ಸ್ವಾತಂತ್ರ್ಯೋತ್ಸವ ಸಮಾರಂಭ -ಮಾನ್ಯ ಮುಖ್ಯಮಂತ್ರಿಗಳ ಭಾಷಣ

ಆತ್ಮೀಯ ಬಂಧು-ಭಗಿನಿಯರೆ,

* ೬೩ನೇ ಸ್ವಾತಂತ್ರ್ಯ ದಿನಾಚರಣೆಯ ಸಂತಸದ ಸಂದರ್ಭದಲ್ಲಿ ತಮ್ಮೆಲ್ಲರಿಗೂ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ.
* ಅಸಂಖ್ಯಾತ ಹೋರಾಟಗಾರರ ಅಪರಿಮಿತ ತ್ಯಾಗ ಮತ್ತು ಬಲಿದಾನದಿಂದ ಭಾರತಮಾತೆ ಬಂಧಮುಕ್ತಳಾಗಿದ್ದಾಳೆ.  ಸಾಟಿಯಿಲ್ಲದ ಸ್ವಾತಂತ್ರ್ಯ ಸಮರದಲ್ಲಿ ತಮ್ಮ ಜೀವಿತವನ್ನೇ ಪಣಕ್ಕಿಟ್ಟು ಹೋರಾಡಿದ ಎಲ್ಲರನ್ನೂ ಈ ಸಂದರ್ಭದಲ್ಲಿ ಸ್ಮರಿಸಿ ಗೌರವ ಸಮರ್ಪಣೆ ಮಾಡುವುದು ನಮ್ಮ ಕರ್ತವ್ಯ.
* ಕರ್ನಾಟಕದ ಮುಖ್ಯಮಂತ್ರಿಯಾಗಿ ನಾಡಿನ ಜನತೆಯನ್ನು ಉದ್ದೇಶಿಸಿ ಮಾತನಾಡುವ ಸದವಕಾಶ ನನಗೆ ಎರಡನೆ ಬಾರಿಗೆ ದೊರೆತಿದೆ. ಕಳೆದ ವರ್ಷ ಇದೇ ವೇದಿಕೆಯಿಂದ ಮುಖ್ಯಮಂತ್ರಿಯಾಗಿ ನನ್ನ ಮೊದಲ ಸ್ವಾತಂತ್ರ್ಯೋತ್ಸವ ಭಾಷಣ ಮಾಡಿದ್ದೆ.  ನಾಡಿನ ಸಮಗ್ರ ಅಭಿವೃದ್ಧಿಗೆ ನೀಲನಕ್ಷೆ ಬಿಚ್ಚಿಟ್ಟಿದ್ದೆ.  ಯಾವ ಕ್ಷೇತ್ರಗಳು ನಮ್ಮ ಸರ್ಕಾರದ ಆದ್ಯತೆ ಎಂಬುದನ್ನು ವಿವರಿಸಿದ್ದೆ.  ಕಳೆದ ಒಂದು ವರ್ಷದಲ್ಲಿ ಆಗಿರುವ ಪ್ರಗತಿಯ ಸಂಕ್ಷಿಪ್ತ ಚಿತ್ರಣವನ್ನು ಮುಂದೆ ನೀಡಲಿದ್ದೇನೆ.

ಸ್ವಾತಂತ್ರ್ಯವೇ  ಲೇಸು

* ಸ್ವಾತಂತ್ರ್ಯ ಪ್ರತಿ ವ್ಯಕ್ತಿಯ ಜನ್ಮಸಿದ್ಧ ಹಕ್ಕು.  ಪರಾವಲಂಬನೆ ಮತ್ತು ಪರಪೀಡಣೆ ಯಾರಿಗೂ ಸಹ್ಯವಲ್ಲ. ಹಂಗಿನರಮನೆಗಿಂತ ಇಂಗಡದ ಗುಡಿ ಲೇಸು, ಜಗದಿ ಸ್ವಾತಂತ್ರ್ಯವೇ ಲೇಸು ಎಂಬ ಕನ್ನಡದ ಶ್ರೇಷ್ಠ ದಾರ್ಶನಿಕ ಕವಿ ಸರ್ವಜ್ಞ ಮೂರ್ತಿಯ ವಚನದ ಸಾಲುಗಳು ಅರ್ಥಪೂರ್ಣ.
* ರಾಷ್ಟ್ರೀಯ ಹಬ್ಬವಾದ ಈ ದಿನದಂದು ಸರ್ವಜ್ಞ ಮೂರ್ತಿಯ ಈ ಮಾತುಗಳನ್ನು ನಾವೆಲ್ಲರೂ ನೆನಪಿಗೆ ತಂದುಕೊಳ್ಳಬೇಕು.  ಅಪಾರ ಬೆಲೆತೆತ್ತು ಗಳಿಸಿರುವ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವ ಸಂಕಲ್ಪ ತೊಡಬೇಕು.

ಕಾರ್ಗಿಲ್  ಹುತಾತ್ಮರಿಗೆ ನಮನ

* ಇತ್ತೀಚಿಗೆ ಅಂದರೆ ಜುಲೈ ೨೬ರಂದು ಕಾರ್ಗಿಲ್ ಕದನದ ದಶಮಾನೋತ್ಸವವನ್ನು ಆಚರಿಸಿ ಹುತಾತ್ಮರಿಗೆ ನಾವು ಗೌರವ ಸಮರ್ಪಿಸಿದ್ದೇವೆ.
* ಪಾಕಿಸ್ತಾನದ ದುರಾಕ್ರಮಣವನ್ನು ಹಿಮ್ಮೆಟ್ಟಿಸಿ ಕಾರ್ಗಿಲ್ ಪ್ರದೇಶದ ಸ್ವಾತಂತ್ರ್ಯ ಮತ್ತು ಸಮಗ್ರತೆ ರಕ್ಷಿಸಿದ ವೀರಯೋಧರು ದೇಶಭಕ್ತಿಯ ಕಿಚ್ಚನ್ನು ಹಚ್ಚಿದ ದಿನ ಜುಲೈ ೨೬.
* ಕಾರ್ಗಿಲ್ ಕದನದಲ್ಲಿ ವೀರಮರಣವನ್ನು ಅಪ್ಪಿದ ೫೩೩ ಭಾರತೀಯ ಯೋಧರಲ್ಲಿ ೧೫ ಮಂದಿ ಕರ್ನಾಟಕದ ಧೀರಪುತ್ರರೂ ಸೇರಿದ್ದಾರೆಂಬುದು ನಮ್ಮೆಲ್ಲರೂ ಅಭಿಮಾನ ಮೂಡಿಸಿದೆ.
* ಈ ಯೋಧರ ಕುಟುಂಬಗಳಿಗೆ ಕರ್ನಾಟಕ ಸರ್ಕಾರದ ವತಿಯಿಂದ ಇಂದು ತಲಾ ೫ ಲಕ್ಷ ರೂ.ಗಳ ಗೌರವ ಧನವನ್ನು ಆಯಾ ಜಿಲ್ಲೆಗಳಲ್ಲಿ ಸಮರ್ಪಿಸಲಾಗುತ್ತಿದೆ.
* ಕಾರ್ಗಿಲ್ ಯುದ್ಧದಲ್ಲಿ ಹಲವಾರು ಮಂದಿ ಸೈನಿಕರು ಮತ್ತು ಅಧಿಕಾರಿಗಳು ಮಾರಣಾಂತಿಕ ಗಾಯಗಳಿಗೆ ಒಳಗಾಗಿ ಈಗ ಚೇತರಿಸಿಕೊಂಡಿದ್ದಾರೆ.  ಅಂತಹ ಯೋಧರುಗಳ ಯೋಗಕ್ಷೇಮದ ದೃಷ್ಟಿಯಿಂದ ತಲಾ ೧ ಲಕ್ಷ ರೂ.ಗಳ ನೆರವನ್ನು ನೀಡಲಾಗುತ್ತಿದೆ.
* ಕಾರ್ಗಿಲ್ ಕದನದಲ್ಲಿ ಮಡಿದ ಯೋಧರಿಗೆ ಶ್ರದ್ದಾಂಜಲಿ ಸಲ್ಲಿಸಿ ಅವರುಗಳ ಜೊತೆ ಗಾಯಾಳು ಯೋಧರ ಕುಟುಂಬಗಳಿಗೆ ನೆರವಾಗುವ ಸಂಕಲ್ಪ ತೊಡಲು ಸ್ವಾತಂತ್ರ್ಯೋತ್ಸವದ ದಿನ ಅತ್ಯಂತ ಪ್ರಶಸ್ತ ದಿನವಾಗಿದೆ.

ಯುದ್ಧಸ್ಮಾರಕ

* ಮಹಾಯುದ್ಧಗಳೂ ಸೇರಿ ಈವರೆಗೆ ವಿವಿಧ ಕದನಗಳಲ್ಲಿ ಮಡಿದ ಭಾರತೀಯ ಯೋಧರ ಸ್ಮರಣೆ ಮತ್ತು ಗೌರವಾರ್ಥವಾಗಿ ಬೆಂಗಳೂರಿನಲ್ಲಿ ನಮ್ಮ ಸರ್ಕಾರ ಯುದ್ಧಸ್ಮಾರಕ ನಿರ್ಮಿಸುತ್ತಿದೆ. ಸ್ವಾತಂತ್ರ್ಯಾ ನಂತರ ಈ ಕ್ರಮ ಕೈಗೊಂಡ ದೇಶದ ಮೊದಲ ರಾಜ್ಯ ಕರ್ನಾಟಕ.  ಇದು ಸೈನಿಕರಿಗೆ ನಮ್ಮ ರಾಜ್ಯ ತೋರಿಸುತ್ತಿರುವ ಗೌರವದ ಪ್ರತೀಕ.

ಅರಿಹಂತ್  ರಾಷ್ಟ್ರಕ್ಕೆ ಸಮರ್ಪಣೆ

* ರಾಷ್ಟ್ರ ರಕ್ಷಣೆಗೆ ಸೆಣಸುವ ನಮ್ಮ ಯೋಧರಿಗೆ ನೆರವಾಗಲು ರಕ್ಷಣಾ ವಿಜ್ಞಾನಿಗಳು ನಿರಂತರ ಸಂಶೋಧನೆ ಮತ್ತು ಅನ್ವೇಷಣೆಯಲ್ಲಿ ನಿರತರಾಗಿದ್ದಾರೆ.  ಅದರ ಇತ್ತೀಚಿನ ಫಲವೇ ಐ.ಎನ್.ಎಸ್. ಅರಿಹಂತ್ ಸಬ್‌ಮೆರಿನ್ ಅಣು ನೌಕೆಯ ನಿರ್ಮಾಣ ಮತ್ತು ರಾಷ್ಟ್ರಕ್ಕೆ ಸಮರ್ಪಣೆ. ಇದರಿಂದ ವಿಶ್ವದ ೬ ಬಲಿಷ್ಟ ರಾಷ್ಟ್ರಗಳ ಸಾಲಿಗೆ ಭಾರತ ಸೇರ್ಪಡೆಯಾಗಿದೆ.  ಇದು ಭಾರತೀಯರಾದ ನಾವೆಲ್ಲ ಹೆಮ್ಮೆಪಡುವ ಬೆಳವಣಿಗೆ.

ಜೈ ಜವಾನ್-ಜೈ ಕಿಸಾನ್-ಜೈ ವಿಜ್ಞಾನ್

* ರಾಷ್ಟ್ರ ರಕ್ಷಣೆಗೆ ಹೋರಾಡುವ ಸೈನಿಕರನ್ನು ಮತ್ತು ದೇಶಕ್ಕೆ ಅನ್ನ ನೀಡುವ ರೈತರನ್ನು ಗೌರವಿಸಲು ದಿವಂಗತ ಪ್ರಧಾನಿ ಲಾಲ್ ಬಹುದ್ಧೂರ್ ಶಾಸ್ತ್ರಿ ಅವರು ಜೈ ಜವಾನ್-ಜೈ ಕಿಸಾನ್ ಘೋಷಣೆ ನೀಡಿದ್ದರು.  ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ನಮ್ಮೆಲ್ಲರ ಬದುಕಿನ ನೆಮ್ಮದಿಗಾಗಿ ಸಂಶೋಧನೆಯಲ್ಲಿ  ತೊಡಗಿರುವ ವಿಜ್ಞಾನಿಗಳ ಗೌರವಾರ್ಥ ಜೈವಿಜ್ಞಾನ್ ಘೋಷಣೆ ನೀಡಿದ್ದಾರೆ.  ಸೈನಿಕ, ರೈತ ಮತ್ತು ವಿಜ್ಞಾನಿ ಪ್ರಾತ:ಸ್ಮರಣೀಯರು.  ಅವರ ಸೇವೆ ಮತ್ತು ತ್ಯಾಗ ಅನನ್ಯ.

