ಮಾನ್ಯ ಮುಖ್ಯಮಂತ್ರಿಗಳು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ ವಿಚಾರಗಳು

Download Press note Kannada | English

ಮೇಲಿಂದ ಮೇಲೆ ಒಂದೇ ವಿಷಯದ ಬಗ್ಗೆ ಮಾಧ್ಯಮಗಳಲ್ಲಿ ನನ್ನ ಹಾಗೂ ನನ್ನ ಕುಟುಂಬದ ಬಗ್ಗೆ ನಿರಂತರವಾಗಿ ನನ್ನ ವಿರೋಧಿಗಳು ಆರೋಪ ಮಾಡುತ್ತಿದ್ದಾರೆ. ಈ ಮೂಲಕ ರಾಜ್ಯದ ಜನತೆಯನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ತಾವು ಮಾಡಿರುವ ಅವ್ಯವಹಾರಗಳನ್ನು ಮುಚ್ಚಿಟ್ಟುಕೊಳ್ಳಲು ನನ್ನ ಮೇಲೆ ವಾಗ್ದಾಳಿ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಧ್ಯಮ ಮಿತ್ರರ ಮೂಲಕ ಜನತೆಗೆ ಸ್ಪಷ್ಟನೆ ನೀಡಬಯಸುತ್ತೇನೆ.
೧.    ನನ್ನ ಮಗ ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಸಂಸದರ ಕೋಟಾ ಅಡಿಯಲ್ಲಿ ನಿವೇಶನ ನೀಡಲಾಗಿದೆ.
೨.    ರಾಜ್ಯದ ಹಾಲಿ ಹಾಗೂ ಮಾಜಿ ಶಾಸಕರು, ಸಂಸದರು, ಗಣ್ಯ ವ್ಯಕ್ತಿಗಳು ಮತ್ತಿತರರಿಗೆ ಜಿ. ಪ್ರವರ್ಗದಲ್ಲಿ ಸೈಟುಗಳನ್ನು ನೀಡುತ್ತಿರುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ.
೩.    ಉದಾ: ದಿ. ಜೆ.ಎಚ್. ಪಟೇಲರ ಕಾಲದಲ್ಲಿ ೧೪೯, ಎಸ್.ಎಂ. ಕೃಷ್ಣ ಅವರ ಕಾಲದಲ್ಲಿ ೩೩೪, ಧರ್ಮಸಿಂಗ್ ಕಾಲದಲ್ಲಿ ೭೬, ಕುಮಾರಸ್ವಾಮಿ ಅವರ ಕಾಲದಲ್ಲಿ ೨೮೮ ಹಾಗೂ ನನ್ನ ಎರಡೂವರೆ ವರ್ಷದ ಅವಧಿಯಲ್ಲಿ ೧೩೬ ನಿವೇಶನಗಳನ್ನು ನೀಡಲಾಗಿದೆ.
೪.    ಇದರಂತೆ ಸಂಸದ ರಾಘವೇಂದ್ರ ಅವರಿಗೆ ಯಾವುದೇ ನಿಯಮ ಉಲ್ಲಂಘಿಸಿ ಅಥವಾ ಕಾನೂನು ಬಾಹಿರವಾಗಿ ನಿವೇಶನ ನೀಡಿಲ್ಲ.
೫.    ಆದರೆ, ಮಾಜಿ ಮುಖ್ಯಮಂತ್ರಿ ಶ್ರೀ ಧರ್ಮಸಿಂಗ್ ಅವರು ಪುತ್ರಿ, ಬಂಧುಗಳಿಗೆ ನಿವೇಶನಗಳನ್ನು ನೀಡಿದ್ದಾರೆ.
೬.    ಇದೇ ರೀತಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಂಧು ಬಾಂಧವರಿಗೆ, ಮನೆಯಲ್ಲಿ ಕೆಲಸ ಮಾಡುತ್ತಿದ್ದವರಿಗೆ ನಿವೇಶನ ಹಂಚಿಕೆ ಮಾಡಿದ್ದಾರೆ.
೭.    ಇದಲ್ಲದೇ, ಕುಮಾರಸ್ವಾಮಿ ಅವರ ಇಡೀ ಕುಟುಂಬದ ಸದಸ್ಯರು ಹಾಗೂ ನೆಂಟರಿಷ್ಟರು ಸುಮಾರು ೩೦ಕ್ಕೂ ಹೆಚ್ಚು ನಿವೇಶನಗಳನ್ನು ಮೈಸೂರಿನಲ್ಲಿ ಒಂದೇ ಬಡಾವಣೆಯಲ್ಲಿ ಅಕ್ಕಪಕ್ಕದಲ್ಲೇ ಪಡೆದಿದ್ದಾರೆ.
೮.    ಸಂಸದ ರಾಘವೇಂದ್ರರಿಗೆ ನಿವೇಶನ ನೀಡಿರುವುದು ಸ್ವಜನ ಪಕ್ಷಪಾತ ಎಂದು ಆರೋಪ ಮಾಡಿರುವ ವಿರೋಧ ಪಕ್ಷದವರಿಗೆ ಅವರು ಮಾಡಿರುವುದೇನು ಎಂಬ ಬಗ್ಗೆ ಆತ್ಮ ಶೋಧನೆ ಮಾಡಿಕೊಳ್ಳಲಿ.
