ಮೂಲಸೌಕರ್ಯಕ್ಕೆ ಒತ್ತು ನೀಡುವ ಬಿಜೆಪಿ ಮುನ್ನೋಟ ಪತ್ರ ಬಿಡುಗಡೆ

ಮೂಲಸೌಕರ್ಯಕ್ಕೆ ಒತ್ತು ನೀಡುವ ಬಿಜೆಪಿ ಮುನ್ನೋಟ ಪತ್ರ ಬಿಡುಗಡೆ

dsc_0626ಬೆಂಗಳೂರು(ಏ.೨೧)- ರಾಷ್ಟ್ರೀಯ ಪ್ರಾಮುಖ್ಯತೆಯ ನೂರಕ್ಕೂ ಹೆಚ್ಚು ಮೂಲಸೌಕರ್ಯ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಬಿಜೆಪಿ ಕಾರ್ಯಸೂಚಿಯನ್ನು ಪಕ್ಷದ ಪ್ರಧಾನ ಮಂತ್ರಿ ಅಭ್ಯರ್ಥಿ ಎಲ್.ಕೆ.ಅಡ್ವಾಣಿ ಇಂದು ಬಿಡುಗಡೆ ಮಾಡಿದರು.

ಕಾರ್ಯಸೂಚಿ ಬಿಡುಗಡೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಲ್.ಕೆ.ಅಡ್ವಾಣಿಯವರು, ಎಲ್ಲ ವರ್ಗದ ಹಿತದೃಷ್ಟಿಯ ಬಿಜೆಪಿ ಪ್ರಣಾಳಿಕೆಯನ್ನು ಬಹುತೇಕ ಎಲ್ಲರೂ ಸ್ವಾಗತಿಸಿದ್ದಾರೆ. ಮಾಹಿತಿ ತಂತ್ರಜ್ಙಾನ ಕ್ಷೇತ್ರಕ್ಕೆ ವಿಶೇಷ ಒತ್ತು ನೀಡಿ ಕಾರ್ಯಸೂಚಿ ಬಿಡುಗಡೆ ಮಾಡಿರುವಂತೆ, ದೇಶದ ಆರ್ಥಿಕಾಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುವ ಮೂಲಸೌಕರ್ಯಕ್ಕೂ ಒತ್ತು ನೀಡುವ ಕಾರ್ಯಸೂಚಿ ಇದಾಗಿದೆ. ಈ ಕಾರ್ಯಸೂಚಿಯಂತೆ ಎನ್‌ಡಿಎ ಅಧಿಕಾರಕ್ಕೆ ಬಂದಲ್ಲಿ ರಾಷ್ಟ್ರೀಯ ಪ್ರಾಮುಖ್ಯತೆಯ ೧೦೦ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು. ಹಿಂದಿನ ಎನ್‌ಡಿಎ ಸರ್ಕಾರ ಮೂಲಸೌಕರ್ಯ ಅಭಿವೃದ್ಧಿಗೆ ಆರಂಭ ನೀಡಿತ್ತು. ಹಿಂದಿನ ೫೦ ವರ್ಷಗಳಲ್ಲಿ ಪ್ರತಿ ವರ್ಷ ೧೧ ಕಿಲೋಮೀಟರ್ ನಿರ್ಮಾಣವಾಗುತ್ತಿದ್ದ ರಾಷ್ಟ್ರೀಯ ಹೆದ್ದಾರಿ ಎನ್‌ಡಿಎ ಅಧಿಕಾರಾವಧಿಯಲ್ಲಿ ಪ್ರತಿದಿನ ೧೧ಕಿ.ಮೀ ರಸ್ತೆ ನಿರ್ಮಾಣವಾಯಿತು. ಎನ್‌ಡಿಎ ಹಾಕಿಕೊಟ್ಟ ಈ ವೇಗ ಕಾಪಾಡಿಕೊಂಡು ಹೋಗುವಲ್ಲಿ ವಿಫಲವಾದ ಯುಪಿಎ ಆಡಳಿತಾವಧಿಯಲ್ಲಿ ಪ್ರತಿದಿನ ಕೇವಲ ೫ಕಿ.ಮೀ.ರಸ್ತೆ ನಿರ್ಮಾಣವಾಯಿತು.
ಆರ್ಥಿಕ ಹಿಂಜರಿತದ ನಡುವೆಯೂ ಭಾರತದಲ್ಲಿ ಇನ್ನೂ ಮೂಲಸೌಕರ್ಯ ಕ್ಷೇತ್ರದಲ್ಲಿ ಶೇಕಡ ೮೦ರಷ್ಟು ಸಾರ್ವಜನಿಕ ಬಂಡವಾಳ ಹೂಡಿಕೆಯ ಅವಶ್ಯಕತೆ ಇದೆ. ಕರ್ನಾಟಕ ಸರ್ಕಾರವೂ ಸಹ ಮೂಲಸೌಕರ್ಯಕ್ಕೆ ಒತ್ತು ನೀಡಲು ಬಿಡುಗಡೆ ಮಾಡಿರುವ ಬೆಂಗಳೂರು ಮೂಲಸೌಕರ್ಯ ಅಭಿವೃದ್ಧಿ ಕಾರ್ಯಸೂಚಿ ಯಶಸ್ವಿಯಾಗುತ್ತಿದೆ ಎಂದು ಅಡ್ವಾಣಿಯವರು ಹೇಳಿದರು.