ನೇಗಿಲಯೋಗಿಗೆ  ನಮನ

* ಅನ್ನ ನೀಡುವ ನೇಗಿಲಯೋಗಿಗೆ ನಾವೆಲ್ಲರೂ ಚಿರಋಣಿಗಳು.  ರೈತರ ಸಂಕಷ್ಟಗಳಿಗೆ ಸ್ಪಂದಿಸುತ್ತಿರುವ ನಮ್ಮ ಸರ್ಕಾರ ಕೃಷಿ ಮತ್ತು ನೀರಾವರಿ ಅಭಿವೃದ್ಧಿಗೆ ವಿಶೇಷ ಗಮನಹರಿಸಿದೆ.
* ಹಗಲು-ರಾತ್ರಿ ದುಡಿದು ನಮ್ಮನ್ನು ಹಸಿವಿನಿಂದ ರಕ್ಷಿಸುವ ರೈತರ ಗೌರವಾರ್ಥ ಇಂದಿನಿಂದ ಅಧಿಕೃತ ಸಮಾರಂಭಗಳಲ್ಲಿ ರಾಷ್ಟ್ರ ಮತ್ತು ನಾಡಗೀತೆಯೊಂದಿಗೆ ರೈತಗೀತೆ ಹಾಡುವುದನ್ನು ಕಡ್ಡಾಯಗೊಳಿಸಲಾಗಿದೆ.  ರಾಷ್ಟ್ರಕವಿ ಕುವೆಂಪು ಅವರ ನೇಗಿಲಯೋಗಿ ಕವಿತೆಯನ್ನು ರೈತ ಗೀತೆಯಾಗಿ ಅಂಗೀಕರಿಸಲಾಗಿದೆ.

ಸ್ವಾತಂತ್ರ್ಯ ಸ್ಮಾರಕಗಳ ಅಭಿವೃದ್ಧಿ

* ನಾಡಿನೆಲ್ಲೆಡೆ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ನೆನಪಿಸುವ ಹಲವು ತಾಣಗಳಿವೆ.  ದಾಸ್ಯದಿಂದ ನಮ್ಮನ್ನು ಬಿಡಿಸಲು ನಡೆದ ಅಸೀಮ ಹೋರಾಟವನ್ನು ಈ ಸ್ಥಳಗಳು ನಮಗೆ ನೆನಪಿಸುತ್ತವೆ.  ಅವುಗಳ ಅಭಿವೃದ್ಧಿಗೆ ನಮ್ಮ ಸರ್ಕಾರ ಮುಂದಾಗಿದ್ದು ಪ್ರಾರಂಭಿಕವಾಗಿ ಕಿತ್ತೂರು ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣನ ಸ್ಮಾರಕಗಳನ್ನು ಅಭಿವೃದ್ಧಿ ಪಡಿಸುವುದರ ಜೊತೆಗೆ ಗೌರಿಬಿದನೂರಿನ ವಿದುರಾಶ್ವಥ್ಥ, ಮದ್ದೂರು ಬಳಿ ಶಿವಪುರ, ಶಿವಮೊಗ್ಗ ಜಿಲ್ಲೆಯ ಈಸೂರು, ಹಾವೇರಿ ಬಳಿಯ ಮೋಟೆಬೆನ್ನೂರಿನ ಮೈಲಾರಮಹದೇವಪ್ಪ ಸ್ಮಾರಕ, ಬೆಳಗಾವಿ ಜಿಲ್ಲೆಯ ಗಂಗಾಧರ ದೇಶಪಾಂಡೆಯವರ ಹುದ್ಲಿ, ಹರ್ಡೇಕರ್ ಮಂಜಪ್ಪನವರ ಕರ್ಮಭೂಮಿ ಆಲಮಟ್ಟಿ, ಉಪ್ಪಿನ ಸತ್ಯಾಗ್ರಹದ ಅಂಕೋಲ ಇತ್ಯಾದಿ ಸ್ವಾತಂತ್ರ್ಯ ಸಂಗ್ರಾಮದ ನೆಲೆಗಳನ್ನು ಹೆಚ್ಚಿನ ಮೂಲಭೂತ ಸೌಲಭ್ಯಗಳೊಂದಿಗೆ ಅಭಿವೃದ್ಧಿ ಪಡಿಸಲು ೧೦ ಕೋಟಿ ರೂ.ಗಳನ್ನು ಒದಗಿಸಲಾಗಿದೆ.

ಗೌರವಧನ  ಹೆಚ್ಚಳ

* ಸ್ವಾತಂತ್ರ್ಯ ಹೋರಾಟದಲ್ಲಿ ತ್ಯಾಗ ಮಾಡಿದ ಹಿರಿಯರಿಗೆ ಪ್ರಸ್ತುತ ರಾಜ್ಯ  ಸರ್ಕಾರ  ೩,೦೦೦/- ರೂ. ಗಳ ಗೌರವಧನ ನೀಡುತ್ತಿದೆ.  ಅದನ್ನು ೪,೦೦೦/- ರೂ.ಗಳಿಗೆ ಈ ಆಗಸ್ಟ್‌ನಿಂದಲೇ ಹೆಚ್ಚಿಸಲು ನಮ್ಮ ಸರ್ಕಾರ ನಿರ್ಧರಿಸಿದೆ.
* ಅದೇ ರೀತಿ ಗೋವಾ ವಿಮೋಚನೆಗೆ ಹೋರಾಡಿದವರಿಗೆ ಗೌರವಧನ ನೀಡುವ ಪ್ರಕಟಣೆಯನ್ನು ನಾನು ಈ ಹಿಂದೆಯೇ ಮಾಡಿದ್ದೆ.  ಆದರೆ ಕಾರಣಾಂತರಗಳಿಂದ ಜಾರಿಗೆ ಬಂದಿರಲಿಲ್ಲ.  ಅವರಿಗೂ ಕೂಡ ಈ ವರ್ಷದ ಆಗಸ್ಟ್‌ನಿಂದಲೇ ೨,೦೦೦/- ರೂ.ಗಳ ಗೌರವಧನ ನೀಡಲು ನಿರ್ಧರಿಸಲಾಗಿದೆ.

ಭಾವೈಕ್ಯತಾ ಕೇಂದ್ರಗಳ ಅಭಿವೃದ್ಧಿ

* ರಾಜ್ಯದಲ್ಲಿ ವಿವಿಧ ಧರ್ಮಗಳ ಅನುಯಾಯಿಗಳು ಮತ್ತು ಸಮುದಾಯಗಳ ನಡುವೆ ಸೌಹಾರ್ದ ಸಂಬಂಧಗಳನ್ನು ಹೆಚ್ಚಿಸಲು ಭಾವೈಕ್ಯತೆಯನ್ನು ಬಿಂಬಿಸುವ ವಿವಿಧ ಮತಧರ್ಮಗಳಿಗೆ ಸೇರಿದ ಕ್ಷೇತ್ರಗಳ ಅಭಿವೃದ್ಧಿಗೆ ೧೦ ಕೋಟಿ ರೂ.ಗಳನ್ನು ಒದಗಿಸಲಾಗಿದೆ.
* ಗದಗ ಜಿಲ್ಲೆಯ ಶಿರಹಟ್ಟಿ ಫಕೀರ ಸ್ವಾಮಿ ಮಠ, ಬಿಜಾಪುರದ ಖಾಜಾ ಅಮೀನುದ್ದೀನ್ ದರ್ಗಾ, ಗುಲ್ಬರ್ಗಾ ಜಿಲ್ಲೆ ಸುರಪುರ ತಾಲ್ಲೂಕಿನ ಕೊಡೆಕಲ್ ಬಸವಣ್ಣ ಮತ್ತು ತಿಂಥಿಣಿ ಮೌನೇಶ್ವರ ಕ್ಷತ್ರಗಳು, ಬೆಳಗಾವಿ ಜಿಲ್ಲೆ ಗೋಕಾಕ್ ತಾಲ್ಲೂಕಿನ ಸಾವಳಗಿ ಶಿವಲಿಂಗೇಶ್ವರ ಮಠ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿಯ ಮುರುಗಮಲ್ಲಾ ದರ್ಗಾ ಮೊದಲಾದ ಹಿಂದು-ಮುಸ್ಲಿಂ ಮತ್ತು ಹಿಂದು-ಕ್ರೈಸ್ತ ಭಾವೈಕ್ಯತಾ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಲಾಗುವುದು.

ಸೌಹಾರ್ದ ಪರ್ವ

* ಚೆನ್ನೈನಲ್ಲಿ ಕನ್ನಡ ಸಂತಕವಿ ಸರ್ವಜ್ಞ ಮತ್ತು ಬೆಂಗಳೂರಿನಲ್ಲಿ ತಮಿಳು ತತ್ವ ಕವಿ ತಿರುವಳ್ಳುವರ್ ಅವರ ಪ್ರತಿಮೆಗಳ ಅನಾವರಣ ೧೮ ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು.  ವಿಶ್ವ ಮಾನವ ತತ್ವ ಹಾಗೂ ಸಮಾನತೆಯ ಶ್ರೇಷ್ಠ ಸಂದೇಶ ನೀಡಿದ ಈ ಇಬ್ಬರೂ ದಾರ್ಶನಿಕರ ಪ್ರತಿಮೆಗಳನ್ನು ಅನಾವರಣಗೊಳಿಸುವ ಮೂಲಕ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವೆ ಸ್ನೇಹಸೇತು ನಿರ್ಮಿಸಿ ಹೊಸ ಸೌಹಾರ್ದಪರ್ವ ಪ್ರಾರಂಭಿಸಲಾಗಿದೆ.
* ಆಗಸ್ಟ್ ೯ರಂದು ಬೆಂಗಳೂರಿನಲ್ಲಿ ನಡೆದ ತಿರುವಳ್ಳುವರ್ ಪ್ರತಿಮೆಯ ಅನಾವರಣದಲ್ಲಿ ತಮಿಳುನಾಡು ಮುಖ್ಯಮಂತ್ರಿ ಡಾ.ಕರುಣಾನಿಧಿಯವರು ಮತ್ತು ಆಗಸ್ಟ್ ೧೩ರಂದು ಚೆನ್ನೈನಲ್ಲಿ ನಡೆದ ಸರ್ವಜ್ಞ ಪ್ರತಿಮೆಯ ಅನಾವರಣದಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಿ ನಾನು ಭಾಗವಹಿಸಿದ್ದೆನು.
* ಎರಡೂ ರಾಜ್ಯಗಳ ಜನತೆ, ಸಾಹಿತಿಗಳು, ಕಲಾವಿದರು, ಚಿಂತಕರು ಮತ್ತು ಸರ್ವಪಕ್ಷಗಳ ನಾಯಕರು ಎರಡೂ ಸರ್ಕಾರಗಳ ನಿರ್ಧಾರವನ್ನು ಹೃದಯತುಂಬಿ ಮೆಚ್ಚಿ ಬೆನ್ನುತಟ್ಟಿದ್ದಾರೆ.  ಪ್ರಜಾಪ್ರಭುತ್ವದಲ್ಲಿ ಯಾವುದೇ ನಾಯಕತ್ವ ಇಚ್ಚಾಶಕ್ತಿ ಮತ್ತು ಬದ್ಧತೆಯಿಂದ ನಿರ್ಧಾರ ಕೈಗೊಂಡರೆ ಜನಮನ್ನಣೆ ಖಚಿತ ಎಂಬುದಕ್ಕೆ ಈ ಪ್ರತಿಮೆಗಳ ಅನಾವರಣದ ಐತಿಹಾಸಿಕ ಘಟನೆಯೇ ಸಾಕ್ಷಿಯಾಗಿದೆ.

ಒಂದು  ವರ್ಷದ ಸಾಧನೆ

* ಸ್ವಾತಂತ್ರ್ಯದ ನಿಜವಾದ ಕನಸು ನನಸಾಗುವುದು ನಾಡಿನ ಸಮಗ್ರ ಅಭಿವೃದ್ಧಿಯಾದಾಗ ಮಾತ್ರ. ಈ ದಿಶೆಯಲ್ಲಿ ನಾವು ಕಾರ್ಯೋನ್ಮುಖರಾಗಿದ್ದೇವೆ.  ರಾಜ್ಯದ ಪರಿಶಿಷ್ಟರು, ಹಿಂದುಳಿದವರು, ಅಲ್ಪಸಂಖ್ಯಾತರು, ಮಹಿಳೆಯರು, ವೃದ್ಧರು ಮತ್ತು ರೈತರು ಸೇರಿ ಎಲ್ಲ ಸಮುದಾಯಗಳ ಪ್ರಗತಿಗೆ ಸರ್ಕಾರ ವಿವಿಧ ಆರ್ಥಿಕಾಭಿವೃದ್ಧಿ ಮತ್ತು ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ.
* ಅಧಿಕಾರ ಸ್ವೀಕರಿಸಿದ ಪ್ರಾರಂಭದಲ್ಲೇ ಹೇಳಿದಂತೆ ಪ್ರತಿ ೧೦೦ ದಿನಗಳಿಗೆ ಒಮ್ಮೆ ಪ್ರಗತಿ ಕುರಿತ ವರದಿಗಳನ್ನು ನಾಡಿನ ಜನತೆಗೆ ಸಲ್ಲಿಸಲಾಗುತ್ತಿದೆ. ಸರ್ಕಾರಕ್ಕೆ ಒಂದು ವರ್ಷ ತುಂಬಿದ ಸಂದರ್ಭದಲ್ಲಿ ವಿಕಾಸ ಸಂಕಲ್ಪ ಉತ್ಸವವನ್ನು ರಾಜ್ಯದ ಏಳು ಕಡೆ ನಡೆಸಿ ವಾರ್ಷಿಕ ಸಾಧನಾ ವರದಿಯನ್ನು ಸಲ್ಲಿಸಲಾಗಿದೆ.