ಫ್ಲೂಯಿಡ್ ಪವರ್ ಟೆಕ್ನಾಲಜೀಸ್
೯.    ಫ್ಲೂಯಿಡ್ ಪವರ್ ಟೆಕ್ನಾಲಜೀಸ್ ಕಂಪೆನಿಯನ್ನು ೨೦೦೭ರಲ್ಲಿ ಪ್ರಾರಂಭಿಸಲಾಗಿದ್ದು ನನ್ನ ಇಬ್ಬರು ಮಕ್ಕಳು ಬಿ.ವೈ. ರಾಘವೇಂದ್ರ ಮತ್ತು ಬಿ.ವೈ. ವಿಜಯೇಂದ್ರ ಸೇರಿದಂತೆ ಎಂಟು ಮಂದಿ ಇದಕ್ಕೆ ನಿರ್ದೇಶಕರಿದ್ದಾರೆ.
೧೦.    ಈ ಕಂಪೆನಿಯು ತನ್ನ ಕಾರ್ಯವ್ಯಾಪ್ತಿ ವಿಸ್ತರಣೆ ಮಾಡಲು ಬೊಮ್ಮಸಂದ್ರ, ಜಿಗಣಿ ಕೈಗಾರಿಕಾ ಪ್ರದೇಶದಲ್ಲಿ ೨ ಎಕರೆ ಭೂಮಿ ನೀಡುವಂತೆ ಕೆಐಎಡಿಬಿಗೆ ಅರ್ಜಿ ಸಲ್ಲಿಸಿತ್ತು. ನಿಯಮಾನುಸಾರ ನೀಡಲಾಗಿದೆ.
೧೧.    ಕಂಪೆನಿಯು ಕೆಐಎಡಿಬಿಗೆ ಪೂರ್ಣ ಹಣ ಪಾವತಿಸಿದ್ದರೂ ಭೂ ಮಾಲೀಕರು ಮತ್ತು ಕೆಐಎಡಿಬಿ ನಡುವೆ ವಿವಾದ ಇರುವುದರಿಂದ ಈ ಭೂಮಿ ಇನ್ನೂ ಹಸ್ತಾಂತರವಾಗಿಲ್ಲ.
೧೨.    ಹಿಂದಿನ ಸರ್ಕಾರಗಳೂ ಕೂಡ ಕೈಗಾರಿಕಾ ಸ್ಥಾಪನೆ ಉದ್ದೇಶದಿಂದ ಆರ್.ವಿ. ದೇಶಪಾಂಡೆ ಅವರ ಪುತ್ರ ಪ್ರಸಾದ್ ಆರ್. ದೇಶಪಾಂಡೆ, ಜೆ.ಎಚ್. ಪಟೇಲರ ಪುತ್ರ ಮಹಿಮಾ ಪಟೇಲ್, ಡಾ. ಜಿ. ಪರಮೇಶ್ವರ್, ಟಿ. ಪ್ರಭಾಕರ್, ಕುಮಾರಸ್ವಾಮಿ ಅವರ ಸೋದರ ಬಾಲಕೃಷ್ಣಗೌಡ- ಹೀಗೆ ಹಲವಾರು ಮಂದಿಗೆ ಜಮೀನು ನೀಡಲಾಗಿದೆ.
೧೩.    ಇವರುಗಳಿಗೆಲ್ಲಾ ನಿವೇಶನ ನೀಡಿದಂತೆಯೇ ಫ್ಲೂಯಿಡ್ ಪವರ್ ಟೆಕ್ನಾಲಜೀಸ್ ಸಂಸ್ಥೆಗೂ ಕೊಡಲಾಗಿದೆ. ಈ ಭೂಮಿ ಮಂಜೂರು ಮಾಡುವಲ್ಲಿ ಕೆಐಎಡಿಬಿಯು ಕಾನೂನು ಬಾಹೀರವಾಗಿ ಇಲ್ಲವೇ ನಿಯಮಾವಳಿಗಳನ್ನು ಉಲ್ಲಂಘಿಸಿಲ್ಲ. ಆದರೂ, ವಿನಾಕಾರಣ ಗುಲ್ಲೆಬ್ಬಿಸಲಾಗುತ್ತಿದೆ.
ಶಿವಮೊಗ್ಗದಲ್ಲಿ ಶಿಕ್ಷಣ ಸಂಸ್ಥೆ
೧೪.    ನನ್ನ ಕುಟುಂಬದ ಸದಸ್ಯರು ಶಿವಮೊಗ್ಗ ಜಿಲ್ಲೆಯಲ್ಲಿ ೧೯೯೫ರಿಂದ ಶಿಕ್ಷಣ ಸಂಸ್ಥೆಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ನಮ್ಮ ಕುಟುಂಬವು ಗ್ರಾಮೀಣ ಜನರ ಶಿಕ್ಷಣ ಹಾಗೂ ಆರೋಗ್ಯ ಸೇವೆ ಬಗ್ಗೆ ಆರಂಭದಿಂದಲೂ ಕಳಕಳಿ ಹೊಂದಿದೆ.
