ಕ್ರೈಸ್ತ ಸಂಘಗಳ ನಿಯೋಗದಿಂದ ಮುಖ್ಯಮಂತ್ರಿಗಳ ಭೇಟಿ

ಪತ್ರಿಕಾ ಪ್ರಕಟಣೆ

ಕ್ರೈಸ್ತ ಸಂಘಗಳ ನಿಯೋಗದಿಂದ ಮುಖ್ಯಮಂತ್ರಿಗಳ ಭೇಟಿ

ಕರ್ನಾಟಕ ಕ್ರೈಸ್ತ ಸಂಘಗಳ ಅಂತಾರಾಷ್ಟ್ರೀಯ ಒಕ್ಕೂಟದ ಅಧ್ಯಕ್ಷರಾದ ಶ್ರೀ ರೋನಾಲ್ಡ್ ಕೊಲಾಕೋ ರವರ ಮುಖಂಡತ್ವದಲ್ಲಿ ಕ್ರಿಶ್ಚಿಯನ್‌ರ ನಿಯೋಗವೊಂದು    ೧೭-೦೨-೨೦೧೧ರಂದು ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪರವರನ್ನು ಭೇಟಿ ಮಾಡಿ ಕ್ರಿಶ್ಚಿಯನ್‌ರ ವಿರುದ್ಧ ದಾಖಲಿಸಿರುವ ವಿವಿಧ ನ್ಯಾಯಾಂಗ ಪ್ರಕರಣಗಳನ್ನು ಹಿಂತೆಗೆದುಕೊಳ್ಳುವಂತೆ ಮನವಿ ಮಾಡಿತು.

ಕರ್ನಾಟಕ ರಾಜ್ಯದ ಕ್ರೈಸ್ತ ಸಂಸ್ಥೆಗಳು ಬಲವಂತದ ಮತಾಂತರ ಮಾಡುತ್ತಿವೆ ಎಂದು ಅಲ್ಲಲ್ಲಿ ಪ್ರಸ್ತಾಪವಾಗುತ್ತಿರುವ ಅಂಶ ಆಧಾರರಹಿತ ಎಂದು ಪ್ರತಿಪಾದಿಸಿದ ನಿಯೋಗದ ಸದಸ್ಯರು ಒಂದು ವೇಳೆ ಹಾಗೆ ಬಲವಂತದ ಮತಾಂತರ ವಾಗಿದ್ದಲ್ಲಿ ೧೯೮೧ರ ಜನ ಗಣತಿಯ ಪ್ರಕಾರ ಒಟ್ಟು ಜನಸಂಖ್ಯೆಯ ಶೇ.೨.೪೩ರಷ್ಟು ಇದ್ದ ಕ್ರಿಶ್ಚಿಯನ್‌ರ ಸಂಖ್ಯೆ ೨೦೦೧ರ ಜನ ಗಣತಿಯಲ್ಲಿ ಶೇ.೨.೨೫ಕ್ಕೆ ಇಳಿಯುತ್ತಿರಲಿಲ್ಲ ಎಂಬ ಅಂಶವನ್ನು ಮನವರಿಕೆ ಮಾಡಿಕೊಟ್ಟರು.

ರಾಜ್ಯದ ಕ್ರಿಶ್ಚಿಯನ್ ಸಮುದಾಯದವರು ಮುಖ್ಯ ವಾಹಿನಿಯೊಂದಿಗೆ ಬೆರೆತು ಸಾಮರಸ್ಯದಿಂದ ಬದುಕುತ್ತಿದ್ದಾರೆ, ೨೦೦೮ರ ಸೆಪ್ಟೆಂಬರ್‌ನಲ್ಲಿ ರಾಜ್ಯದ ವಿವಿದೆಡೆ ಚರ್ಚ್‌ಗಳ ಮೇಲೆ ದಾಳಿಯಾದ ಸಂದರ್ಭದಲ್ಲಿ ಒಟ್ಟು ೩೩೮ ಕ್ರಿಶ್ಚಿಯನ್‌ರ ಮೇಲೆ ೨೬ ಪ್ರಕರಣಗಳನ್ನು ದಾಖಲು ಮಾಡಿದ್ದು, ಇವುಗಳನ್ನು ಹಿಂತೆಗೆದುಕೊಳ್ಳುವುದಾಗಿ ಈಗಾಗಲೇ ಮುಖ್ಯಮಂತ್ರಿಗಳು ಭರವಸೆ ಇತ್ತಿದ್ದರೂ ಅದು ಈವರೆಗೆ ಈಡೇರಿಲ್ಲ. ಆದ್ದರಿಂದ ಆ ಎಲ್ಲಾ ಪ್ರಕರಣಗಳನ್ನು ಶೀಘ್ರವಾಗಿ ಹಿಂತೆಗೆದುಕೊಳ್ಳುವಂತೆ ನಿಯೋಗದ ಸದಸ್ಯರು ಮನವಿ ಮಾಡಿದರು.

ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದ ನಿಯೋಗದಲ್ಲಿ ಕರ್ನಾಟಕ ಕ್ರೈಸ್ತ ಸಂಘಗಳ ಅಂತಾರಾಷ್ಟ್ರೀಯ ಒಕ್ಕೂಟದ ಅಧ್ಯಕ್ಷರಾದ ಶ್ರೀ ರೋನಾಲ್ಡ್ ಕೊಲಾಕೋ, ರಾಜ್ಯ ಸಂಚಾಲಕರಾದ ಶ್ರೀ ಡೆನ್ನೀಸ್ ಡಿಸಿಲ್ವ, ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಮೈಖೇಲ್ ಬ್ಯಾಪ್‌ಟಿಸ್ಟ್, ಕರ್ನಾಟಕ ಕ್ರೈಸ್ತ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀ ವೆಲೇರಿಯನ್ ಫರ್ನಾಂಡೀಸ್ ರವರೊಂದಿಗೆ ಕೋಲಾರ ಹಾಗೂ ಉಡುಪಿಗಳಿಂದ ಬಂದಿದ್ದ ಪ್ರತಿನಿಧಿಗಳಿದ್ದರು. ನಿಯೋಗದ ಮನವಿಯನ್ನು ಆಲಿಸಿದ ಮುಖ್ಯಮಂತ್ರಿಗಳು ಆದಷ್ಟು ಶೀಘ್ರವಾಗಿ ಪ್ರಕರಣಗಳನ್ನು ಹಿಂತೆಗೆದುಕೊಳ್ಳುವ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
—————————————————-

Leave a Reply