ಆರ್ಥಿಕ  ಹಿನ್ನಡೆ ನಡುವೆಯೂ ಮುನ್ನಡೆ

* ಜಾಗತಿಕ ಆರ್ಥಿಕ ಹಿನ್ನಡೆಯಿಂದ ದೇಶದಲ್ಲಿ ಸಂಪನ್ಮೂಲಗಳ ಕೊರತೆ ಎದುರಾಗಿ ಅಭಿವೃದ್ಧಿಯ ವೇಗ ಕುಂಠಿತಗೊಂಡಿದೆ. ಇದರಿಂದ ದೊಡ್ಡ ಪ್ರಮಾಣದ ಉದ್ಯೋಗ ನಷ್ಟವಾಗಿದೆ. ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಉದ್ಯೋಗ ಸೃಜನೆಗೆ ನೆರವಾಗಬಲ್ಲ ಯೋಜನೆಗಳ ಮೇಲೆ ಬಂಡವಾಳ ಹೂಡಬೇಕಾಗಿದೆ. ಜೊತೆಗೆ ಸರ್ಕಾರಗಳು ಮೂಲಸೌಲಭ್ಯ ಅಭಿವೃದ್ಧಿಯಲ್ಲಿ ಹೆಚ್ಚಿನ ಬಂಡವಾಳ ಹೂಡುವುದರ ಮೂಲಕ ಔದ್ಯೋಗಿಕ ಮತ್ತು ಖಾಸಗಿ ಕ್ಷೇತ್ರಗಳಿಗೆ ಉತ್ತೇಜನ ನೀಡಬೇಕಾಗಿದೆ. ಆದ್ದರಿಂದಲೇ ಕೇಂದ್ರ ಸರ್ಕಾರ ಈ ವರ್ಷ ತನ್ನ ವಿತ್ತೀಯ ಕೊರತೆಯನ್ನು ಒಟ್ಟು ರಾಷ್ಟ್ರೀಯ ಉತ್ಪನ್ನದ (ಜಿ.ಡಿ.ಪಿ) ಶೇ.೬.೮ಕ್ಕೆ ಏರಿಸಿಕೊಂಡಿದೆ ಹಾಗೂ ರಾಜ್ಯಗಳ ವಿತ್ತೀಯ ಕೊರತೆಯ ಮಿತಿಯನ್ನು ಈ ಆರ್ಥಿಕ ವರ್ಷ ಅಂದರೆ ೨೦೦೯-೧೦ನೇ ಸಾಲಿಗೆ ಶೇ.೪ಕ್ಕೆ ಹೆಚ್ಚಿಸಿದೆ. ನಮ್ಮ ಸರ್ಕಾರ ವಿತ್ತೀಯ ಕೊರತೆಯನ್ನು ಕೇಂದ್ರ ಸರ್ಕಾರ ನಿಗದಿ ಮಾಡಿರುವ ಮಿತಿಯೊಳಗೆ ಇರುವಂತೆ ನೋಡಿಕೊಂಡಿದೆ. ಪ್ರತಿಕೂಲ ಪರಿಸ್ಥಿತಿಯಲ್ಲೂ ಆರ್ಥಿಕ ಶಿಸ್ತನ್ನು ಕಾಪಾಡಿಕೊಂಡಿದೆ. ಜೊತೆಗೆ ಅಭಿವೃದ್ಧಿ ಪ್ರಕ್ರಿಯೆಯ ವೇಗ ಹೆಚ್ಚಿಸಲು ಕ್ರಮ ಕೈಗೊಂಡಿದೆ.
* ಭಾರತೀಯ ರಿಸರ್ವ್ ಬ್ಯಾಂಕ್‌ನ ಗವರ್ನರ್ ಮತ್ತು ೧೩ನೇ ಹಣಕಾಸು ಆಯೋಗದ ಅಧ್ಯಕ್ಷರು ರಾಜ್ಯದ ಆರ್ಥಿಕ ಶಿಸ್ತಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ದಾಖಲೆ ಯೋಜನಾ ಗಾತ್ರ

* ೨೦೦೯-೧೦ನೇ ಸಾಲಿಗೆ ದಾಖಲೆಯ ೨೯,೫೦೦ ಕೋಟಿ ರೂ.ಗಳ ಯೋಜನಾ ಗಾತ್ರ ನಿಗದಿಪಡಿಸಲಾಗಿದೆ. ೨೦೦೮-೦೯ನೇ ಸಾಲಿನಲ್ಲಿ ನಮ್ಮ ತೆರಿಗೆ ಸಂಪನ್ಮೂಲಗಳ ಸಂಗ್ರಹಣೆಯಲ್ಲಿ ಶೇ.೮.೬ರಷ್ಟು ಬೆಳವಣಿಗೆಯಾಗಿದೆ. ಕಳೆದ ವರ್ಷ ೨೧,೮೧೯ ಕೋಟಿ ರೂ. ಯೋಜನಾ ವೆಚ್ಚ ಮಾಡಲಾಗಿದೆ. ೨೦೦೭-೦೮ರ ಯೋಜನಾ ವೆಚ್ಚವಾದ ೧೭.೨೨೭ ಕೋಟಿ ರೂ.ಗಳಿಗೆ ಹೋಲಿಸಿದರೆ ಶೇ.೨೭ರಷ್ಟು ಹೆಚ್ಚಾಗಿದೆ. ಯೋಜನೇತರ ವೆಚ್ಚದಲ್ಲಿ ಹಿಡಿತ ಮಾಡಿ ಆರ್ಥಿಕ ಹಿನ್ನಡೆಯಿದ್ದರೂ ಯೋಜನಾ ವೆಚ್ಚದಲ್ಲಿ ಶೇ.೨೭ ರಷ್ಟು ಹೆಚ್ಚಳ ಮಾಡಿರುವುದು ಒಂದು ಮೆಚ್ಚಬೇಕಾದ ಸಾಧನೆ ಎಂಬುದು ಆರ್ಥಿಕ ತಜ್ಞರ ಅಭಿಪ್ರಾಯ.

ಪ್ರವಾಹ – ಬರ

* ಕರ್ನಾಟಕ ರಾಜ್ಯದ ಕೆಲ ಜಿಲ್ಲೆಗಳು ಪ್ರವಾಹ ಪೀಡಿತವಾಗಿದ್ದರೆ ಕೆಲ ಜಿಲ್ಲೆಗಳು ಬರಪೀಡಿತವಾಗಿವೆ. ಈ ನೈಸರ್ಗಿಕ ವೈಪರೀತ್ಯದ ನಿರ್ವಹಣೆ ರಾಜ್ಯ ಸರ್ಕಾರಕ್ಕೆ ಒಂದು ಸವಾಲು. ಮುಂಗಾರು ಮಳೆ ತಡವಾಯಿತು. ಆದರೆ ಜುಲೈ ತಿಂಗಳ ಮೊದಲೆರೆಡು ವಾರಗಳಲ್ಲಿ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಅತಿವೃಷ್ಠಿಯಾಯಿತು. ಇದರಿಂದ ಜಲಾಶಯಗಳು ತುಂಬಿ ವಿದ್ಯುತ್ ಸಮಸ್ಯೆಗೆ ತುಸು ಪರಿಹಾರ ದೊರೆತಿದೆ. ಇದು ಸಮಾಧಾನ ತರುವಂತಹುದು.
* ಆದರೆ ಏಳು ಜಿಲ್ಲೆಗಳಲ್ಲಿ ಪ್ರವಾಹದಿಂದ ೧೬೦ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸಾವಿರಾರು ಜಾನುವಾರುಗಳು ಅಸು ನೀಗಿವೆ. ೧೦ ಸಾವಿರಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿವೆ. ೫೧೭ ಕೋಟಿ ರೂ. ನಷ್ಟವಾಗಿದೆ. ಕೇಂದ್ರ ಸರ್ಕಾರದಿಂದ ೩೧೮ ಕೋಟಿ ರೂ.ಗಳ ಪರಿಹಾರವನ್ನು ಕೋರಿ ಮನವಿ ಸಲ್ಲಿಸಿದ್ದೇವೆ.
* ನಷ್ಟ ಅಂದಾಜು ಮಾಡಲು ಕೇಂದ್ರದ ತಂಡ ಕಳುಹಿಸುವ ಭರವಸೆ ರಾಜ್ಯಕ್ಕೆ ದೊರೆತಿದೆ. ಆ ತಂಡದ ಭೇಟಿಯ ನಿರೀಕ್ಷೆಯಲ್ಲಿ ನಾವಿದ್ದೇವೆ.
* ಪ್ರವಾಹದ ಜೊತೆಗೆ ೨೦ ಜಿಲ್ಲೆಗಳಲ್ಲಿ ಶೇ.೨೦ರಷ್ಟು ಮಳೆ ಕೊರತೆ ಉಂಟಾಗಿದೆ. ಇದರ ಪರಿಣಾಮವಾಗಿ ೮೬ ತಾಲ್ಲೂಕುಗಳು ಬರಪೀಡಿತವಾಗಿವೆ.
* ರಾಜ್ಯದಲ್ಲಿ ೯೯ ಗ್ರಾಮಗಳು ಕುಡಿಯುವ ನೀರಿನ ಕೊರತೆ ಎದುರಿಸುತ್ತಿದ್ದು ಇಲ್ಲಿ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ನೈಸರ್ಗಿಕ ವಿಕೋಪ ಪರಿಹಾರ ನಿಧಿಯಡಿ ಜಿಲ್ಲಾಧಿಕಾರಿಗಳಿಗೆ ಹಣ ಬಿಡುಗಡೆ ಮಾಡಿ ಪರಿಹಾರ ಕಾಮಗಾರಿ ಕೈಗೆತ್ತಿಕೊಳ್ಳಲು ಸೂಚನೆ ನೀಡಲಾಗಿದೆ. ಜಿಲ್ಲಾಧಿಕಾರಿಗಳ ಬಳಿ ಪ್ರಸ್ತುತ ೧೫೦ ಕೋಟಿ ರೂ. ಲಭ್ಯವಿದೆ.
* ಬರಪೀಡಿತ ೫೦ ತಾಲ್ಲೂಕುಗಳಲ್ಲಿ ಗೋ-ಶಾಲೆ ಪ್ರಾರಂಭಿಸಲು ತಲಾ ೧೦ ಲಕ್ಷ ರೂ. ನಂತೆ ೫ ಕೋಟಿ ರೂ. ಬಿಡುಗಡೆ ಮಾಡಿದೆ. ರಿಯಾಯ್ತಿ ದರದಲ್ಲಿ ಜಾನುವಾರುಗಳಿಗೆ ಮೇವು ಸರಬರಾಜು ಮಾಡಲು ವ್ಯವಸ್ಥೆ ಮಾಡಲಾಗುತ್ತಿದೆ. ಕುಡಿಯುವ ನೀರಿನ ಯೋಜನೆಗಳಿಗಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖಾವತಿಯಿಂದ ೨೪೨ ಕೋಟಿ ರೂ. ಬಿಡುಗಡೆ ಮಾಡಿದ್ದು, ತುರ್ತು ಪರಿಹಾರಕ್ಕಾಗಿ ಹೆಚ್ಚುವರಿಯಾಗಿ ೧೬ ಕೋಟಿ ರೂ. ಒದಗಿಸಲಾಗಿದೆ.

ಕಾನೂನು  ಸುವ್ಯವಸ್ಥೆ

* ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸರ್ಕಾರ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ. ಸಣ್ಣಪುಟ್ಟ ಘಟನೆಗಳನ್ನು ಬಿಟ್ಟರೆ ಒಟ್ಟಾರೆ ರಾಜ್ಯದಲ್ಲಿ ಶಾಂತ ಪರಿಸ್ಥಿತಿ ಇದೆ. ಪರಿಶಿಷ್ಠರು, ಹಿಂದುಳಿದವರು, ಮಹಿಳೆಯರು, ಅಲ್ಪ ಸಂಖ್ಯಾತರು, ಮಕ್ಕಳು ಮತ್ತು ಹಿರಿಯ ನಾಗರೀಕರಲ್ಲಿ ಭದ್ರತೆಯ ಭಾವನೆ ಮೂಡಿಸಲು ಪೊಲೀಸ್ ಇಲಾಖೆ ಶ್ರಮಿಸುತ್ತಿದೆ.
* ನಕ್ಸಲ್ ಹಾಗೂ ಭಯೋತ್ಪಾದನಾ ಚಟುವಟಿಕೆಗಳನ್ನು ಸಾಕಷ್ಟು ನಿಗ್ರಹಿಸಲಾಗಿದ್ದು, ಪೊಲೀಸ್ ಪಡೆಗೆ ಹೆಚ್ಚಿನ ಸಾಧನ ಸೌಕರ್ಯಗಳನ್ನು ನೀಡಲಾಗಿದೆ.  ಇದಲ್ಲದೆ ಪೊಲೀಸರಿಗೆ ಇನ್ನೂ ಹೆಚ್ಚಿನ ತರಬೇತಿ ನೀಡಲು ಉದ್ದೇಶಿಸಲಾಗಿದೆ.