೧೫.    ಖ್ಯಾತ ಹೃದಯ ತಜ್ಞ ಡಾ. ದೇವಿಪ್ರಸಾದ್ ಶೆಟ್ಟಿ ಅವರ ಜೊತೆ ಸಮಾಲೋಚಿಸಿ ಸಹ್ಯಾದ್ರಿ ಹೆಲ್ತ್‌ಕೇರ್ ಪ್ರೈ. ಲಿ. ಸಂಸ್ಥೆ ಸ್ಥಾಪಿಸಿದ್ದೇವೆ.
೧೬.    ಈ ಸಂಸ್ಥೆಯ ಎರಡು ಎಕರೆ ಜಮೀನಿನ ಜೊತೆಗೆ ಪಕ್ಕದ ೫ ಎಕರೆ ಜಮೀನನ್ನೂ ಭೂ ಮಾಲೀಕರ ಒಪ್ಪಿಗೆಯೊಂದಿಗೆ ಕೆಐಎಡಿಬಿ ಮೂಲಕ ಖರೀದಿಸಲಾಗಿದೆ.
೧೭.    ನಿಯಮಾನುಸಾರ ಸಿಂಗಲ್ ವಿಂಡೋನಲ್ಲಿ ಈ ಯೋಜನೆಗೆ ಅನುಮೋದನೆ ಪಡೆಯಲಾಗಿದೆ.
೧೮.    ಹೀಗಿದ್ದರೂ ಕೂಡಾ, ನನ್ನ ಹಾಗೂ ನನ್ನ ಕುಟುಂಬದ ವಿರುದ್ಧ ಆಧಾರರಹಿತ ಆರೊಪಗಳನ್ನು ಮಾಡಿ ನನ್ನ ವರ್ಚಸ್ಸಿಗೆ ಧಕ್ಕೆ ತರುವ ಹಾಗೂ ಜನರಲ್ಲಿ ಸಂಶಯದ ಬೀಜ ಬಿತ್ತುವ ಕೆಲಸ ನಿರಂತರವಾಗಿ ನಡೆಯುತ್ತಿರುವುದು ವಿಷಾದನೀಯ.
೧೯.    ಅಲ್ಲದೆ, ಈ ಸಂಸ್ಥೆಗೂ ಶಾಸಕ ಹೇಮಚಂದ್ರ ಸಾಗರ್ ಅವರಿಗೂ ಪ್ರಸ್ತುತ ಯಾವುದೇ ಸಂಬಂಧವಿಲ್ಲ.
ಶ್ರೀಮತಿ ಉಮಾದೇವಿ ಅವರಿಗೆ ಜಮೀನು ಮಂಜೂರಾತಿ ವಿಚಾರ
೨೦.    ನನ್ನ ಮಗಳು ಶ್ರೀಮತಿ ಉಮಾದೇವಿ ಎಂ.ಕಾಂ ಪದವಿಧರೆ. ಸುಮಾರು ೧೨ ವರ್ಷ ಬಿಪಿಎಲ್ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ಅನುಭವ ಗಳಿಸಿದ್ದಾರೆ.
೨೧.    ಆ ಅನುಭವದ ಹಿನ್ನೆಲೆಯಲ್ಲಿ ಆರು ವರ್ಷಗಳಿಂದ ಅಂದರೆ ನಾವು ಅಧಿಕಾರಕ್ಕೆ ಬರುವ ಮೊದಲೇ ಕ್ಯಾನ್‌ಡೋರ್ ಬಿಸಿನೆಸ್ ಸಲ್ಯೂಷನ್ಸ್ ಪ್ರೈ.ಲಿ. ಎಂಬ ಬಿಪಿಒ ಸಂಸ್ಥೆ ನಡೆಸುತ್ತಿದ್ದಾರೆ.
೨೨.    ಈ ಸಂಸ್ಥೆಯ ವಿಸ್ತರಣೆಗಾಗಿ ಕೆಐಎಡಿಬಿಗೆ ಅರ್ಜಿ ಸಲ್ಲಿಸಿ ೨ ಎಕರೆ ಜಮೀನನ್ನು ಕೋರಿದ್ದು, ಮಂಜೂರಾಗಿದೆ. ಅದು ಬೆಂಗಳೂರಿನಿಂದ ಸುಮಾರು ೫೫ ಕಿ.ಮೀ. ದೂರದ ಹಾರೋಹಳ್ಳಿಯಲ್ಲಿದ್ದು, ಕಲ್ಲುಬಂಡೆಗಳಿಂದ ಕೂಡಿದೆ.
೨೩.    ನಿಜವಾಗಿ ನನ್ನ ಮಗಳಿಗೆ ಸಹಾಯ ಮಾಡಬೇಕೆಂಬುದು ನನ್ನ ಉದ್ದೇಶವಾಗಿದ್ದರೆ ೫೫ ಕಿ.ಮೀ. ದೂರದ ಕಲ್ಲುಬಂಡೆಗಳಿರುವ ಜಾಗ ನೀಡಬೇಕಿತ್ತೇ? ನೀವೇ ಯೋಚಿಸಿ.
