ಒಂದೊಂದು ಕಲ್ಲೂ ನಿನ್ನೆ ಸಾಕ್ಷಿಯಾಗಿದೆ.
ಬೆಟ್ಟದ ಮೇಲೆ ಸಿದ್ದೇಶ್ವರ ಸ್ವಾಮಿಗೆ ಸಾಷ್ಟಾಂಗ ಹಾಕಲು ಬರೋಬ್ಬರಿ 620 ಮೆಟ್ಟಿಲು ಹತ್ತಬೇಕು. ಡೊಳ್ಳುಹೊಟ್ಟೆ ಹೊತ್ತ ಯಾವುದೇ ರಾಜಕಾರಣಿ ಖಂಡಿತ ಇಂಥ ಸಾಹಸಕ್ಕೆ ಮುಂದಾಗಲಾರ. ಆದರೆ ಇಂದಿಗೂ ಉತ್ತಮ ಆರೋಗ್ಯ, ದೇಹಶಕ್ತಿ ಕಾಪಾಡಿಕೊಂಡಿರುವ ಯಡಿಯೂರಪ್ಪ ಅವರು ಮಾನಸಿಕವಾಗಿಯೂ ತಾವೆಷ್ಟು ಸದೃಢರು, ಅದರಲ್ಲೂ ಛಲ, ಹಠ ಮೈದಾಳಿದರೆ ತಮ್ಮ ತಾಕತ್ತು ಏನು ಎಂಬುದನ್ನು ಬೆಟ್ಟದಲ್ಲಿ ತೋರಿಸಿದ್ದಾರೆ.
ಒಂದೆಡೆ ಜೇನುಕಲ್ಲು ಬೆಟ್ಟಕ್ಕಿಂತ ಅಗಾಧ ಎತ್ತರದಲ್ಲಿ ಸುಪ್ರೀಂಕೋರ್ಟ್ ಗೋಚರವಾಗಿ, ಕಾಡುತ್ತಿದ್ದರೂ ಯಡಿಯೂರಪ್ಪ ಎದೆಗುಂದದೆ ‘ತಂದೆ, ಕಾಪಾಡೋ’ ಎಂದು ಸಿದ್ದೇಶ್ವರನಿಗೆ ಭಕ್ತಿಯಿಂದ ಬೇಡಿಕೊಂಡಿದ್ದಾರೆ. ಸಿದ್ದೇಶ್ವರರ ಆಶೀರ್ವಾದ ಏನೆಂಬುದು ಕಾಲವೇ ಹೇಳಬೇಕು. ಆದರೂ ಯಡಿಯೂರಪ್ಪನವರ ಮನೋಸ್ಥೈರ್ಯ ಎಂತಹುದೆಂದರೆ …
ವಿರೋಧಿಗಳ ಮೇಲೂ ಸಲೀಸಾಗಿ ಹತ್ತಿಳಿದರಪ್ಪ: ಬಯಲುಸೀಮೆ ಅಂಚಿನಲ್ಲಿರುವ ಅರಸೀಕೆರೆ ಬೇಸಿಗೆಯಲ್ಲಿ ಸುಡುಗಾವಲಿಯಂತಿರುತ್ತದೆ. ಅದೂ ಬೆಟ್ಟ ಪ್ರದೇಶ ಕಾದ ಕಬ್ಬಿಣವೇ. ಅಂತಹ ಸ್ಥಿತಿಯಲ್ಲಿ ಯಡಿಯೂರಪ್ಪನವರು ಒಳಗೆ ಬೇಗುದಿಯಿದ್ದರೂ 620 ಮೆಟ್ಟಿಲುಗಳನ್ನೂ ಪ್ರಶಾಂತರಾಗಿ ಹತ್ತಿದ್ದಾರೆ.
ಡೋಲಿಯಲ್ಲಿ ಬೆಟ್ಟ ಕ್ರಮಿಸುತ್ತಾರೆ ಎಂಬ ನಿರೀಕ್ಷೆಯನ್ನು ಹುಸಿಗೊಳಿಸಿ, ಮಧ್ಯೆ ಒಂದು ಬಾರಿ ಕುಳಿತು ದಣಿವಾರಿಸಿಕೊಂಡರೆ 2 ಬಾರಿ ನಿಂತುಕೊಂಡೇ ಸುಧಾರಿಸಿಕೊಂಡಿದ್ದಾರೆ. ಈ ಹಿಂದೆ ದೇವೇಗೌಡರು ಗೊಮ್ಮಟೇಶ್ವರನ ದರ್ಶನ ಪಡೆಯಲು ಡೋಲಿಯಲ್ಲಿ ತೇಲಿಹೋಗಿದ್ದರು ಎಂಬುದು ಈಗ ನೆನಪಿಗೆ ಬರುತ್ತಿದೆ.
ಜೇನುಕಲ್ಲು ಸಿದ್ದೇಶ್ವರ ಸ್ವಾಮೀಜಿಗೆ ರುದ್ರಾಭಿಷೇಕ ಮತ್ತಿತರ ವಿಶೇಷ ಪೂಜೆಗಳನ್ನು ಸಲ್ಲಿಸಿದ ಬಳಿಕ, ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪನವರು ‘ಬೆಟ್ಟದ ಮೇಲೆ ಸಲೀಸಾಗಿ ಹತ್ತಿಳಿದಂತೆ ವಿರೋಧ ಪಕ್ಷದವರು, ಸ್ವಪಕ್ಷದವರು ಎಂಬ ಭೇಧವೆಣಿಸಿದೆ ಸರ್ವ ವಿರೋಧಿಗಳ ಮೇಲೂ ಅಷ್ಟೇ ಹಠ, ಛಲದೊಂದಿಗೆ ಸಲೀಸಾಗಿ ಹತ್ತಿಳಿದರು ಎಂಬುದು ಗಮನಾರ್ಹ’. ಅಬಕಾರಿ ಸಚಿವ ರೇಣುಕಾಚಾರ್ಯ, ರಾಜ್ಯ ಕೈಮಗ್ಗದ ನಿಗಮದ ಅಧ್ಯಕ್ಷ ಲಕ್ಷ್ಮಿನಾರಾಯಣ ಅವರಿಗೆ ಸಾಥ್ ನೀಡಿದರು.

http://kannada.oneindia.in/news/2012/05/04/karnataka-bsy-ascends-arasikere-siddeshwara-hill-with-ease-aid0135.html

Leave a Reply