ಕೋಕಾ  ಕಾಯ್ದೆಗೆ ತಿದ್ದುಪಡಿ

* ರಾಜ್ಯದಲ್ಲಿ ಭಯೋತ್ಪಾದನಾ ಚಟುವಟಿಕೆಗಳನ್ನು ನಿಯಂತ್ರಿಸಲು ಅನುಕೂಲವಾಗುವಂತೆ ಕರ್ನಾಟಕ ವ್ಯವಸ್ಥಿತ ಅಪರಾಧ ನಿಯಂತ್ರಣ ಕಾಯ್ದೆಗೆ (ಕೋಕಾ) ತಿದ್ದುಪಡಿಯೊಂದಿಗೆ ಜಾರಿಗೆ ತರಲು ನಿರ್ಧರಿಸಲಾಗಿದೆ. ಹಾಗೆಯೇ ಆಡಿಯೋ ಮತ್ತು ವೀಡಿಯೋಗಳನ್ನು ನಕಲಿ ಮಾಡುವುದನ್ನು (ಪೈರಸಿ) ತಡೆಗಟ್ಟಲು ಇಂತಹ ಅಕ್ರಮಗಳಲ್ಲಿ ತೊಡಗುವವರ ವಿರುದ್ಧ ಗೂಂಡಾ ಕಾಯ್ದೆಯಡಿ ಕ್ರಮ ಜರುಗಿಸಲು ಸರ್ಕಾರ ನಿರ್ಣಯಿಸಿದೆ.

ಪೊಲೀಸ್ ಆಡಳಿತ ಸುಧಾರಣೆ

* ಪೊಲೀಸ್ ಆಡಳಿತದಲ್ಲಿ ಸುಧಾರಣೆ ತರಲು ಸರ್ಕಾರ ಮುಂದಾಗಿದೆ. ಸುಪ್ರೀಂ ಕೋರ್ಟ್ ನಿರ್ದೇಶನದ ಅನ್ವಯ ವರ್ಗಾವಣೆಯಲ್ಲಿ ಹಸ್ತಕ್ಷೇಪ ತಡೆಯಲು ಪೊಲೀಸ್ ಸಿಬ್ಬಂದಿ ಮಂಡಳಿ (ಪೊಲೀಸ್ ಎಸ್ಟಾಬ್ಲಿಷ್‌ಮೆಂಟ್ ಬೋರ್ಡ್) ರಚಿಸಲು ನಿರ್ಧರಿಸಲಾಗಿದೆ.

ರಾಜ್ಯ  ಭದ್ರತಾ ಸಮಿತಿ

* ರಾಜ್ಯದ ಭದ್ರತೆಗೆ ಸಂಬಂಧಿಸಿದಂತೆ ಸಮಗ್ರ ಕಾರ್ಯ ಯೋಜನೆ ಹಾಗೂ ಅನುಷ್ಠಾನದ ಉಸ್ತುವಾರಿ ವಹಿಸಲು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ರಾಜ್ಯ ಭದ್ರತಾ ಸಮಿತಿ ರಚಿಸಲಾಗಿದೆ.

ಪ್ರತಿ ವರ್ಷ ಆಡಳಿತ ಸೇವಾ  ಪರೀಕ್ಷೆ

* ಆಡಳಿತಕ್ಕೆ ಹೊಸ ರಕ್ತ ಸೇರಿದರೆ ಮಾತ್ರ ಆಡಳಿತ ಯಂತ್ರ ಚುರುಕಾಗುತ್ತದೆ. ಆದ್ದರಿಂದ ರಾಜ್ಯ ಆಡಳಿತ ಸೇವೆಯ ಅಧಿಕಾರಿಗಳ ನೇಮಕಾತಿ ಸಂಬಂಧ ನಿಯಮಗಳಿಗೆ ತಿದ್ದುಪಡಿ ತಂದು ಪ್ರತಿ ವರ್ಷ ಸ್ಪರ್ಧಾತ್ಮಕ ಪರೀಕ್ಷ ನಡೆಸಲು ಸರ್ಕಾರ ನಿರ್ಧರಿಸಿದೆ.

ನೂತನ  ನೀತಿಗಳು

* ರಾಜ್ಯದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ನೂತನ ಪ್ರವಾಸದ್ಯಮ ನೀತಿ, ಕೈಗಾರಿಕಾ ಬೆಳವಣಿಗೆಗೆ ಇಂಬುಗೊಡಲು ನೂತನ ಕೈಗಾರಿಕಾ ನೀತಿ, ಗಣಿಗಾರಿಕೆ ನಿಯಂತ್ರಿಸಲು ಮತ್ತು ಮೌಲ್ಯವರ್ಧನೆಗೆ ಅವಕಾಶ ಕಲ್ಪಿಸಲು ಪೂರಕವಾದ ನೂತನ ಗಣಿ ನೀತಿ ಜಾರಿಗೆ ತಂದಿದ್ದು ನೂತನ ಮಾಹಿತಿ ತಂತ್ರಜ್ಞಾನ ನೀತಿ ಸಿದ್ಧಪಡಿಸಲಾಗಿದೆ.

ಕಾರ್ಯಪಡೆಗಳ  ಮಾರ್ಗದರ್ಶನ

* ರಾಜ್ಯದ ಅಭಿವೃದ್ಧಿ ಯೋಜನೆಗಳ ಅನುಷ್ಠಾನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರಖ್ಯಾತ ವಿಜ್ಞಾನಿಗಳು, ತಂತ್ರಜ್ಞರು ಮತ್ತು ತಜ್ಞರ ಮಾರ್ಗದರ್ಶನವನ್ನು ಪಡೆಯಲಾಗುತ್ತಿದೆ. ಕರ್ನಾಟಕ ಅಭಿವೃದ್ಧಿ ಮುನ್ನೋಟ-೨೦೨೦ ಸಿದ್ಧವಾಗಿದೆ. ಪ್ರೊಫೆಸರ್ ಕಸ್ತೂರಿ ರಂಗನ್ ನೇತೃತ್ವದಲ್ಲಿ ಜ್ಞಾನ ಆಯೋಗ, ಡಾ: ಸಿ.ಎನ್.ಆರ್. ರಾವ್ ಅವರ ಅಧ್ಯಕ್ಷತೆಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ದಾರ್ಶನಿಕ ಸಮೂಹ, ಇನ್ಫೋಸಿಸ್ ಮುಖ್ಯಸ್ಥ ಕ್ರಿಸ್ ಗೋಪಾಲಕೃಷ್ಣ ಅಧ್ಯಕ್ಷತೆಯಲ್ಲಿ ಕೈಗಾರಿಕಾ ವಿಷನ್ ಗ್ರೂಪ್ ಮೊದಲಾದ ಕಾರ್ಯಪಡೆಗಳು ಕಾರ್ಯ ನಿರ್ವಹಿಸುತ್ತಿವೆ. ಸಾವಯವ ಕೃಷಿ ಮಿಷನ್ ಡಾ: ಆನಂದ್ ಅವರ ನೇತೃತ್ವದಲ್ಲಿ ಮತ್ತು ಜೈವಿಕ ಇಂಧನ ಕಾರ್ಯಪಡೆ ಡಾ: ರಾಮಕೃಷ್ಣ ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತಿವೆ. ಮುಖ್ಯಮಂತ್ರಿ ನೇತೃತ್ವದಲ್ಲಿ ಕೌಶಲ್ಯ ಆಯೋಗ ಹಾಗೂ ಅಬೈಡ್ ಸಂಸ್ಥೆಗಳು ಕಾರ್ಯೋನ್ಮುಖವಾಗಿವೆ. ಅಭಿವೃದ್ಧಿ ಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡಲು ಖ್ಯಾತ ತಂತ್ರಜ್ಞ ಡಾ: ವಿಶ್ವನಾಥ್ ಅವರ ನೇತೃತ್ವದಲ್ಲಿ ಕಾರ್ಯಪಡೆ ರಚಿಸಲಾಗಿದೆ.

ಗ್ರಾಮೀಣಾಭಿವೃದ್ಧಿ

* ಗ್ರಾಮ ಪಂಚಾಯಿತಿಗಳಿಗೆ ನೀಡುತ್ತಿದ್ದ ಶಾಸನಬದ್ಧ ಅನುದಾನವನ್ನು ೫ ಲಕ್ಷ ರೂ.ಗಳಿಂದ ೬ ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ.  ರಾಜ್ಯದ ಎಲ್ಲಾ ೫,೬೨೮ ಗ್ರಾಮ ಪಂಚಾಯಿತಿಗಳಿಗೆ ಅಭಿವೃದ್ಧಿ ಅಧಿಕಾರಿಗಳ ಹುದ್ದೆ ಹಾಗೂ ೨,೫೦೦ ಲೆಕ್ಕ ಸಹಾಯಕರ ಹುದ್ದೆಗಳನ್ನು ಸೃಜಿಸಿದ್ದು, ನೇಮಕಾತಿ ಪ್ರಕ್ರಿಯೆ ಜಾರಿಯಲ್ಲಿದೆ.
* ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು ಕೇಂದ್ರದಿಂದ ಪಿ.ಎಂ.ಜಿ.ಎಸ್.ವೈ. ಅಡಿ ಸುಮಾರು ರೂ.೮೧೦ ಕೋಟಿ ಹೆಚ್ಚುವರಿ ಅನುದಾನ ಪಡೆಯಲು ರಾಜ್ಯ ಯಶಸ್ವಿಯಾಗಿದೆ.
* ಸುವರ್ಣ ಗ್ರಾಮೋದಯ ಯೋಜನೆಯಡಿ ಈ ಸಾಲಿನಲ್ಲಿ ೩೦೦ ಕೋಟಿ ರೂ.ಗಳನ್ನು ಒದಗಿಸಲಾಗಿದ್ದು, ೨ನೇ ಹಂತದಲ್ಲಿ ೧,೨೨೨ ಗ್ರಾಮಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ.

ಉದ್ಯೋಗ  ಮೇಳ

* ಕಳೆದೊಂದು ವರ್ಷದಲ್ಲಿ ರಾಜ್ಯದ ಪ್ರಮುಖ ಏಳು ನಗರಗಳಲ್ಲಿ ಬೃಹತ್ ಉದ್ಯೋಗ ಹಾಗೂ ಕೌಶಲ್ಯ ಅಭಿವೃದ್ಧಿ ಮೇಳಗಳನ್ನು ನಡೆಸಿ ಸುಮಾರು ೫೫,೮೦೦ ಅಭ್ಯರ್ಥಿಗಳಿಗೆ ಉದ್ಯೋಗ ಕಲ್ಪಿಸಲಾಗಿದೆ ಹಾಗೂ ೬೦ ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ವಿವಿಧ ತರಬೇತಿಗಳನ್ನು ನೀಡಲಾಗಿದೆ.

ಶಿಕ್ಷಣ

* ನಮ್ಮ ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಅತಿ ಹೆಚ್ಚಿನ ಪ್ರಾಶಸ್ತ್ಯ ನೀಡಿದೆ.  ಕಳೆದ ಒಂದು ವರ್ಷದಲ್ಲಿ ಹುಬ್ಬಳ್ಳಿಯಲ್ಲಿ ಕಾನೂನು ವಿಶ್ವವಿದ್ಯಾಲಯ, ಬಾಗಲಕೋಟೆಯಲ್ಲಿ ತೋಟಗಾರಿಕೆ ವಿಶ್ವವಿದ್ಯಾಲಯ, ರಾಯಚೂರಿನಲ್ಲಿ ಕೃಷಿ ವಿಶ್ವವಿದ್ಯಾಲಯ ಪ್ರಾರಂಭಿಸಲಾಗಿದೆ.
* ಜೊತೆಗೆ ಬೆಂಗಳೂರಿನಲ್ಲಿ ಸಂಸ್ಕೃತ ಮತ್ತು ವೇದ ವಿಶ್ವವಿದ್ಯಾನಿಲಯ, ಮೈಸೂರಿನಲ್ಲಿ ಡಾ. ಗಂಗೂಬಾಯಿ ಹಾನಗಲ್ ಅವರ ಹೆಸರಿನಲ್ಲಿ ಸಂಗೀತ ವಿಶ್ವವಿದ್ಯಾನಿಲಯ ದಾವಣಗೆರೆಯಲ್ಲಿ ನೂತನ ವಿಶ್ವವಿದ್ಯಾನಿಲಯ ಸ್ಥಾಪನೆಗೆ ಕ್ರಮ ಪ್ರಾರಂಭಿಸಲಾಗಿದೆ.
* ಹಿಂದುಳಿದ ಕೊಪ್ಪಳ ಜಿಲ್ಲೆಗೆ ತಾಂತ್ರಿಕ ಶಿಕ್ಷಣದ ಸೌಲಭ್ಯವನ್ನು ಒದಗಿಸಲು ಗಂಗಾವತಿಯಲ್ಲಿ ನೂತನ ಇಂಜನಿಯರಿಂಗ್ ಕಾಲೇಜು ಸ್ಥಾಪಿಸಲು ೧೦ ಕೋಟಿ ರೂ.ಗಳ ಅನುದಾನ ಹಾಗೂ ಕೋಲಾರದಲ್ಲಿ ತೋಟಗಾರಿಕಾ ಕಾಲೇಜು ಸ್ಥಾಪಿಸಲು ೫ ಕೋಟಿ ರೂ.ಗಳನ್ನು ಒದಗಿಸಲಾಗಿದೆ.
* ಶೇ.೬ ಬಡ್ಡಿದರದಲ್ಲಿ ತಾಂತ್ರಿಕ ಮತ್ತು ಉನ್ನತ ಶಿಕ್ಷಣ ಮುಂದುವರಿಸಲು ಸುಮಾರು ೧೦,೦೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ೧೫ ಕೋಟಿ ರೂ.ಗಳಷ್ಟು ಸಾಲಸೌಲಭ್ಯ ಒದಗಿಸಲಾಗಿದೆ.
* ಸಾಮಾಜಿಕ ನ್ಯಾಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿರುವ ನಮ್ಮ ಸರ್ಕಾರ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ.೭೫ಕ್ಕಿಂತ ಹೆಚ್ಚು ಅಂಕಗಳಿಸಿದ ಪರಿಶಿಷ್ಟ ವಿದ್ಯಾರ್ಥಿನಿಯರಿಗೆ ೧೦,೦೦೦-/ ರೂ.ಗಳ ಹಾಗೂ ಶೇ. ೬೦ಕ್ಕಿಂತ ಅಧಿಕ ಅಂಕಗಳಿಸಿದವರಿಗೆ ೫,೦೦೦/- ರೂ.ಗಳ ಪ್ರೋತ್ಸಾಹ ಧನ ನೀಡುವ ಬಗ್ಗೆ ಪ್ರಕಟಿಸಿತ್ತು.  ಈ ವಿನೂತನ ಯೋಜನೆಯನ್ನು ಈಗ ವಿದ್ಯಾರ್ಥಿಗಳಿಗೂ ವಿಸ್ತರಿಸಿದ್ದು, ಮೊದಲ ವರ್ಷವೇ ಸುಮಾರು ೩೬,೦೦೦ ವಿದ್ಯಾರ್ಥಿ/ವಿದ್ಯಾರ್ಥಿನಿಯರು ೨೩ ಕೋಟಿ ರೂ.ಗಳ ಸಹಾಯಧನ ಪಡೆಯಲಿದ್ದಾರೆ.
* ಈ ವರ್ಷ ಶೈಕ್ಷಣಿಕ ವರ್ಷದ ಪ್ರಾರಂಭದಲ್ಲೇ ಎಲ್ಲ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಮತ್ತು ಸಮವಸ್ತ್ರ ವಿತರಣೆ ಮಾಡಲಾಗಿದೆ.