ಡೀ-ನೋಟಿಫಿಕೇಷನ್ ವಿಚಾರ
೨೪.    ಬಿಡಿಎ ಹಾಗೂ ಕೆಐಎಡಿಬಿ ವಶಪಡಿಸಿಕೊಳ್ಳುವ ಖಾಸಗಿ ಭೂಮಿಯನ್ನು ನಾನಾ ಕಾರಣಗಳಿಗೆ ಡೀ-ನೋಟಿಫೈ ಮಾಡುವ ಪ್ರಕ್ರಿಯೆ ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿದೆ.
೨೫.    ಎಸ್.ಎಂ. ಕೃಷ್ಣ ಅವರ ಕಾಲದಲ್ಲಿ ಸುಮಾರು ೬೩೩ ಎಕರೆ, ಧರ್ಮಸಿಂಗ್ ಅವರ ಅವಧಿಯಲ್ಲಿ ೧೧೦ ಎಕರೆ, ಎಚ್.ಡಿ. ಕುಮಾರಸ್ವಾಮಿ ಅವರ ೨೦ ತಿಂಗಳ ಅವಧಿಯಲ್ಲಿ ೨೬೬ ಎಕರೆ ಹಾಗೂ ಸುಮಾರು ೮೦ ಎಕರೆ ಸಗಟು ವಿಶ್ವಭಾರತಿ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ, ರಾಷ್ಟ್ರಪತಿ ಆಡಳಿತದ ಅವಧಿಯಲ್ಲಿ ೧೨೪ ಎಕರೆ, ಇನ್ನು ನನ್ನ ಎರಡೂವರೆ ವರ್ಷದ ಅವಧಿಯಲ್ಲಿ ಸುಮಾರು ೨೫೯ ಎಕರೆ ಭೂಮಿಯನ್ನು ಡೀ-ನೋಟಿಫೈ ಮಾಡಲಾಗಿದೆ.
೨೬.    ನಮ್ಮ ಪಕ್ಷ ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ವಾಪಸ್ ಪಡೆಯುವ ಕೆಲವು ದಿನಗಳ ಮೊದಲು (೭-೧೦-೨೦೦೭) ಕುಮಾರಸ್ವಾಮಿ ಅವರು ಸುಮಾರು ೧೪೫ ಎಕರೆ ಜಮೀನನ್ನು ಒಂಬತ್ತು ಪ್ರಕರಣಗಳಲ್ಲಿ ಒಂದೇ ದಿನ ಭೂ ಸ್ವಾಧೀನದಿಂದ ಕೈ ಬಿಟ್ಟಿದ್ದಾರೆ.
೨೭.    ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರೂ ಕೂಡ ತಮ್ಮ ಹತ್ತಿರದ ಸಂಬಂಧಿ ಡಾ. ಪಿ. ಮಲ್ಲಿಕಾರ್ಜುನ ಸ್ವಾಮಿ ಎಂಬುವರಿಗೆ ಸೇರಿದ ಬೆಂಗಳೂರು ದಕ್ಷಿಣ ತಾಲ್ಲೂಕಿನ ಕೆಂಗೇರಿ ಹೋಬಳಿ ಕೆಂಚನಪುರ ಗ್ರಾಮದಲ್ಲಿ ಸುಮಾರು ಆರು ಎಕರೆ ಜಮೀನನ್ನು ಡೀ-ನೋಟಿಫೈ ಮಾಡುವಂತೆ ನನಗೆ ಶಿಫಾರಸು ಮಾಡಿದ್ದರು. ಅದರಂತೆ ಮಾಡಲಾಗಿದೆ.
೨೮.    ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಅವರ ಹಿರಿಯ ಸೋದರ ಬಾಲಕೃಷ್ಣ ಗೌಡರಿಗೆ ವೈಟ್‌ಫೀಲ್ಡ್‌ನಲ್ಲಿ ೬ ಎಕರೆ ಜಮೀನನ್ನು ಮಂಜೂರು ಮಾಡಿದ್ದಾರೆ.
೨೯.    ಆರ್.ವಿ. ದೇಶಪಾಂಡೆ ಅವರು ಕೈಗಾರಿಕಾ ಸಚಿವರಾಗಿದ್ದಾಗ ತಮ್ಮ ಪುತ್ರ ಪ್ರಸಾದ್ ಆರ್. ದೇಶಪಾಂಡೆ ಅವರಗೆ ವೈಟ್‌ಫೀಲ್ಡ್‌ನಲ್ಲಿ ಒಂದು ಎಕರೆ  ಜಮೀನನ್ನು ಮಂಜೂರು ಮಾಡಿದ್ದಾರೆ.
೩೦.     ಈ ಹಿರಿಯ ನಾಯಕರ ಹೆಸರುಗಳನ್ನು ಅನಗತ್ಯವಾಗಿ ಎಳೆದು ತರುವ ಉದ್ದೇಶ ನನಗಿಲ್ಲ. ಆದರೆ, ಬಹಳ ಹಿಂದಿನಿಂದಲೂ ಡಿ-ನೋಟಿಫಿಕೇಷನ್ ಮಾಡುವುದು, ಕೈಗಾರಿಕಾ ಉದ್ದೇಶಕ್ಕಾಗಿ ಸಂಸ್ಥೆಗಳಿಗೆ ಹಾಗೂ ವ್ಯಕ್ತಿಗಳಿಗೆ ಕೈಗಾರಿಕಾ ಪ್ರದೇಶದಲ್ಲಿ ಜಮೀನು ಮಂಜೂರು ಮಾಡುವುದು ನಿರಂತರವಾಗಿ ನಡೆದುಕೊಂಡು ಬಂದಿದೆ.
