ನಾನು ಸಹಕಾರ ಬಯಸುತ್ತೇನೆಯೇ ವಿನಃ ಅಸಹಕಾರವನ್ನಲ್ಲ: ಶ್ರೀ ಯಡಿಯೂರಪ್ಪ

ನವದೆಹಲಿ: ಜೂನ್, ೨: ಹೊಸ ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ಸಂಪೂರ್ಣ ಸಹಕಾರವನ್ನು ನಾನು ನಿರೀಕ್ಷಿಸುತ್ತೇನೆಯೇ ವಿನಃ ಪ್ರತಿಪಕ್ಷಗಳ ಅಸಕಾರವನ್ನಲ್ಲ ಎಂದು ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪ ಅವರು ಇಂದಿಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಕರ್ನಾಟಕ ಮುಂದಿನ ದಿನಗಳಲ್ಲಿ ಸಮಗ್ರತೆಯ ಏಳಿಗೆಯನ್ನು ಕಾಣಲು ಎಲ್ಲಾ ಪಕ್ಷದವರ ಸಹಕಾರ ಅಗತ್ಯ. ಮೊದಲಿನ ಸರಕಾರದ ಅವಧಿಗಳಲ್ಲಿ ಆದ ಅವ್ಯವಹಾರ, ಭ್ರಷ್ಟಾಚಾರ ತನಿಖೆಗೆ ಆದ್ಯತೆಯನ್ನು ನೀಡಲಾಗುವುದು ಎಂದು ತಿಳಿಸಿದರು. ಅಭಿವೃದ್ಧಿಯ ಹಿತ ದೃಷ್ಟಿಯಿಂದ ಎಲ್ಲಾ ಭ್ರಷ್ಟಾಚಾರವನ್ನೂ ತನಿಖೆಮಾಡಲಾಗುವುದು. ಇದರಲ್ಲಿ ಯಾವುದೇ ರಾಜಿ ಇಲ್ಲ ಎಂದು ಇಂದಿಲ್ಲಿ ಒತ್ತಿ ಹೇಳಿದರು.

ಶ್ರೀ ಜಗದೀಶ್ ಶೆಟ್ಟರರ ಸಭಾಪತಿ ಹುದ್ದೆಯ ತಿರಸ್ಕಾರದ ಬಗೆಗೆ ಕೇಳಿದಾಗ, ಕಾದು ನೋಡಿ ಎಂದಷ್ಟೇ ಹೇಳಿದರು. ಖಾತೆಹಂಚಿಕೆಯ ಬಗೆಗೆ ಇರುವ ಗೊಂದಲದ ಬಗೆಗೆ ಸುದ್ದಿಗಾರರು ಪ್ರಶ್ನಿಸಿದಾಗ, ಕಾದು ನೋಡಿ, ಮುಂದಿನ ದಿನಗಳಲ್ಲಿ ಎಲ್ಲವೂ ಸರಳವಾಗಿ ಇತ್ಯರ್ಥವಾಗಲಿದೆ ಎಂದು ತಿಳಿಸಿದರು.

ಇತರ ಶಾಸಕರ ಓಲೈಕೆ ಯ ಬಗೆಗೆ ಕೇಳಿದಾಗ, ಸರಕಾರಕ್ಕೆ ನೇರ ಬಹುಮತ ಇಲ್ಲದ ಕಾರನ ಇಂತಹ ಕಾರ್ಯ ಅನಿವಾರ್ಯ ಎಂದು ತಿಳಿಸಿದರು. “ಮುಖ್ಯಮಂತ್ರಿ ಎಂಬುದು ಅಧಿಕಾರ ಎಂದು ಪರಿಗಣಿಸುವುದಿಲ್ಲ, ಬದಲಾಗಿ ಅದೊಂದು ಅವಕಾಶ, ಕರ್ನಾಟಕದ ಜನಸೇವೆಗೆ ಒಂದು ಅವಕಾಶ ಎಂದು ಸ್ವೀಕರಿಸುತ್ತೇನೆ. ಬಹುಮತದ ನಿರ್ಧಾರದಲ್ಲಿ ನನ್ನ ನಂಬಿಕೆ. ಎಲ್ಲರ ಅಭಿಪ್ರಾಯಗಳಂತೆ ಒಟ್ಟಾಗಿ ಕೆಲಸ ಮಾಡುತ್ತೇನೆ- ಎಂದು ತಿಳಿಸಿದರು.

ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ಎಲ್ಲಾ ಪಕ್ಷದವರ ಸಂಪೂರ್ಣ ಸಹಕಾರಕ್ಕಾಗಿ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ ಎಂದು ತಿಳಿಸಿದರು.

ಕಾವೇರಿ, ಹೊಗೇನಕಲ್ ಇತ್ಯಾದಿ ವಿಚಾರಗಳ ಬಗೆಗೆ ನಿರ್ಧಾರ ತೆಗೆದುಕೊಳ್ಳಲು ಸರ್ವಪಕ್ಷ ಸಭೆಯನ್ನು ಕರೆಯುವುದಾಗಿ ಘೋಷಿಸಿದರು.

ಡಾ. ಡಿ.ಎಂ.ನಂಜುಂಡಪ್ಪ ಸಮಿತಿಯ ವರದಿ ಅನುಷ್ಠಾನಕ್ಕಾಗಿ, ಶಕ್ತಿಮೀರಿ ಶ್ರಮಿಸುವುದಾಗಿ ಅವರು ತಿಳಿಸಿದರು. ಬೆಂಗಳೂರಿನ ಅಭಿವೃದ್ಧಿಯು ಮುಖ್ಯವಾಹಿನಿಯಾಗಿದ್ದು, ಜಗತ್ತಿನ ಮುಖ್ಯನಗರಿಯಾಗಿ ಅಭಿವೃದ್ಧಿಪಡಿಸಲು ಎಲ್ಲಾ ಶ್ರಮವಹಿಸಲಾಗುವುದು ಎಂದು ತಿಳಿಸಿದರು.

Leave a Reply