ವಿದ್ಯುತ್

* ದೇಶದಲ್ಲೆ ಪ್ರಪ್ರಥಮವಾಗಿ ವಿದ್ಯುತ್ ಉತ್ಪಾದಿಸಿದ ರಾಜ್ಯ ಕರ್ನಾಟಕವಾಗಿದ್ದರೂ ದೂರದೃಷ್ಟಿಯ ಕೊರತೆಯಿಂದಾಗಿ ನಾವಿಂದು ವಿದ್ಯುತ್ ಅಭಾವ ಎದುರಿಸುತ್ತಿದ್ದೇವೆ.
* ಅಭಾವವಿದ್ದರೂ ಅಗತ್ಯ ಬೇಡಿಕೆಯನ್ನು ಪೂರೈಸಲು ಕಳೆದ ವರ್ಷ ನಮ್ಮ ಸರ್ಕಾರವು ಹೆಚ್ಚುವರಿ ಹಣ ವೆಚ್ಚ ಮಾಡಿ ಸಮರ್ಪಕ ವಿದ್ಯುತ್ ಸರಬರಾಜು ಮಾಡಲಾಗಿದೆ.
* ಸುಮಾರು ೧೬ ಲಕ್ಷ ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡಲು ೨,೧೦೦ ಕೋಟಿ ರೂ.ಗಳ ಸಹಾಯ ಧನವನ್ನು ಒದಗಿಸಲಾಗಿದೆ.
* ೨೦೦೮-೦೯ನೆಯ ಸಾಲಿನಲ್ಲಿ ರಾಜ್ಯದ ವಿದ್ಯುತ್ ಜಾಲಕ್ಕೆ ಒಟ್ಟು ೧,೦೦೦ ಮೆ.ವ್ಯಾ. ಸಾಮರ್ಥ್ಯವನ್ನು ಸೇರ್ಪಡೆಗೊಳಿಸಲಾಗಿದೆ. ಈ ವರ್ಷ (೨೦೦೯-೧೦) ಕನಿಷ್ಟ ೧,೩೦೦ ಮೆ.ವ್ಯಾ. ವಿದ್ಯುತ್‌ನ್ನು ಸ್ಥಾಪಿತ ಸಾಮರ್ಥ್ಯಕ್ಕೆ ಸೇರಿಸಲಾಗುವುದು. ಇನ್ನು ನಾಲ್ಕು ವರ್ಷಗಳಲ್ಲಿ ಕನಿಷ್ಠ ೫ ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲಾಗುವುದು.
* ಬಿಜಾಪುರ ಜಿಲ್ಲೆ ಕೂಡ್ಗಿಯಲ್ಲಿ ಎನ್‌ಟಿಪಿಸಿ ಮುಖಾಂತರ ೪ ಸಾವಿರ ಮೆ.ವ್ಯಾ. ವಿದ್ಯುತ್ ಸ್ಥಾವರ ಸ್ಥಾಪನೆಗೆ ಭೂಸ್ವಾಧೀನ ಪ್ರಕ್ರಿಯೆ ಪ್ರಾರಂಭವಾಗಿದೆ.
* ಮಹಾರಾಷ್ಟ್ರದ ಧಬೋಲ್‌ನಿಂದ ಬೆಂಗಳೂರಿಗೆ ಗ್ಯಾಸ್ ಪೈಪ್‌ಲೈನ್ ಹಾಕುವ ಪ್ರಕ್ರಿಯೆಗೆ ಕೇಂದ್ರ ಸರ್ಕಾರದ ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಸಂಸ್ಥೆ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರಿಂದ ಬೆಂಗಳೂರು ಬಳಿ ಅಲ್ಲದೆ ಮಾರ್ಗ ಮಧ್ಯದಲ್ಲಿ ವಿವಿಧೆಡೆ ಗ್ಯಾಸ್ ಆಧಾರಿತ ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಲು ಸಾಧ್ಯವಾಗುವುದು. ನಮ್ಮ ರಾಜ್ಯಕ್ಕೆ ಅಗತ್ಯವಿರುವ ಅನಿಲವನ್ನು ಒದಗಿಸಲು ಕೇಂದ್ರ ಸರ್ಕಾರಕ್ಕೆ ನಮ್ಮ ಬೇಡಿಕೆಯನ್ನು ಸಲ್ಲಿಸಲಾಗಿದೆ.
* ರಾಜ್ಯದ ವಿದ್ಯುತ್ ಉತ್ಪಾದನಾ ಕಾರ್ಯವ್ಯಾಪ್ತಿಯು ಇದುವರೆಗೆ ಕೇವಲ ರಾಜ್ಯದಲ್ಲಿ ಮಾತ್ರ ಸೀಮಿತವಾಗಿದ್ದು, ಇದೇ ಪ್ರಥಮ ಬಾರಿಗೆ ಛತ್ತೀಸ್‌ಘಡದಲ್ಲಿ ೧,೬೦೦ ಮೆ.ವಾ. ಸಾಮರ್ಥ್ಯದ ಪಿಟ್‌ಹೆಡ್ ಶಾಖೋತ್ಪನ್ನ ವಿದ್ಯುತ್ ಸ್ಥಾವರ ಸ್ಥಾಪನೆ ಕೆಲಸ ಚಾಲನೆಯಲ್ಲಿದೆ.
* ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಕೆ.ಪಿ.ಸಿ.ಎಲ್. ಮುಖಾಂತರ ಉಷ್ಣ ಸ್ಥಾವರ ಮತ್ತು ಹಾಸನ ಜಿಲ್ಲೆಯಲ್ಲಿ ಜಲವಿದ್ಯುತ್ ಉತ್ಪಾದನೆಗೆ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ.
* ಪ್ರಸಕ್ತ ಸಾಲಿನಲ್ಲಿ ಸುಮಾರು ೧.೩ ಲಕ್ಷ ಮನೆಗಳಿಗೆ ನೂತನವಾಗಿ ವಿದ್ಯುದ್ದೀಕರಣಗೊಳಿಸಲು ಸಹ ಉದ್ದೇಶಿಸಲಾಗಿದೆ.

ಕೃಷಿ

* ನಮ್ಮ ಸರ್ಕಾರದ ಯೋಜನೆಯಾದ ಶೇ.೩ರ ಬಡ್ಡಿದರದ ಕೃಷಿ ಸಾಲ ಯೋಜನೆಯಡಿ ಕಳೆದೊಂದು ವರ್ಷದಲ್ಲಿ ೧೩.೨೦ ಲಕ್ಷ ರೈತರಿಗೆ ೩,೫೭೭ ಕೋಟಿ ರೂ.ಗಳ ಸಾಲ ವಿತರಿಸಲಾಗಿದೆ.
* ೨೦೦೮-೦೯ನೆಯ ಸಾಲಿನಲ್ಲಿ ರಾಜ್ಯದ ೫೩೩ ರೈತರು ಚೀನಾ ದೇಶದ ಅಧ್ಯಯನ ಪ್ರವಾಸವನ್ನು ಕೈಗೊಂಡಿದ್ದಾರೆ.
* ೨೦೦೯-೧೦ನೆಯ ಸಾಲಿನಲ್ಲಿ ರೈತರ ಅಧ್ಯಯನ ಪ್ರವಾಸಕ್ಕಾಗಿ ೫ ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದು, ಈಗಾಗಲೇ ಮೊದಲ ತಂಡದಲ್ಲಿ ೧೦೫ ರೈತರು ಚೀನಾ ದೇಶದ ಪ್ರವಾಸ ಮುಗಿಸಿದ್ದಾರೆ.
* ಹಿಂದಿನ ವರ್ಷ ಆಗಸ್ಟ್‌ನಲ್ಲಿ ರಚಿಸಲ್ಪಟ್ಟ ಸಾವಯವ ಕೃಷಿ ಮಿಷನ್ ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದು, ಹಸಿರೆಲೆ ಗೊಬ್ಬರ ಬೀಜ ವಿತರಣೆ, ಎರೆಹುಳು ಘಟಕ, ದ್ರವರೂಪದ ಗೊಬ್ಬರ ತಯಾರಿಕೆ ಇತ್ಯಾದಿ ವಿನೂತನ ಯೋಜನೆಗಳಿಗಾಗಿ ೪೮.೪೫ ಕೋಟಿ ರೂ.ಗಳನ್ನು ವೆಚ್ಚಮಾಡಲಾಗಿದೆ.
* ಪ್ರಸಕ್ತ ಸಾಲಿನಲ್ಲಿ ಈ ಯೋಜನೆಯಡಿ ೧೦೦ ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ.

ಆರೋಗ್ಯ

* ದಿನದ ೨೪ ಗಂಟೆಯು ತುರ್ತು ವೈದ್ಯಕೀಯ ಸಂದರ್ಭದಲ್ಲಿ ಉಚಿತ ತುರ್ತು ಸಾಗಾಣಿಕೆ ಹಾಗೂ ಸೇವೆ ಒದಗಿಸುವ ಆರೋಗ್ಯ ಕವಚ ಯೋಜನೆಯಡಿ ೨೩೮ ಆಂಬುಲೆನ್ಸ್‌ಗಳು ಹಾಲಿ ಕಾರ್ಯ ನಿರ್ವಹಿಸುತ್ತಿದ್ದು, ಕಳೆದೊಂದು ವರ್ಷದಲ್ಲಿ ೪೦,೦೦೦ ಕ್ಕೂ ಹೆಚ್ಚು ಅಮೂಲ್ಯ ಜೀವಗಳನ್ನು ಕಾಪಾಡಲಾಗಿದೆ.
* ಬಡತನ ರೇಖೆಗಿಂತ ಕೆಳಗಿರುವ ಸುಮಾರು ೧೬ಲಕ್ಷ ಜನರಿಗೆ ಮಾರಣಾಂತಿಕ ಖಾಯಿಲೆಗಳ ಚಿಕಿತ್ಸೆಗೆ ಒಂದೂವರೆ ಲಕ್ಷ ರೂ.ಗಳವರೆಗೂ ಉಚಿತ ವೈದ್ಯಕೀಯ ಚಿಕಿತ್ಸೆ ನೀಡುವ ವಿನೂತನ ಯೋಜನೆಯಾದ ಸುವರ್ಣ ಆರೋಗ್ಯ ಸುರಕ್ಷಾ ಯೋಜನೆಯನ್ನು ಪ್ರಥಮ ಹಂತದಲ್ಲಿ ಬಳ್ಳಾರಿ, ಕೊಪ್ಪಳ, ರಾಯಚೂರು ಮತ್ತು ಬೀದರ್ ಜಿಲ್ಲೆಗಳಲ್ಲಿ ೩೧-೦೭-೨೦೦೯ರಿಂದ ಪ್ರಾರಂಭಿಸಲಾಗಿದೆ. ಇಲಾಖೆಯಲ್ಲಿ ೬೮೫ ವೈದ್ಯರನ್ನು ಹೆಚ್ಚುವರಿಯಾಗಿ ನೇಮಿಸಿಕೊಳ್ಳಲಾಗಿದೆ.