೩೧.    ಆದ್ದರಿಂದ ನನ್ನ ಮಕ್ಕಳು ಕೆಐಎಡಿಬಿಯಿಂದ ಜಮೀನು ಪಡೆದಿರುವುದರಲ್ಲಿ ನನ್ನ ಪಾತ್ರವಾಗಲೀ, ಅಥವಾ ಸ್ವಜನಪಕ್ಷಪಾತವಾಗಲೀ, ಇಲ್ಲವೇ ಕಾನೂನಿನ ಉಲ್ಲಂಘನೆಯಾಗಲೀ ನಡೆದಿಲ್ಲ.
೩೨.    ಡೀ-ನೋಟಿಫಿಕೇಷನ್ ಕೋರಿ ಬರಲಿರುವ ಅರ್ಜಿಗಳ ಪರಿಶೀಲಿಸಿ ಸರ್ಕಾರಕ್ಕೆ ಶಿಫಾರಸು ಮಾಡಲು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುಬೀರ್ ಹರಿಸಿಂಗ್ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿದೆ.
ಅಭಿವೃದ್ಧಿ ಕಾರ್ಯಗಳ ಕುರಿತು
೩೩.    ನನ್ನ ನಾಯಕತ್ವದಲ್ಲಿ ವಿಧಾನ ಸಭಾ ಚುನಾವಣೆ ನಡೆದು, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಡೆದ ಎಲ್ಲಾ ಚುನಾವಣೆಗಳಲ್ಲಿ ಬಿಜೆಪಿ ಜಯಭೇರಿ ಸಾಧಿಸಿರುವುದು, ಎರಡೂವರೆ ವರ್ಷದ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳು, ಭಾಗ್ಯಲಕ್ಷ್ಮಿ ಯೋಜನೆ ಜನಪ್ರಿಯತೆ, ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದ ಯಶಸ್ಸು- ಮುಂತಾದವುಗಳು ವಿರೋಧಿಗಳಿಗೆ ನುಂಗಲಾರದ ತುತ್ತಾಗಿವೆ.
೩೪.    ಕಳೆದ ಎರಡೂವರೆ ವರ್ಷದಿಂದ ಜನಪರ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ. ಇದಕ್ಕೆ ರಾಜ್ಯದ ಜನತೆ ಮಾನ್ಯತೆ ನೀಡಿದ್ದಾರೆ. ಉಳಿದ ಎರಡೂವರೆ ವರ್ಷದ ಅವಧಿಯಲ್ಲಿ ನನ್ನ ನಾಯಕತ್ವದಲ್ಲಿ ಸರ್ಕಾರ ಮುಂದುವರಿದು ನಿರಂತರವಾಗಿ ಅಭಿವೃದ್ಧಿ ನಡೆದು ರಾಜ್ಯವನ್ನು ಮಾದರಿ ರಾಜ್ಯವನ್ನಾಗಿ ಮಾಡಲು ಕಂಕಣಬದ್ಧನಾಗಿದ್ದೇನೆ.
೩೫.    ಸ್ವಾತಂತ್ರ್ಯಾನಂತರ ದೇಶದಲ್ಲಿ ಯಾರೂ ಜಾರಿಗೆ ತರದ ’ಭಾಗ್ಯಲಕ್ಷ್ಮಿ’ ಯೋಜನೆಯನ್ನು ಅನುಷ್ಠಾನಗೊಳಿಸಿದ ಕೀರ್ತಿ ನನ್ನದು. ಇದನ್ನು ಈಗ ಎಲ್ಲಾ ರಾಜ್ಯಗಳು ಜಾರಿಗೆ ತರಲು ತಾ ಮುಂದು ನಾ ಮುಂದು ಎಂದು ಅಧ್ಯಯನಕ್ಕಾಗಿ ಕರ್ನಾಟಕಕ್ಕೆ ಬರುತ್ತಿವೆ. ಇದು ಹೆಮ್ಮೆಯ ವಿಚಾರವಲ್ಲವೇ?
ಭಾಗ್ಯಲಕ್ಷ್ಮಿ ಯಶಸ್ಸು
೩೬.    ದೇಶವೇ ಈ ಯೋಜನೆಯನ್ನು ಕೊಂಡಾಡುತ್ತಿರುವಾಗ ಹಾಗೂ ’ಭಾಗ್ಯಲಕ್ಷ್ಮಿ’ ಯೋಜನೆಗೆ ಮಹಿಳೆಯರು ಸ್ಪಂದಿಸುತ್ತಿರುವ ರೀತಿಯಿಂದ ಕಂಗಾಲಾದ ಜೆಡಿಎಸ್ ನಾಯಕರು ಸೀರೆ ಖರೀದಿಯಲ್ಲಿ ಲಂಚ ಹೊಡೆಯಲಾಗಿದೆ ಎಂದು ಸತ್ಯಕ್ಕೆ ದೂರವಾದ ಆರೋಪ ಮಾಡುತ್ತಿದ್ದಾರೆ.