ಉತ್ತಮ ಆಡಳಿತ ನೀಡುವುದೇ ಗುರಿ: ೧೯೯೭ರಲ್ಲಿ ಸ್ವರ್ಣಜಯಂತಿ ರಥಯಾತ್ರೆ ಆರಂಭವಾದಾಗಿನಿಂದ ಉತ್ತಮ ಆಡಳಿತ ಮತ್ತು ಅಭಿವೃದ್ಧಿಯೇ ಪಕ್ಷದ ಘೋಷಣೆಯಾಗಿದೆ. ಹಿಂದಿನ ಎನ್‌ಡಿಎ ಸರ್ಕಾರದ ಆಡಳಿತ ಅನುಭವ ಹಾಗೂ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿನ ಉತ್ತಮ ಆಡಳಿತ ಈ ಚುನಾವಣೆಯಲ್ಲಿ ನೆರವಿಗೆ ಬರಲಿದೆ. ಆರ್ಥಿಕವಾಗಿ ವಿಶ್ವದಲ್ಲೇ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮುವ ಶಕ್ತಿ ಭಾರತದಲ್ಲಿ ಅಡಗಿದ್ದು, ೨೧ನೇ ಶತಮಾನ ಭಾರತದ್ದಾಗಲಿದೆ ಎಂದು ಅಡ್ವಾಣಿಯವರು ಹೇಳಿದರು.

ಅಧಿಕಾರಕ್ಕೆ ಬರುವುದು ನಿಶ್ಚಿತ: ಈ ಚುನಾವಣೆಯ ನಂತರ ಲೋಕಸಭೆಯಲ್ಲಿ  ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದ್ದು, ಮೈತ್ರಿ ಕೂಟದ ಪಕ್ಷಗಳೆಲ್ಲವೂ ಬಲಿಷ್ಠವಾಗಿರುವುದರಿಂದ ಎನ್‌ಡಿಎ ಅಧಿಕಾರಕ್ಕೆ ಬರುವ ವಿಶ್ವಾಸವಿದೆ. ಜನಾದೇಶವೂ ಎನ್‌ಡಿಎ ಪರವಾಗಿಯೇ ವ್ಯಕ್ತವಾಗಲಿದೆ ಎಂದು ಅಡ್ವಾಣಿಯವರು ತಿಳಿಸಿದರು.

ವಾಜಪೇಯಿಯವರು ಪ್ರಚಾರದಲ್ಲಿ ಇಲ್ಲದಿರುವುದಕ್ಕೆ ನೋವು: – ಈ ಬಾರಿಯ ಚುನಾವಣೆಯಲ್ಲಿ ನೋವು ಹಾಗೂ ಸಂತೋಷದ ಎರಡು ವಿಷಯಗಳಿವೆ. ಇದುವರೆಗಿನ ಪ್ರಚಾರದಲ್ಲಿ ತಮ್ಮ ಜತೆಗಿದ್ದ ಪಕ್ಷದ ಹಿರಿಯ ನಾಯಕ ವಾಜಪೇಯಿ ಅವರು ಪ್ರಚಾರದಲ್ಲಿ ಇಲ್ಲದಿರುವುದಕ್ಕೆ ತುಂಬಾ ನೋವಾಗಿರುವ ವಿಷಯ ಒಂದೆಡೆಯಾದರೆ, ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಿರುವುದಕ್ಕೆ ಸಂತೋಷವಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ಹಿರಿಯ ಮುಖಂಡರಾದ ವೆಂಕಯ್ಯನಾಯ್ಡು, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್, ವಕ್ತಾರರಾದ ಧನಂಜಯಕುಮಾರ್ ಉಪಸ್ಥಿತರಿದ್ದರು.

Leave a Reply