ಹಂದಿಜ್ವರ ನಿಯಂತ್ರಣಕ್ಕೆ ಕ್ರಮ

* ಇತ್ತೀಚೆಗೆ ವಿಶ್ವದಲ್ಲಿ ಮತ್ತು ನಮ್ಮ ದೇಶದಲ್ಲಿ ಹೆಚ್೧ಎನ್೧ (ಹಂದಿಜ್ವರ), ಡೆಂಗ್ಯೂ, ಚಿಕೂನ್ ಗುನ್ಯಾ ಇತ್ಯಾದಿ ರೋಗಗಳ ಹಾವಳಿ ಹೆಚ್ಚಿದ್ದು, ಇವುಗಳ ನಿಯಂತ್ರಣಕ್ಕೆ ನಮ್ಮ ರಾಜ್ಯದಲ್ಲಿ ಕ್ರಮ ಕೈಗೊಳ್ಳಲಾಗಿದೆ. ಹೆಚ್೧ಎನ್೧ (ಹಂದಿಜ್ವರ) ಹರಡದಂತೆ ನಿವಾರಣಾ ಕ್ರಮ ಕೈಗೊಳ್ಳಲಾಗುತ್ತಿದೆ.
* ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಮಂಗಳೂರು ವಿಮಾನ ನಿಲ್ದಾಣಗಳಲ್ಲಿ ಈವರೆಗೆ ಸುಮಾರು ೩.೩೫ ಲಕ್ಷ ವಿಮಾನ ಯಾತ್ರಿಕರ ತಪಾಸಣೆ ನಡೆಸಲಾಗಿದೆ.
* ತುರ್ತು ಚಿಕಿತ್ಸೆಗೆ ಬೆಂಗಳೂರಿನ ೧೩ ಆಸ್ಪತ್ರೆಗಳೂ ಸೇರಿ ರಾಜ್ಯದೆಲ್ಲೆಡೆ ಅಗತ್ಯ ಔಷಧಿ ಸರಬರಾಜು ಮತ್ತು ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ.
* ಒಂದು ಲಕ್ಷ ಟಾಮಿಫ್ಲೂ ಮಾತ್ರೆಗಳು ಮತ್ತು ರಕ್ಷಣಾ ಉಪಕರಣಗಳನ್ನು ವಿವಿಧ ಆಸ್ಪತ್ರೆಗಳಿಗೆ ಹಂಚಲಾಗಿದೆ.
* ನಾಡಿನ ಜನರು ಈ ಹಂದಿ ಜ್ವರದ ಬಗ್ಗೆ ಅನಗತ್ಯವಾಗಿ ಭಯಬೀಳಬೇಕಾಗಿಲ್ಲವೆಂದು ತಿಳಿಸಬಯಸುತ್ತೇನೆ.
* ಜನರು ಯಾವ ರೀತಿಯ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕೆಂಬ ಬಗ್ಗೆ ಸರ್ಕಾರ ಈಗಾಗಲೇ ಪತ್ರಿಕೆ ಮತ್ತು ಮಾಧ್ಯಮಗಳ ಮುಖಾಂತರ ಪ್ರಚಾರಪಡಿಸಲಾಗುತ್ತಿದೆ. ಶಾಲಾ-ಕಾಲೇಜುಗಳಲ್ಲಿ ಈ ಬಗ್ಗೆ ವಿದ್ಯಾರ್ಥಿಗಳಿಗೆ ಮುಂಜಾಗ್ರತೆ ಕ್ರಮದ ಬಗ್ಗೆ ಜಾಗೃತಿ ಮೂಡಿಸಲಾಗುವುದು.

ಮೂಲಸೌಕರ್ಯ ಅಭಿವೃದ್ಧಿ

* ಗುಲಬರ್ಗಾ ಮತ್ತು ಶಿವಮೊಗ್ಗ ವಿಮಾನ ನಿಲ್ದಾಣಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದ್ದು, ಕಾಮಗಾರಿಗಳು ಪ್ರಾರಂಭವಾಗಿವೆ. ಹಾಸನ ಮತ್ತು ಬಿಜಾಪುರ ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ಹಾಗೂ ಹುಬ್ಬಳ್ಳಿ, ಬೆಳಗಾವಿ ಹಾಗೂ ಮಂಗಳೂರು ವಿಮಾನ ನಿಲ್ದಾಣಗಳ ಮೇಲ್ದರ್ಜೆಗೇರಿಸುವ ಕಾರ್ಯ ಜಾರಿಯಲ್ಲಿದೆ.
* ಮೈಸೂರು ಮತ್ತು ಬೀದರ್ ವಿಮಾನ ನಿಲ್ದಾಣಗಳ ನಿರ್ಮಾಣ ಮುಕ್ತಾಯಗೊಂಡಿದ್ದು, ಆದಷ್ಟು ಬೇಗ ಇವುಗಳನ್ನು ವಿಮಾನಯಾನಕ್ಕೆ ಸಮರ್ಪಿಸಬೇಕೆಂದು ಕೇಂದ್ರ ಸರ್ಕಾರವನ್ನು ಕೋರುತ್ತೇನೆ.

ರಸ್ತೆಗಳು

* ಆರ್ಥಿಕ ವಿಕಾಸಕ್ಕೆ ರಸ್ತೆ ಸಂಪರ್ಕ ಜಾಲದ ಅಭಿವೃದ್ಧಿ ಬಹು ಮುಖ್ಯ. ರಾಜ್ಯದಾದ್ಯಂತ ರಸ್ತೆಗಳ ಅಭಿವೃದ್ಧಿಗೆ ನಮ್ಮ ಸರ್ಕಾರ ಗಮನ ನೀಡಿದೆ. ಲೊಕೋಪಯೋಗಿ ಇಲಾಖಾವತಿಯಿಂದ ರಸ್ತೆಗಳ ನಿರ್ವಹಣೆಗೆ ೨,೫೦೦ ಕೋಟಿ ರೂ. ವೆಚ್ಚ ಮಾಡಲಾಗಿದೆ. ಪಿಪಿಪಿ ಮಾದರಿಯಲ್ಲಿ ಒಂದು ಸಾವಿರ ಕಿ.ಮೀ. ರಸ್ತೆಗಳ ಅಭಿವೃದ್ಧಿಗೆ ಸೆಪ್ಟಂಬರ್ ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆ ಪ್ರಾರಂಭಿಸಲಾಗುವುದು.

ಪ್ರವಾಸೋದ್ಯಮ

* ಕರ್ನಾಟಕ ಪರಿಸರ ಪ್ರವಾಸೋದ್ಯಮಕ್ಕೆ ಹೆಸರಾಗಿದ್ದು ರಾಜ್ಯದಲ್ಲಿ ಈಗಾಗಲೇ ೧೧ ಪರಿಸರ ಪ್ರವಾಸೋದ್ಯಮ ಕೇಂದ್ರಗಳನ್ನು ತೆರೆಯಲಾಗಿದೆ. ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕಾಗಿ ಹಲವಾರು ಯೋಜನೆಗಳನ್ನು ಕಾರ್ಯಗತಗೊಳಿಸಲಾಗುತ್ತಿದೆ.
* ವಿಶ್ವ ಪರಂಪರಾ ಕೇಂದ್ರವಾದ ಹಂಪಿಯ ಸಮಗ್ರಾಭಿವೃದ್ಧಿಗೆ ಈಗಾಗಲೇ ೧೬ ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ.
* ನಂದಿಬೆಟ್ಟ, ಕೊಡಚಾದ್ರಿ ಮತ್ತು ಕೆಮ್ಮಣ್ಣುಗುಂಡಿ ಗಿರಿಧಾಮಗಳ ಅಭಿವೃದ್ಧಿಗೆ ವಿಶೇಷ ಕ್ರಮ ತೆಗೆದುಕೊಳ್ಳಲಾಗುತ್ತಿದೆ.

ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಕ್ರಮ

* ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಡಾ. ಡಿ.ಎಂ. ನಂಜುಂಡಪ್ಪ ಸಮಿತಿ ಶಿಫಾರಸ್ಸುಗಳ ಅನುಷ್ಠಾನಕ್ಕೆ ೨೦೦೮-೦೯ನೆ ಸಾಲಿನಲ್ಲಿ ೧,೭೩೯ ಕೋಟಿ ರೂ. ಗಳನ್ನು ಖರ್ಚುಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ಈ ಕಾರ್ಯಕ್ಕಾಗಿ ೨,೫೭೪ ಕೋಟಿ ರೂ.ಗಳನ್ನು ಒದಗಿಸಲಾಗಿದೆ.  ಈ ದಿಶೆಯಲ್ಲಿ ಪ್ರಗತಿ ಪರಿಶೀಲನೆ ಮತ್ತು ಅನುಷ್ಠಾನ ಮೇಲ್ವಿಚಾರಣೆಗೆ ಒಂದು ಉನ್ನತ ಮಟ್ಟದ ಸಮಿತಿಯನ್ನು ಸಹ ರಚಿಸಲಾಗಿದೆ.

ನೀರಾವರಿ ಯೋಜನೆಗಳ ಕಾಲಬದ್ಧ ಅನುಷ್ಠಾನ

* ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಕಳೆದ ಒಂದು ವರ್ಷದಲ್ಲಿ ಸಾಕಷ್ಟು ಸಾಧನೆ ಮಾಡಲಾಗಿದೆ.
* ಸುಮಾರು ಒಂದು ಲಕ್ಷ ಹದಿನಾರು ಸಾವಿರ ಎಕರೆ ಜಮೀನಿಗೆ ಹೊಸದಾಗಿ ನೀರಾವರಿ ಸೌಲಭ್ಯ ಒದಗಿಸಲಾಗಿದೆ.
* ಜೊತೆಗೆ ಭದ್ರಾ ಮೇಲ್ದಂಡೆ ಯೋಜನೆ, ಗುತ್ತಿ ಬಸವಣ್ಣ ಹಾಗೂ ದಂಡಾವತಿಯಂತಹ ೧೭ ನೂತನ ನೀರಾವರಿ ಯೋಜನೆಗಳಿಗೆ ಮಂಜೂರಾತಿ ನೀಡಿ ಲಕ್ಷಾಂತರ ರೈತರ ಬಹು ವರ್ಷಗಳ ಆಶೋತ್ತರಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಲಾಗಿದೆ.

ಕೊಡಗು ಅಭಿವೃದ್ಧಿಗೆ ವಿಶೇಷ ಗಮನ

* ಕೊಡಗು ಜಿಲ್ಲೆ ನಮ್ಮ ರಾಷ್ಟ್ರದ ಸೇನಾಪಡೆಯ ಮುಖ್ಯಸ್ಥರು, ಸಾವಿರಾರು ಅಧಿಕಾರಿಗಳು ಮತ್ತು ಸೇನಾನಿಗಳನ್ನು ನೀಡಿದ ಹೆಮ್ಮೆಯ ಜಿಲ್ಲೆ.  ಜೊತೆಗೆ ಕಾವೇರಿ ಮಾತೆಯ ಉಗಮಸ್ಥಾನ.  ಈ ಜಿಲ್ಲೆಯ ಅಭಿವೃದ್ಧಿಗೆ ಕಳೆದ ವರ್ಷ ೨೫ ಕೋಟಿ ರೂ. ವಿಶೇಷ ಯೋಜನೆ ಮಂಜೂರು ಮಾಡಲಾಗಿತ್ತು.  ಈ ವರ್ಷ ಕೊಡಗು ಜಿಲ್ಲೆಯ ಮೂಲ ಸೌಲಭ್ಯ ಮತ್ತು ಪ್ರವಾಸೋದ್ಯಮ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗುವುದು.

ಮಂಥನ

* ೧೩-೦೮-೨೦೦೮ರಲ್ಲಿ ಹಮ್ಮಿಕೊಂಡಿದ್ದ ಮೊದಲ ಮಂಥನ ಸಭೆಯ ಯಶಸ್ಸಿನ ಹಿನ್ನೆಲೆಯಲ್ಲಿ ಮಂಥನ-೨ನ್ನು ಇತ್ತೀಚೆಗಷ್ಟೆ ಹಮ್ಮಿಕೊಳ್ಳಲಾಗಿತ್ತು.  ಅಧಿಕಾರಿಗಳು ಹಾಗೂ ಸಚಿವರ ನಡುವೆ ಮುಕ್ತ ವಿಚಾರ ವಿನಿಮಯಕ್ಕೆ ಆದ್ಯತೆ ನೀಡುವ ಈ ರೀತಿಯ ಮಂಥನ ಕಾರ್ಯಕ್ರಮಗಳಿಂದ ಹಲವಾರು ನೂತನ ಸಲಹೆ, ಕಾರ್ಯಕ್ರಮಗಳು ಹೊರಬಂದಿದ್ದು, ಅವುಗಳನ್ನು ಅನುಷ್ಠಾನಗೊಳಿಸಲಾಗುವುದು.
* ಪ್ರತಿ ಮೂರು ತಿಂಗಳಿಗೊಮ್ಮೆ ಈ ರೀತಿಯ ಮಂಥನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿದ್ದೇವೆ.