೩೭.    ವಿರೋಧ ಪಕ್ಷಗಳವರು ಅಭಿವೃದ್ಧಿ ಕಾರ್ಯಗಳ ಬಗ್ಗೆ ವಿಧಾನಸಭಾ ಅಧಿವೇಶನದಲ್ಲಿ ಚರ್ಚಿಸುವುದನ್ನು ಬಿಟ್ಟು ಸದಾ ಧರಣಿ ಸತ್ಯಾಗ್ರಹದಲ್ಲಿ ನಿರತರಾಗಿದ್ದಾರೆ. ನಮ್ಮ ಕೆಲಸಗಳು ಜನರ ಮನಸ್ಸಿಗೆ ಮುಟ್ಟಬಾರದು ಎಂಬ ಪ್ರವೃತ್ತಿ ಅವರದ್ದು. ಹೀಗಾಗಿ ’ಭಾಗ್ಯಲಕ್ಷ್ಮಿ’ ಯೋಜನೆಗೆ ಮಂಡ್ಯ, ಹಾಸನದಲ್ಲಿ ಅಡ್ಡಿ ಮಾಡಿದರು. ಆದರೆ, ಅವರ ಧಮಕಿಗೆ ಜಗ್ಗದೇ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
೩೮.    ನಮ್ಮ ಸರ್ಕಾರದ ಆಡಳಿತಕ್ಕೆ ಹೊಸ ತಿರುವು ನೀಡಿದ ’ಜಿಮ್’ಗೂ ಕೂಡ ವಿರೋಧ ಪಕ್ಷದವರು ಅಸಹಕಾರ ನೀಡಿದರು.
೩೯.    ’ಜಿಮ್’ ಸಾಧನೆ, ಭಾಗ್ಯಲಕ್ಷ್ಮಿ ಯೋಜನೆಯ ಜನಪ್ರಿಯತೆ ವಿಚಾರಗಳ ಬಗ್ಗೆ ಕಿರುಹೊತ್ತಿಗೆ ತಯಾರಿಸಿ ಎಲ್ಲ ಸಂಸದರಿಗೆ ತಲುಪಿಸಿದ್ದೇನೆ. ಅದನ್ನು ಅವರು ಪರಾಮರ್ಶಿಸಿ ಸಲಹೆ ಸೂಚನೆಗಳನ್ನು ಕೊಟ್ಟರೆ ಅದನ್ನೂ ಜಾರಿಗೊಳಿಸುತ್ತೇನೆ.
೪೦.    ವಿದ್ಯುತ್ ಉತ್ಪಾದನೆ ವಿಚಾರದಲ್ಲಿ ಇನ್ನು ನಾಲ್ಕೈದು ವರ್ಷದಲ್ಲಿ ಬೇಡಿಕೆ ಪೂರೈಸುವಷ್ಟು ಉತ್ಪಾದನೆ ಮಾಡುವ ಗುರಿ ಹಾಗೂ ಯೋಜನೆಗಳನ್ನು ಹೊಂದಲಾಗಿದೆ.
ಅಭಿವೃದ್ಧಿಯಲ್ಲಿ ಎರಡನೇ ಸ್ಥಾನ
೪೧.    ರಾಜ್ಯದ ನೀರಾವರಿ, ಗ್ರಾಮೀಣಾಭಿವೃದ್ಧಿ, ಹಣಕಾಸು ನಿರ್ವಹಣೆ, ಸಾಮಾಜಿಕ ನ್ಯಾಯಕ್ಕೆ ಆದ್ಯತೆ ಕೊಟ್ಟಿದ್ದೇವೆ. ಇದರ ಪ್ರತಿಫಲ ಎಂಬುವಂತೆ ೨೦ ಅಂಶಗಳ ಕಾರ್ಯಕ್ರಮದ ಅನುಷ್ಠಾನದಲ್ಲಿ ಕರ್ನಾಟಕಕ್ಕೆ ೨ನೇ ಸ್ಥಾನ ಬಂದಿದೆ. ಈ ಹಿಂದೆ ೨೦೦೮ ಮತ್ತು ೨೦೦೯ರಲ್ಲಿ ಕ್ರಮವಾಗಿ ೧೨ ಮತ್ತು ಮತ್ತು ೭ನೇ ಸ್ಥಾನದಲ್ಲಿತ್ತು.
೪೨.    ಅಕ್ರಮ ಗಣಿಗಾರಿಕೆ ತಡೆಯಲು ಹಾಗೂ ಅರಣ್ಯ ಸಂಪತ್ತಿನ ರಕ್ಷಣೆ ವಿಚಾರದಲ್ಲಿ ನಾನು ವಿಶೇಷ ನೀತಿಯೊಂದನ್ನು ತಂದಿದ್ದೇನೆ. ಆದರೆ, ಹಿಂದೆಲ್ಲಾ ಈ ದಂಧೆ ಬಗ್ಗೆ ಕಣ್ಮುಚ್ಚಿ ಕುಳಿತಿದ್ದ ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರು ಈಗ ನಿದ್ದೆಯಿಂದ ಎದ್ದವರಂತೆ ಹೌಹಾರುತ್ತಿದ್ದಾರೆ.
ಕಾಂಗ್ರೆಸ್ ನಾಯಕರ ಪಾದಯಾತ್ರೆ
೪೩.    ಅಕ್ರಮ ಗಣಿಗಾರಿಕೆ ಹಾಗೂ ಗಣಿ ಸಂಪತ್ತಿನ ಲೂಟಿ ತಡೆಯುತ್ತೇವೆಂದು ಬೆಂಗಳೂರಿನಿಂದ ಬಳ್ಳಾರಿ ವರೆಗೆ ಕಾಂಗ್ರೆಸ್ ನಾಯಕರು ಪಾದಯಾತ್ರೆ (ದಂಡಯಾತ್ರೆ) ಮಾಡಿದರು. ಈಗ ಆ ವಿಚಾರದಲ್ಲಿ ಸೊಲ್ಲೇ ಇಲ್ಲ.
೪೪.    ’ನೈಸ್’ ಬಗ್ಗೆ ಜೆಡಿಎಸ್ ನಾಯಕರು ರೈತರ ಹೆಸರಿನಲ್ಲಿ ಆಡಿದ ನಾಟಕಕ್ಕೆ ಕೊನೆ ಇಲ್ಲ. ಈಗ ಆ ವಿಚಾರವೇ ಇಲ್ಲ.
ಉಚಿತ ಸೈಕಲ್ ನೀಡಿಕೆ
೪೫.    ಇನ್ನು ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ನೀಡುವ ಯೋಜನೆ ಜಾರಿಗೆ ತಂದೆ. ಅದರಲ್ಲಿ ಕಮಿಷನ್ ಹೊಡೆಯಲಾಗಿದೆ ಎಂದು ಹುಯಿಲೆಬ್ಬಿಸಿದರು. ಅವರ ಆರೋಪವನ್ನು ಸವಾಲಾಗಿ ಸ್ವೀಕರಿಸಿ, ಹಿರಿಯ ನಾಯಕ ಎಂ.ಸಿ. ನಾಣಯ್ಯ ಅವರ ನೇತೃತ್ವದಲ್ಲಿ ತನಿಖಾ ಸಮಿತಿಯೊಂದನ್ನು ರಚಿಸಿದೆ. ಆದರೆ, ತನಿಖೆಯ ಮೊದಲೇ ಆರೋಪದಲ್ಲಿ ಹುರುಳಿಲ್ಲ ಎಂಬುದನ್ನು ಅರಿತ ನಾಣಯ್ಯ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಕೈ ತೊಳೆದುಕೊಂಡರು.
೪೬.    ನನ್ನ ಹಾಗೂ ನನ್ನ ಸರ್ಕಾರದ ಜನಪ್ರಿಯತೆ ಸಹಿಸದ ವಿರೋಧ ಪಕ್ಷದ ನಾಯಕರುಗಳು ಹಾಗೂ ಮಾಜಿ ಮುಖ್ಯಮಂತ್ರಿಗಳು, ಕಾಂಗ್ರೆಸ್ ಮುಖಂಡರು ನನ್ನ ವಿರುದ್ಧ ’ಲೂಟಿ ಹೊಡೆಯುತ್ತಾರೆ, ಕೊಳ್ಳೆ ಹೊಡೆಯುತ್ತಾರೆ, ಬೊಕ್ಕಸ ಬರಿದಾಗಿದೆ’- ಹೀಗೆಲ್ಲಾ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ.
೪೭.    ಒಂದು ಸುಳ್ಳನ್ನು ಹತ್ತಾರು ಬಾರಿ ಹೇಳಿದರೆ ಅದು ಸತ್ಯವೆಂದು ಜನ ನಂಬುತ್ತಾರೆ ಎಂಬ ಭ್ರಮೆ ಇವರದ್ದು.
೪೮.    ಎಲ್ಲ ರೀತಿಯ ಅಗ್ನಿ ಪರೀಕ್ಷೆಗಳನ್ನೂ ಗೆದ್ದು ಅಭಿವೃದ್ಧಿ ಕಾರ್ಯಗಳನ್ನು ಎಂದಿನಂತೆ ಮಾಡುತ್ತಿರುವ ಈ ಯಡಿಯೂರಪ್ಪನವರ ನಾಗಾಲೋಟಕ್ಕೆ ಕಡಿವಾಣ ಹಾಕಬೇಕೆಂದು ನಿರಂತರವಾಗಿ ಅಡ್ಡಿ ಆತಂಕಗಳನ್ನು ಒಡ್ಡುತ್ತಿದ್ದಾರೆ.
೪೯.    ಜೆಡಿಎಸ್ ಕಾಂಗ್ರೆಸ್ ನಾಯಕರು ನಮ್ಮ ಶಾಸಕರನ್ನು ಚೆನ್ನೈ, ಗೋವಾ- ಹೀಗೆ ಬಲವಂತವಾಗಿ ಕರೆದೊಯ್ದು ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸಲು ಮಾಡಿದ ಪ್ರಯತ್ನದಿಂದ ಕೈಸುಟ್ಟುಕೊಂಡರು.