ದೇಶದಲ್ಲೇ  ಪ್ರಥಮ

* ಕಳೆದ ೧೫ ತಿಂಗಳ ನಮ್ಮ ಸರ್ಕಾರದ ಆಡಳಿತಾವಧಿಯಲ್ಲಿ ಕರ್ನಾಟಕ ರಾಜ್ಯವು ಹಲವಾರು ವಿಷಯಗಳಲ್ಲಿ ಇಡೀ ದೇಶದಲ್ಲಿಯೇ ಮೊದಲನೆಯ ಸ್ಥಾನದಲ್ಲಿರುವುದನ್ನು ಹೆಮ್ಮೆಯಿಂದ ತಿಳಿಸ ಬಯಸುತ್ತೇನೆ.
* ಶೇ.೩ರ ಬಡ್ಡಿದರದಲ್ಲಿ ಅನ್ನದಾತರಿಗೆ ಕೃಷಿ ಸಾಲವನ್ನು ಸಹಕಾರಿ ಬ್ಯಾಂಕುಗಳಷ್ಟೆ ಅಲ್ಲ ವಾಣಿಜ್ಯ ಬ್ಯಾಂಕುಗಳ ಮೂಲಕವೂ ವಿತರಿಸುತ್ತಿರುವುದು, ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ಗೆ ೨ ರೂ.ಗಳ ಪ್ರೋತ್ಸಾಹ ಧನ ನೀಡಿರುವುದು, (ಪ್ರಸಕ್ತ ಸಾಲಿನಲ್ಲಿ ೨೦೦ ಕೋಟಿ ರೂ.ಗಳನ್ನು ನಿಗದಿಪಡಿಸಿದ್ದು, ಈಗಾಗಲೇ ೧೦೦ ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ) ಮಹಿಳೆಯರೂ ಒಳಗೊಂಡಂತೆ ರೈತಾಪಿ ಜನಸಮುದಾಯವನ್ನು ಕೃಷಿ ಅಧ್ಯಯನಕ್ಕಾಗಿ ವಿದೇಶಿ ಪ್ರವಾಸಕ್ಕೆ ಕಳುಹಿಸಿರುವುದು ಇಡೀ ದೇಶದಲ್ಲಿಯೇ ಕರ್ನಾಟಕ ರಾಜ್ಯದ ಪ್ರಥಮಗಳಲ್ಲಿ ಕೆಲವು ಸಂಗತಿಗಳು.
* ರಾಜ್ಯ ಮಟ್ಟದಲ್ಲಿ ಜ್ಞಾನ ಆಯೋಗವನ್ನು ರಚಿಸಿರುವುದು ಕರ್ನಾಟಕದಲ್ಲಿಯೇ ಪ್ರಪ್ರಥಮವಾಗಿದೆ. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ಅನುಷ್ಠಾನದಲ್ಲಿ ನಮ್ಮ ರಾಜ್ಯವು ಇಡೀ ದೇಶದಲ್ಲಿಯೇ ಮೊದಲನೆಯದಾಗಿದೆ.
* ಮಾಹಿತಿ ತಂತ್ರಜ್ಞಾನದಲ್ಲಿಯೂ ನಮ್ಮ ರಾಜ್ಯಕ್ಕೆ ವಿಶೇಷ ಸ್ಥಾನವಿದೆ.  ೨೦೦೮-೦೯ನೆ ಸಾಲಿನಲ್ಲಿ ಸುಮಾರು ೬೭,೦೦೦ ಕೋಟಿ ರೂ.ಗಳ ಮೌಲ್ಯದ ಸಾಪ್ಟ್‌ವೇರ್ ರಫ್ತು ಕರ್ನಾಟಕದಿಂದ ಅಗಿದ್ದು, ಇಡೀ ದೇಶದಲ್ಲಿಯೇ ನಮ್ಮ ರಾಜ್ಯವು ಈ ವಿಷಯದಲ್ಲಿಯೂ ಮೊದಲನೆಯ ಸ್ಥಾನವನ್ನು ಉಳಿಸಿಕೊಂಡಿದೆ.
* ಕಳೆದ ಒಂದು ವರ್ಷದ ಅವಧಿಯಲ್ಲಿ ಸುಮಾರು ೧.೨೦ ಕೋಟಿ ಕುಟುಂಬಗಳಿಗೆ ವಿವಿಧ ಯೋಜನೆಗಳಡಿ ಸೌಲಭ್ಯ ಹಾಗೂ ಸವಲತ್ತುಗಳನ್ನು ವಿತರಿಸಲಾಗಿದೆ.
* ಬಡವರ ಮನೆಯಲ್ಲಿ ಜನಿಸಿದ ಹೆಣ್ಣುಮಗುವಿನ ಹೆಸರಿನಲ್ಲಿ ಸುಮಾರು ೨೦,೦೦೦/- ರೂ.ಗಳ ಪ್ರಾರಂಭಿಕ ಬಾಂಡ್ ಇಡುವ ಭಾಗ್ಯಲಕ್ಷ್ಮೀ ಯೋಜನೆಯಿಂದ ಸಾಮಾಜಿಕ ಸುರಕ್ಷತೆಗೆ ಹೊಸ ಆಯಾಮವನ್ನು ನೀಡಲಾಗಿದೆ.
* ಆ ಹೆಣ್ಣುಮಗು ೧೮ನೇ ವಯಸ್ಸಿಗೆ ಬರುವ ಹೊತ್ತಿಗೆ ಒಂದು ಲಕ್ಷ ರೂ.ಗಳ ನಗದು ಆಕೆಯ ಖಾತೆಯಲ್ಲಿರುವ ಈ ವಿನೂತನ ಯೋಜನೆಯಡಿಯಲ್ಲಿ ಹಿಂದಿನ ವರ್ಷದಲ್ಲಿ ೨.೯೭ ಲಕ್ಷ ಹೆಣ್ಣು ಮಕ್ಕಳ ಹೆಸರಿನಲ್ಲಿ ೩೧೬ ಕೋಟಿ ರೂ.ಗಳ ಠೇವಣಿ ಇರಿಸಲಾಗಿದೆ.
* ೬೫ ವರ್ಷ ವಯಸ್ಸು ಮೀರಿದ ಹಿರಿಯ ಚೇತನಗಳಿಗೆ ನೀಡುವ ಸಂಧ್ಯಾ ಸುರಕ್ಷಾ ಯೋಜನೆಯ ಮಾಸಿಕ ಸಹಾಯಧನವನ್ನು ೪೦೦/- ರೂ.ಗಳಿಗೆ ಹೆಚ್ಚಿಸಿದ್ದು, ಈ ಯೋಜನೆಯಡಿಯಲ್ಲಿ ಕಳೆದ ಸಾಲಿನಲ್ಲಿ ೬ ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಭದ್ರತಾ ವೇತನ ಹಂಚಲಾಗಿದೆ.
* ಶೇ.೭೫ಕ್ಕಿಂತ ಅಧಿಕ ಅಂಗವಿಕಲರಿಗೆ ಮಾಸಿಕ ಭತ್ಯೆಯನ್ನು ೧,೦೦೦/- ರೂ.ಗಳಿಗೆ ಹೆಚ್ಚಿಸಿದ್ದು, ಕಳೆದೊಂದು ವರ್ಷದಲ್ಲಿ ಸುಮಾರು ೬,೭೦೦ ಅಂಗವಿಕಲರಿಗೆ ೮.೪ ಕೋಟಿ ರೂ.ಗಳ ಭತ್ಯೆಯನ್ನು ವಿತರಿಸಿಲಾಗಿದೆ.

ಬೆಂಗಳೂರು ಅಭಿವೃದ್ಧಿ

* ಬೆಂಗಳೂರು ನಗರದ ಮೂಲಭೂತ ಸೌಲಭ್ಯದ ಅಭಿವೃದ್ಧಿಗೆ ಹಿಂದಿನ ವರ್ಷ ಇದೇ ವೇದಿಕೆಯಲ್ಲಿ ನಾನು ಪ್ರಸ್ತಾಪಿಸಿದ್ದ ಅಬೈಡ್ ಸಂಸ್ಥೆ ಈಗ ಚುರುಕಾಗಿ ಕಾರ್ಯತತ್ಪರವಾಗಿದೆ. ಕಳೆದ ಒಂದು ವರ್ಷದಲ್ಲಿ ೮೦೦ ಕೋಟಿ ರೂ.ಗಳಿಗೂ ಹೆಚ್ಚು ಹಣ ವೆಚ್ಚಮಾಡಿ ರಸ್ತೆ ನಿರ್ಮಾಣ, ಅಗಲೀಕರಣ, ಅಭಿವೃದ್ಧಿ, ಮೇಲು ಮತ್ತು ಕೆಳಸೇತುವೆ ನಿರ್ಮಾಣ ಮುಂತಾದ ವಿಶೇಷ ಕಾಮಗಾರಿಗಳು ಮಹಾನಗರದ ಎಲ್ಲೆಡೆ ಚಾಲನೆಯಲ್ಲಿರುವುದನ್ನು ನೀವೆಲ್ಲರೂ ನೋಡಿದ್ದೀರಿ.
* ಕಾವೇರಿ ೪ನೆ ಹಂತ, ೨ನೆಯ ಘಟ್ಟದ, ೩,೩೮೩ ಕೋಟಿ ರೂ.ಗಳ ಜಪಾನ್ ಸಹಯೋಗದೊಂದಿಗೆ ೫೦೦ ದಶಲಕ್ಷ ಲೀಟರ್ ನೀರು ಸರಬರಾಜು ಯೋಜನೆಗೆ ಚಾಲನೆ ನೀಡಲಾಗಿದೆ.
* ಡಿಸೆಂಬರ್ ೨೦೧೦ರಲ್ಲಿ ನಮ್ಮ ಮೆಟ್ರೋ ಯೋಜನೆಯ ಪ್ರಥಮ ಹಂತ ಚಾಲನೆಗೊಳ್ಳಲಿದೆ. ಮೆಟ್ರೋ ಯೋಜನೆಗಾಗಿ ನಮ್ಮ ಸರ್ಕಾರವು ಇದುವರೆಗೆ ೧,೧೩೪ ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದು, ಭಾರತ ಸರ್ಕಾರದಿಂದ ೩೭೦ ಕೋಟಿ ರೂ.ಗಳ ಅನುದಾನ ಬಿಡುಗಡೆಯಾಗಿದೆ.
* ಮೆಟ್ರೋ ಕಾಮಗಾರಿ ಹಾಗೂ ಇತರೆ ಎಲ್ಲ ಕಾಮಗಾರಿಗಳ ಗುಣಮಟ್ಟವನ್ನು ಪರೀಕ್ಷಿಸಲು ಹಾಗೂ ಅವಘಡಗಳನ್ನು ತಪ್ಪಿಸಲು ನಮ್ಮ ಸರ್ಕಾರವು ಸಾರ್ವಜನಿಕ ಕಾಮಗಾರಿಗಳ ಗುಣಮಟ್ಟ ಪರಿಶೀಲನಾ ಕ್ರಿಯಾಸಮಿತಿಯನ್ನು ರಚಿಸಿದೆ.
* ಸಾರ್ವಜನಿಕರಿಗೆ ಒಂದೇ ಕಛೇರಿಯಲ್ಲಿ ಎಲ್ಲಾ ನಾಗರೀಕ ಸೇವೆಗಳನ್ನು ಒದಗಿಸುತ್ತಿರುವ ಬೆಂಗಳೂರು ಒನ್ ಕೇಂದ್ರಗಳು ಹಾಲಿ ೫೩ ಕಾರ್ಯನಿರ್ವಹಿಸುತ್ತಿದ್ದು, ವರ್ಷಾಂತ್ಯಕ್ಕೆ ಈ ಕೇಂದ್ರಗಳ ಸಂಖ್ಯೆಯನ್ನು ೧೦೦ಕ್ಕೆ ಏರಿಸುವ ಹಾಗೂ ಕೇಂದ್ರಗಳಿಂದ ಒದಗಿಸುವ ಸೇವೆಗಳ ಸಂಖ್ಯೆಯನ್ನು ಹೆಚ್ಚಿಸಲು ತೀರ್ಮಾನಿಸಲಾಗಿದೆ.
* ಅಭಿವೃದ್ಧಿ ಕಾಮಗಾರಿಗಳ ಜೊತೆಜೊತೆಗೆ ಬೆಂಗಳೂರನ್ನು ಸುಂದರಗೊಳಿಸಲು ಪಾರ್ಕ್‌ಗಳು ಹಾಗೂ ಕೆರೆಗಳ ಅಭಿವೃದ್ಧಿಯು ಜಾರಿಯಲ್ಲಿದೆ.
* ಕಳೆದೊಂದು ವರ್ಷದಲ್ಲಿ ಒಟ್ಟು ೮೦ ಪಾರ್ಕ್‌ಗಳನ್ನು ಹಾಗೂ ೨೯೪ ಕೋಟಿ ರೂ.ಗಳ ವೆಚ್ಚದಲ್ಲಿ ೨೯ ಕೆರೆಗಳ ಅಭಿವೃದ್ಧಿ ಕಾರ್ಯ ಆರಂಭವಾಗಿದೆ.
* ನಗರದ ಕೇಂದ್ರ ಸ್ಥಳದಲ್ಲಿ ಜನದಟ್ಟಣೆ ಕಡಿಮೆಗೊಳಿಸಲು ಬೆಂಗಳೂರು ಟರ್ಫ್ ಕ್ಲಬ್ಬನ್ನು (ರೇಸ್‌ಕೋರ್ಸ್‌ನ್ನು) ನಗರದ ಹೊರ ವಲಯಕ್ಕೆ ಸ್ಥಳಾಂತರಿಸಲು ಈಗಾಗಲೇ ಜಮೀನನ್ನು ಮಂಜೂರು ಮಾಡಲಾಗಿದೆ.
* ನಗರದ ನಾಲ್ಕೂ ದಿಕ್ಕಿನಲ್ಲಿ ಮಿನಿ ಲಾಲ್‌ಬಾಗ್‌ಗಳನ್ನು ಅಭಿವೃದ್ಧಿಪಡಿಸಿ ಉದ್ಯಾನ ನಗರಿ ಬೆಂಗಳೂರಿನ ಸೌಂದರ್ಯವನ್ನು ವೃದ್ಧಿಸಲಾಗುವುದು.