ಮಾದರಿ ರಾಜ್ಯ ಮಾಡುವ ಕನಸು
೫೦.    ಆದರೂ ಇದಕ್ಕೆಲ್ಲ ಜಗ್ಗುವವನು ನಾನಲ್ಲ. ಇನ್ನೂ ಎರಡೂವರೆ ವರ್ಷ ಕಾಲ ಮುಖ್ಯಮಂತ್ರಿಯಾಗಿ ಮುಂದುವರಿದು ರಾಜ್ಯವನ್ನು ರಾಷ್ಟ್ರದಲ್ಲಿಯೇ ಮಾದರಿ ರಾಜ್ಯವನ್ನಾಗಿ ಮಾಡುವ ದೃಢ ನಿರ್ಧಾರ ಮಾಡಿದ್ದೇನೆ.
ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಯವರಿಂದ ತನಿಖೆಗೆ ಸಿದ್ಧ
೫೧.    ನನ್ನ ಕುಟುಂಬದ ಸದಸ್ಯರಿಗೆ ನೀಡಿರುವ ಜಮೀನೂ ಸೇರಿದಂತೆ ಕಳೆದ ೧೦ ವರ್ಷಗಳಲ್ಲಿ ರಾಜ್ಯದಲ್ಲಿ ನಡೆದಿರುವ ಡಿ-ನೋಟಿಫಿಕೇಷನ್, ಗೋಮಾಳ, ಕೆರೆದಂಡೆ ಇತರ ಸರ್ಕಾರಿ ಭೂಮಿಯನ್ನು ದರಕಾಸು ಮೂಲಕ ಮಂಜೂರು ಮಾಡಿಸಿಕೊಂಡಿರುವ ಎಲ್ಲ ಪಕ್ಷದ ನಾಯಕರ ವಿಚಾರ ಸೇರಿದಂತೆ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳಿಂದ ಸಮಗ್ರ ತನಿಖೆ ನಡೆಸಲೂ ಸಿದ್ಧ.
೫೨.    ಜೊತೆಗೆ, ಈ ಡಿ-ನೋಟಿಫಿಕೇಷನ್, ಕೈಗಾರಿಕೆಗಳ ಸ್ಥಾಪನೆ ಉದ್ದೇಶದಿಂದ ಕೆಐಎಡಿಬಿ ಮೂಲಕ ನೀಡಿರುವ ಜಮೀನು ಹಾಗೂ ಜಿ-ಕೆಟಗರಿಯಲ್ಲಿ ನಿವೇಶನ ಹಂಚಿಕೆ- ಈ ಎಲ್ಲ ವಿಚಾರಗಳ ಕುರಿತು ಕಳೆದ ೧೦ ವರ್ಷಗಳಲ್ಲಿ ನಡೆದಿರುವ ವ್ಯವಹಾರ ಕುರಿತು ಮುಂದಿನ ಅಧಿವೇಶನಲ್ಲಿ ಚರ್ಚಿಸಲು ಸಿದ್ಧನಿದ್ದೇನೆ.
೫೩.    ತನಿಖೆಗೆ ಆದೇಶಿಸುವ ಮೊದಲು ವಿರೋಧ ಪಕ್ಷಗಳ ನಾಯಕರ ಸಭೆ ಕರೆದು ಸಮಾಲೋಚಿಸಿ, ಅವರ ಸಲಹೆ ಸೂಚನೆಯಂತೆ ನಿರ್ಧಾರ ಕೈಗೊಳ್ಳಲಿದ್ದೇನೆ.
೫೪.    ಈಗ ಪತ್ರಿಕಾ ಗೋಷ್ಠಿಯಲ್ಲಿ ಬಿಡುಗಡೆ ಮಾಡಿರುವ ದಾಖಲೆಗಳು ಕೇವಲ ಕೆಲವೇ ದಾಖಲೆಗಳು. ಇನ್ನೂ ಇನ್ನೂ ನನ್ನ ಬಳಿ ಸಾಕಷ್ಟು ದಾಖಲೆಗಳಿವೆ. ಆ ಎಲ್ಲಾ ದಾಖಲೆಗಳನ್ನು ತನಿಖೆ ಸಂದರ್ಭದಲ್ಲಿ ಒದಗಿಸುತ್ತೇನೆ. ವಿರೋಧ ಪಕ್ಷದವರೂ ಕೂಡ ತಮ್ಮಲ್ಲಿರುವ ದಾಖಲೆಗಳನ್ನು ಈ ಉದ್ದೇಶಿತ ತನಿಖಾ ಸಮಿತಿಗೆ ನೀಡಲಿ. ಸತ್ಯಾಂಶ ಜನತೆಗೆ ತಿಳಿಯಲಿ.
೫೫.    ತನಿಖಾ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳುವ ಮೂಲಕ ಈ ವಿವಾದಗಳಿಗೆ ಇತಿಶ್ರೀ ಹಾಡಬೇಕೆಂದಿದ್ದೇನೆ.