ಉಳಿದೆಲ್ಲಾ  ನಗರಗಳ ಅಭಿವೃದ್ಧಿ

* ಬೆಂಗಳೂರು ಒನ್ ಮಾದರಿಯ ಕೇಂದ್ರಗಳನ್ನು ಮೈಸೂರು, ಮಂಗಳೂರು, ಬೆಳಗಾವಿ, ಶಿವಮೊಗ್ಗ ಮತ್ತು ಗುಲಬರ್ಗಾಗಳಲ್ಲಿಯೂ ಸ್ಥಾಪಿಸಲು ಉದ್ದೇಶಿಸಲಾಗಿದೆ.
* ೨೦೦೯-೧೦ನೆ ಸಾಲಿನಲ್ಲಿ ಧಾರವಾಡದಲ್ಲಿ ಅಗ್ರಿಬಯೋಟೆಕ್ ಪಾರ್ಕ್, ಮಂಗಳೂರಿನಲ್ಲಿ ಮೆರೈನ್ ಬಯೋಟೆಕ್ ಪಾರ್ಕ್, ಬೀದರ್‌ನಲ್ಲಿ ಅನಿಮಲ್ ಹೌಸ್ ಹಾಗೂ ಮೈಸೂರಿನಲ್ಲಿ ನ್ಯೂಟ್ರಾ ಬಯೋಟೆಕ್ ಪಾರ್ಕ್ ಹಾಗೂ ಸೈಟೋಫಾರ್ಮಸಿಟಿಕಲ್ ಪಾರ್ಕ್ ಸ್ಥಾಪಿಸಲು ಉದ್ದೇಶಿಸಿದೆ.
* ಅಭಿವೃದ್ಧಿ ಕೆಲಸಗಳಿಗಾಗಿ ಪ್ರತಿ ನಗರ ಪಾಲಿಕೆ ಅಭಿವೃದ್ಧಿಗೆ ೧೦೦ ಕೋಟಿ ರೂ.ಗಳು, ಪ್ರತಿ ಜಿಲ್ಲಾ ಕೇಂದ್ರಕ್ಕೆ ೩೦ ಕೋಟಿ ರೂ.ಗಳು, ಪ್ರತಿ ತಾಲ್ಲೂಕು ಕೇಂದ್ರಕ್ಕೆ ೫ ಕೋಟಿ ರೂ.ಗಳನ್ನು ಒದಗಿಸಲಾಗಿದೆ.
* ೨೧೧ ಸಣ್ಣ ಮತ್ತು ಮಧ್ಯಮ ಪಟ್ಟಣಗಳಲ್ಲಿ ೧,೪೧೧ ಕೋಟಿ ರೂ.ಗಳ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದೆ.

ಜನಸ್ಪಂದನ

* ಹೆಸರೇ ಸೂಚಿಸುವಂತೆ ಸರ್ಕಾರವೇ ಪ್ರಜೆಗಳ ಮನೆಬಾಗಿಲಿಗೆ ಹೋಗಿ ಸೌಲಭ್ಯ ಹಾಗೂ ಸವಲತ್ತುಗಳನ್ನು ಒದಗಿಸುವ ವಾರಾಂತ್ಯದ ಕಾರ್ಯಕ್ರಮ ಜನಸ್ಪಂದನ ನಮ್ಮ ಸರ್ಕಾರದ ವಿನೂತನ ಯೋಜನೆ.
* ಜನಸ್ಪಂದನ ಪ್ರಾರಂಭವಾದ ೨೦-೦೯-೨೦೦೮ ರಿಂದ ೨೦೦೯ರ ಜುಲೈ ಅಂತ್ಯದವರೆಗೆ ರಾಜ್ಯದಲ್ಲಿ ಒಟ್ಟು ೪,೦೪೮ ಹೋಬಳಿ ಮಟ್ಟದ ಸಭೆಗಳು ಜರುಗಿವೆ.
* ಈ ಸಭೆಗಳಲ್ಲಿ ಒಟ್ಟು ೮,೯೩,೯೨೦ ಅರ್ಜಿಗಳನ್ನು ಸ್ವೀಕರಿಸಿದ್ದು ಇವುಗಳಲ್ಲಿ ಶೇ.೭೮ರಷ್ಟು ಅಂದರೆ ೬,೯೭,೫೨೪ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ.

ವಿಶೇಷ ಅಧಿವೇಶನ

* ದೇಶಕ್ಕೆ ಸ್ವಾತಂತ್ರ್ಯ ಬಂದು ೬೨ ವರ್ಷಗಳಾದರೂ ಗ್ರಾಮರಾಜ್ಯ ಮತ್ತು ರಾಮರಾಜ್ಯದ ಕನಸು ನನಸಾಗದೇ ಉಳಿದಿದೆ. ಸ್ವಾತಂತ್ರ್ಯದ ಫಲ ಎಲ್ಲರಿಗೂ ಸಮಪ್ರಮಾಣದಲ್ಲಿ ದೊರೆತಿಲ್ಲ. ಕೆಳಸ್ಥರದ ಸಮುದಾಯಗಳು ಮತ್ತು ಹಿಂದುಳಿದ ಪ್ರದೇಶಗಳು ಅಭಿವೃದ್ಧಿಯ ಮುಖ್ಯವಾಹಿನಿಗೆ ಸೇರಿ ಪ್ರಗತಿಯಲ್ಲಿ ಸೂಕ್ತ ಪಾಲು ಪಡೆಯಲು ಸಾಧ್ಯವಾಗಿಲ್ಲ. ಇವೆಲ್ಲ ಆಶಯಗಳನ್ನು ಸಾಧ್ಯಗೊಳಿಸಿದಾಗ ಮಾತ್ರ ಸ್ವಾತಂತ್ರ್ಯಕ್ಕೆ ನಿಜವಾದ ಅರ್ಥ ಬರುತ್ತದೆ. ನಮ್ಮ ಸರ್ಕಾರ ಈ ಮಹತ್ವಾಕಾಂಕ್ಷೆಯೊಂದಿಗೆ ಕಾರ್ಯೋನ್ಮುಖವಾಗಿದೆ.
* ಗ್ರಾಮೀಣಾಭಿವೃದ್ಧಿಗೆ ಅತ್ಯಂತ ಪೂರಕವಾದ ಮಾಜಿ ರಾಷ್ಟ್ರಪತಿಗಳಾದ ಡಾ: ಅಬ್ದುಲ್ ಕಲಾಂಜೀ ಅವರ ಕಲ್ಪನೆಯ ಪುರ (ಪ್ರೊವೈಡಿಂಗ್ ಅರ್ಬನ್ ಅಮೆನಿಟೀಸ್ ಇನ್ ರೂರಲ್ ಏರಿಯಾಸ್) ಯೋಜನೆ ಅನುಷ್ಠಾನಗೊಳಿಸುವುದೂ ಸೇರಿದಂತೆ ಗ್ರಾಮೀಣಾಭಿವೃದ್ಧಿ ಮತ್ತು ಕೃಷಿ ವಿಷಯಗಳ ಬಗ್ಗೆ ಚರ್ಚಿಸಲು ಸೆಪ್ಟಂಬರ್ ತಿಂಗಳ ೨ನೇ ವಾರದಲ್ಲಿ ವಿಧಾನ ಮಂಡಲದ ವಿಶೇಷ ಅಧಿವೇಶನ ಕರೆಯಲು ನಿರ್ಧರಿಸಲಾಗಿದೆ.
* ಈ ಚರ್ಚೆಯಲ್ಲಿ ಮೂಡಿಬರುವ ಸಲಹೆ ಮತ್ತು ಅಭಿಪ್ರಾಯಗಳನ್ನು ಕ್ರೋಢೀಕರಿಸಿ ಮುಂದಿನ ಆಯವ್ಯಯದಲ್ಲಿ ಅಳವಡಿಸಿಕೊಂಡು ಅನುಷ್ಠಾನಕ್ಕೆ ಚಾಲನೆ ನೀಡಲಾಗುವುದು.
* ಕಳೆದ ವರ್ಷ ಗುಲ್ಬರ್ಗಾದಲ್ಲಿ ಸಚಿವ ಸಂಪುಟದ ಸಭೆ ನಡೆಸಲಾಗಿತ್ತು. ಈ ವರ್ಷವೂ ಸಚಿವ ಸಂಪುಟದ ಸಭೆಯನ್ನು ಗುಲ್ಬರ್ಗಾದಲ್ಲಿ ನಡೆಸಿ ಕಳೆದ ವರ್ಷ ಕೈಗೊಂಡಿದ್ದ ನಿರ್ಣಯಗಳ ಜಾರಿ ಬಗ್ಗೆ ಪರಿಶೀಲನೆ ಮತ್ತು ಹೊಸ ನಿರ್ಣಯ ಕೈಗೊಳ್ಳಲು ನಿರ್ಧರಿಸಲಾಗಿದೆ. ಇದರಿಂದ ಹಿಂದುಳಿದ ಗುಲ್ಬರ್ಗಾ ವಿಭಾಗದ ಅಭಿವೃದ್ಧಿಗೆ ವಿಶೇಷ ಗಮನ ಹರಿಸಲು ಸಾಧ್ಯವಾಗಲಿದೆ.

ಸುವರ್ಣ  ಸೌಧ

* ಬೆಳಗಾವಿಯಲ್ಲಿ ೧೧೦ ಎಕರೆ ಪ್ರದೇಶದಲ್ಲಿ ೨೩೦ ಕೋಟಿ ರೂ.ಗಳ ಮೊತ್ತದಲ್ಲಿ ಸುವರ್ಣ ಸೌಧವನ್ನು ನಿರ್ಮಿಸಲು ಚಾಲನೆ ನೀಡಲಾಗಿದೆ. ಇದರಿಂದ ಬೆಳಗಾವಿಯಲ್ಲಿ ಪ್ರತಿ ವರ್ಷ ಅಧಿವೇಶನ ನಡೆಸಲು ಅನುಕೂಲವಾಗಲಿದೆ.

ಸಂಕಲ್ಪ

* ಸ್ವಾತಂತ್ರ್ಯ ದಿನಾಚರಣೆಯ ಈ ಸಂದರ್ಭದಲ್ಲಿ ಕಳೆದೊಂದು ವರ್ಷದಲ್ಲಿ ನಮ್ಮ ಸರ್ಕಾರ ನಡೆದ ಹಾದಿಯ ಸಿಂಹಾವಲೋಕನವನ್ನು ಇಲ್ಲಿಯವರೆಗೆ ಮಾಡಿದ್ದೇನೆ. ಸಾಕಷ್ಟು ಸಾಧನೆಯಾಗಿದ್ದರೂ ಸಾಧಿಸಬೇಕಾದದ್ದು ಇನ್ನೂ ಬಹಳಷ್ಟಿದೆ ಎಂಬ ಸ್ಪಷ್ಟ ಅರಿವು ನನಗಿದೆ. ಸಮಾಜದ ಎಲ್ಲಾ ವರ್ಗದ ಜನಸಮುದಾಯದ ಮತ್ತು ರಾಜ್ಯದ ಎಲ್ಲಾ ಪ್ರದೇಶಗಳ ಸಮಾನ ಅಭಿವೃದ್ಧಿಗೆ ನಮ್ಮ ಸರ್ಕಾರ ಸಂಕಲ್ಪ ತೊಟ್ಟಿದೆ.

ನನ್ನ ನಾಡ ಬಾಂಧವರೆ,

* ಗೋಪಾಲಕೃಷ್ಣ ಅಡಿಗರ ಕಟ್ಟುವೆವು ನಾವು ಹೊಸ ನಾಡೊಂದನು, ರಸದ ಬಿಡೊಂದನು ಎಂಬ ಕವನದ ಸಾಲುಗಳು ನನಗೀಗ ನೆನಪಾಗುತ್ತಿವೆ.  ಭಾರತದ ಹಿರಿಮೆಯನ್ನು, ಕರ್ನಾಟಕದ ಗರಿಮೆಯನ್ನು ಮತ್ತೊಮ್ಮೆ ನೆನಪು ಮಾಡಿಕೊಳ್ಳುವ ಶುಭ ಸಂದರ್ಭವಿದು. ಅಹಿಂಸಾಮೂರ್ತಿ ಗಾಂಧೀಜಿಯವರ ನಾಯಕತ್ವದಲ್ಲಿ ಅಪಾರ ತ್ಯಾಗದ ನಂತರ ದೊರೆತಿರುವ ಅಮೂಲ್ಯ ಸ್ವಾತಂತ್ರ್ಯವನ್ನು ಶ್ರದ್ಧೆ ಮತ್ತು ಎಚ್ಚರಿಕೆಯಿಂದ ಕಾಪಾಡಿ ರಾಷ್ಟ್ರದ ಸಾರ್ವಭೌಮತ್ವವನ್ನು ಸಂರಕ್ಷಿಸಲು ನಾವೆಲ್ಲಾ ಸನ್ನದ್ಧರಾಗೋಣ. ರಾಷ್ಟ್ರ ನಿರ್ಮಾಣದಲ್ಲಿ ನಿಸ್ವಾರ್ಥದಿಂದ ನಮ್ಮನ್ನು ನಾವು ತೊಡಗಿಸಿಕೊಳ್ಳೋಣ ಎಂದು ಕರೆನೀಡಿ ಮತ್ತೊಮ್ಮೆ ತಮ್ಮೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭ ಕಾಮನೆಗಳನ್ನು ಸಲ್ಲಿಸಿ ನನ್ನ ಮಾತುಗಳನ್ನು ಮುಗಿಸುತ್ತೇನೆ.

ಜೈಹಿಂದ್ – ಜೈ ಕರ್ನಾಟಕ

Leave a Reply